ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವು ರಕ್ಷಿಸುವ ‘ಸ್ನೇಕ್‌ ಅಸ್ಲಂ’

ಏಳು ಸಾವಿರಕ್ಕೂ ಅಧಿಕ ಹಾವುಗಳನ್ನು ಸಂರಕ್ಷಿಸಿ ಕಾಡಿಗೆ ಬಿಟ್ಟ ಕೀರ್ತಿ
Last Updated 29 ಜೂನ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಹಾವು ನೋಡಿದರೆ ಎಂತಹವರು ಒಂದು ಕ್ಷಣ ಹೆದರುತ್ತಾರೆ. ಮೈಮೇಲಿನ ರೋಮಗಳು ಎದ್ದು ನಿಲ್ಲುತ್ತವೆ. ಆದರೆ, ಇಲ್ಲಿನ ಮೆಹಬೂಬ್‌ ನಗರದ ನಿವಾಸಿ ಎಸ್‌.ಎಂ. ಅಸ್ಲಂ ಅವರಿಗೆ ಹಾವುಗಳೆಂದರೆ ಬಹಳ ಪ್ರೀತಿ.ಎಲ್ಲೇ ಹಾವು ಬಂದ ಸುದ್ದಿ ಕಿವಿಗೆ ಬಿದ್ದರೆ ತಕ್ಷಣವೇ ಅಲ್ಲಿಗೆ ಹೋಗಿ ಅದನ್ನು ರಕ್ಷಿಸುತ್ತಾರೆ.

ವೃತ್ತಿಯಿಂದ ಆಟೊ ಚಾಲಕರಾಗಿರುವ ಅಸ್ಲಂ ಅವರಿಗೆ ಹಾವು ಸಂರಕ್ಷಿಸುವುದು ಪ್ರವೃತ್ತಿ. ಅಂದಹಾಗೆ, ಅಸ್ಲಂ ಅವರಿಗೆ ಹಾವು ಹಿಡಿದು, ಅವುಗಳನ್ನು ಸಂರಕ್ಷಿಸುವ ಹವ್ಯಾಸ ಬೆಳೆದದ್ದು ನಿನ್ನೆ, ಮೊನ್ನೆಯಲ್ಲ. ಬರೋಬ್ಬರಿ 14 ವರ್ಷಗಳಿಂದ ಎನ್ನುವುದು ವಿಶೇಷ.

ಕಳೆದ 14 ವರ್ಷಗಳಲ್ಲಿ ಅಸ್ಲಂ ಅವರು ಏಳು ಸಾವಿರಕ್ಕೂ ಅಧಿಕ ಹಾವುಗಳನ್ನು ಸಂರಕ್ಷಿಸಿದ್ದಾರೆ. ಹೊಟ್ಟೆ ಪಾಡಿಗಾಗಿ ಆಟೊ ಓಡಿಸಿ, ಬದುಕು ನಡೆಸುತ್ತಿರುವ ಅವರು, ಅದರ ನಡುವೆಯೇ ನಗರದಲ್ಲಿ ನಿತ್ಯ ನಾಲ್ಕೈದು ಹಾವುಗಳನ್ನು ಸಂರಕ್ಷಿಸಿ, ಅವುಗಳನ್ನು ಅರಣ್ಯದಲ್ಲಿ ಬಿಡುತ್ತಾರೆ. ಕಳೆದ ಒಂದು ವಾರದಲ್ಲಿ ನಗರದ ವಾರ್ತಾ ಇಲಾಖೆಯ ಕಚೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಒಟ್ಟು 30ಕ್ಕೂ ಅಧಿಕ ಹಾವುಗಳನ್ನು ಸಂರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

ನಗರದ ಯಾವುದೇ ಮನೆ, ಮಳಿಗೆ, ಕಚೇರಿ, ಹೊಲ–ಗದ್ದೆಗಳಲ್ಲಿ ಹಾವು ಬಂದರೆ ತಕ್ಷಣವೇ ಎಲ್ಲರಿಗೂ ನೆನಪಾಗುವುದು ‘ಸ್ನೇಕ್‌ ಅಸ್ಲಂ’. ಅಷ್ಟರಮಟ್ಟಿಗೆ ಹೆಸರು ಮಾಡಿದ್ದಾರೆ. ಇಷ್ಟೇ ಅಲ್ಲ, ಹೊಸಪೇಟೆ ನಗರ ಹಾಗೂ ಸುತ್ತಮುತ್ತ 30 ಜಾತಿಯ ಹಾವುಗಳಿವೆ. ಅದರಲ್ಲೂ ಬಹಳ ಅಪರೂಪವಾಗಿ ಸಿಗುವ ‘ಕೌಂಡನರೂಸ್‌ ಸ್ಯಾಂಡ್‌ ಸ್ನೇಕ್‌‘, ‘ಎಲ್ಲೋ ಕಾಲರ್ಡ್‌ ಉಲ್ಪ್‌ ಸ್ನೇಕ್‌’, ‘ಗ್ರೀನ್‌ ಎಲ್ಲೋ ಕ್ಯಾಟ್‌ ಸ್ನೇಕ್‌’, ‘ಫಾರಿಸ್ಟನ್‌ ಕ್ಯಾಟ್‌ಸ್ನೇಕ್‌’, ‘ಬ್ರೈಡಲ್‌ ಸ್ನೈಕ್‌’ ಎಂಬ ಐದು ಜಾತಿಯ ಹಾವುಗಳು ಹೊಸಪೇಟೆಯಲ್ಲಿ ಸಿಗುತ್ತವೆ ಎಂದು ಅರಣ್ಯ ಇಲಾಖೆಗೆ ಮೊದಲು ಮಾಹಿತಿ ಕೊಟ್ಟವರು ಅಸ್ಲಂ. ಚೆನ್ನೈಯಿಂದ ಉರಗ ತಜ್ಞರು ಬಂದು, ಅವುಗಳನ್ನು ಪರಿಶೀಲಿಸಿ ಖಚಿತ ಪಡಿಸಿದ್ದಾರೆ.

ಒಂದೆಡೆ ಹಾವುಗಳನ್ನು ಸಂರಕ್ಷಿಸಿ, ಅವುಗಳನ್ನು ಹೊಡೆದು ಸಾಯಿಸದಂತೆ ಜನರಲ್ಲಿ ಅರಿವು ಮೂಡಿಸುವುದರ ಜತೆಗೆ ಅರಣ್ಯ ಇಲಾಖೆಗೂ ನೆರವಾಗುತ್ತಿದ್ದಾರೆ. ಹತ್ತನೇ ತರಗತಿ ವರೆಗೆ ಓದಿರುವ ಅಸ್ಲಂ ಅವರಿಗೆ ಹಾವುಗಳನ್ನು ಹಿಡಿದು, ಅವುಗಳನ್ನು ಸಂರಕ್ಷಿಸುವ ಹವ್ಯಾಸ ಬೆಳೆದ ಪರಿ ಬಹಳ ವಿಶಿಷ್ಟವಾದುದು.

‘ನಾನು ಹೈಸ್ಕೂಲ್‌ನಲ್ಲಿ ಓದುತ್ತಿರುವಾಗ ಬಿಡುವು ಸಿಕ್ಕಾಗ ಗೆಳೆಯರೊಂದಿಗೆ ತುಂಗಭದ್ರಾ ಜಲಾಶಯದ ಕಾಲುವೆಗಳಲ್ಲಿ ಈಜಾಡಲು ಹೋಗುತ್ತಿದ್ದೆ. ನೀರಿನೊಳಗೆ, ಸಂಧಿ–ಗೊಂದಿಗಳಲ್ಲಿ ಹಾವುಗಳು ಇರುತ್ತಿದ್ದವು. ಅವುಗಳನ್ನು ಹಿಡಿದು ಹೊರಗೆ ತೆಗೆಯುತ್ತಿದ್ದೆ. ಗೆಳೆಯರಿಗೆ ತೋರಿಸಿ, ಅವರನ್ನು ಹೆದರಿಸಿ ಖುಷಿ ಪಡುತ್ತಿದ್ದೆ. ನನ್ನ ಗೆಳೆಯರು ಹಾವುಗಳು ಕಂಡರೆ ಭಯ ಬೀಳುತ್ತಿದ್ದರು. ಆದರೆ, ನನಗೆ ಯಾವುದೇ ಭಯ ಆಗುತ್ತಿರಲಿಲ್ಲ. ಒಮ್ಮೆ ಗೆಳೆಯನೊಬ್ಬನ ಮನೆಯಲ್ಲಿ ಹಾವು ಬಂದಿತ್ತು. ನಾನು ಅವರ ಮನೆಗೆ ಹೋಗಿ ಹಾವು ಹುಡುಕಿ, ಅದನ್ನು ಬೇರೆ ಕಡೆ ಕೊಂಡೊಯ್ದು ಬಿಟ್ಟು ಬಂದೆ. ನಂತರ ಜನರಿಂದ ಜನರಿಗೆ ನಾನು ಹಾವು ಹಿಡಿಯುವ ವಿಷಯ ಗೊತ್ತಾಗುತ್ತ ಹೋಯಿತು. ಹೀಗೆ ಎಲ್ಲೇ ಹಾವು ಬರಲಿ ಜನ ನನ್ನನ್ನು ಕರೆಯಲು ಆರಂಭಿಸಿದರು’ ಎಂದು ಅಸ್ಲಂ ವಿವರಿಸಿದರು.

‘30 ಜಾತಿಯ ಹಾವುಗಳಲ್ಲಿ ನಾಲ್ಕು ಮಾತ್ರ ವಿಷಕಾರಿ. ಕೊಳಕು ಮಂಡಲ, ನಾಗರಹಾವು, ಗರಗಸೆ ಹುರಿಪೆ ಮಂಡಲದ ಹಾವು, ಕರೆ ಬಳೆ ವಡಕ ಸೇರಿವೆ. ಹಾವು ಯಾರಿಗೂ ಉದ್ದೇಶಪೂರ್ವಕವಾಗಿ ಕಚ್ಚುವುದಿಲ್ಲ. ಯಾರೋ, ನಮ್ಮನ್ನು ಏನೋ ಮಾಡುತ್ತಾರೆ ಎಂದು ಅವುಗಳಿಗೆ ಅನಿಸಿದರೆ ಖಂಡಿತವಾಗಿಯೂ ಕಚ್ಚುತ್ತವೆ. ಒಮ್ಮೊಮ್ಮೆ ದಿಕ್ಕು ತಪ್ಪಿ ಹಾವುಗಳು ಜನವಸತಿ ಪ್ರದೇಶಗಳಿಗೆ ಬರುತ್ತವೆ. ಅವುಗಳನ್ನು ಯಾರು ಸಾಯಿಸಬಾರದು. ನನ್ನ ಮೊಬೈಲ್‌ ಸಂಖ್ಯೆ 97401 31429 ಗೆ ಕರೆ ಮಾಡಿ ತಿಳಿಸಿದರೆ ನಾನೇ ಖುದ್ದಾಗಿ ಬಂದು ಅದನ್ನು ರಕ್ಷಿಸುತ್ತೇನೆ’ ಎಂದು ಹೇಳುವ ಅಸ್ಲಂ ಜನರಲ್ಲಿ ಅರಿವು ಮೂಡಿಸುತ್ತ ಹಾವುಗಳನ್ನು ರಕ್ಷಿಸುತ್ತಿರುವ ಪರಿ ಅನನ್ಯ.

ನಾಗರಹಾವು ಕಾಡಿಗೆ ಬಿಡುತ್ತಿರುವಸ್ನೇಕ್‌ಅಸ್ಲಂ
ನಾಗರಹಾವು ಕಾಡಿಗೆ ಬಿಡುತ್ತಿರುವಸ್ನೇಕ್‌ಅಸ್ಲಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT