ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಹುಲ್‌ಗಿಂತ ಶ್ರೀರಾಮುಲು ಸಾವಿರ ಪಟ್ಟು ಮೇಲು’

Last Updated 23 ಅಕ್ಟೋಬರ್ 2018, 11:12 IST
ಅಕ್ಷರ ಗಾತ್ರ

ಹೊಸಪೇಟೆ: ‘ಶಾಸಕ ಬಿ. ಶ್ರೀರಾಮುಲು ಅವರಿಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಸಿದ್ದರಾಮಯ್ಯನವರು ಟೀಕಿಸುತ್ತಿದ್ದಾರೆ. ಆದರೆ, ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಹೋಲಿಸಿದರೆ ಶ್ರೀರಾಮುಲು ಅವರು ಸಾವಿರ ಪಟ್ಟು ಮೇಲು’ ಎಂದು ಶಾಸಕ ಸಿ.ಟಿ. ರವಿ ಪ್ರತ್ಯುತ್ತರ ನೀಡಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಶ್ರೀರಾಮುಲು ಕನ್ನಡ ಪಂಡಿತರಲ್ಲ. ಅವರ ಮಾತಿನಲ್ಲಿ ಬಳ್ಳಾರಿಯ ಸೊಗಡಿದೆ. ಆದರೆ, ರಾಹುಲ್‌ ಗಾಂಧಿ ಅವರಿಗೆ ವಿಶ್ವೇಶ್ವರಯ್ಯನವರ ಹೆಸರು ಸರಿಯಾಗಿ ಹೇಳುವುದಕ್ಕೆ ಬರಲಿಲ್ಲ. ಬಸವಣ್ಣನವರ ವಚನವನ್ನು ತಪ್ಪಾಗಿ ಹೇಳಿ ನಗೆಪಾಟಲಿಗೆ ಈಡಾಗಿರುವ ಸಂಗತಿ ಎಲ್ಲರಿಗೂ ಗೊತ್ತಿರುವಂತಹದ್ದು. ಹೀಗಿರುವಾಗ ಸಿದ್ದರಾಮಯ್ಯನವರು ರಾಹುಲ್‌ ಗಾಂಧಿಯವರಿಗೆ ಹೇಗೆ ಮಾತನಾಡಬೇಕೆಂದು ಕಲಿಸಿದರೆ ಉತ್ತಮ’ ಎಂದು ಹೇಳಿದರು.

‘ಈ ಚುನಾವಣೆಯು ಕಾಂಗ್ರೆಸ್‌ನ ಅಧಿಕಾರ, ಹಣಬಲ ಮತ್ತು ಶ್ರೀರಾಮುಲು ಅವರ ಜನಬಲದ ನಡುವಿನ ಸ್ಪರ್ಧೆಯಾಗಿದೆ. ಶ್ರೀರಾಮುಲು ಅವರು ರಾಜೀನಾಮೆ ಕೊಟ್ಟಿದ್ದರಿಂದ ಉಪಚುನಾವಣೆ ನಡೆಸಬೇಕಾಗಿದೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಅವರು ಹೇಳಿರುವುದು ನಿಜ. ಆದರೆ, ಶ್ರೀರಾಮುಲು ಅವರು ಎಂದೂ ಕ್ಷೇತ್ರ ಬಿಟ್ಟು ದೂರ ಹೋಗಿಲ್ಲ. ಈ ಹಿಂದೆ ಈ ಕ್ಷೇತ್ರದಿಂದ ಗೆದ್ದಿದ್ದ ಸೋನಿಯಾ ಗಾಂಧಿ ಅವರು ಒಮ್ಮೆಯೂ ಈ ಕಡೆ ತಿರುಗಿ ನೋಡಿಲ್ಲ. ಜನರಿಗೆ ಕೃತಜ್ಞತೆ ತಿಳಿಸಿಲ್ಲ. ಬಳ್ಳಾರಿಯನ್ನು ಮರೆತು ಹೋಗಿದ್ದಾರೆ’ ಎಂದು ಕೆಣಕಿದರು.

‘ಶ್ರೀರಾಮುಲು ಅವರ ಪ್ರಯತ್ನದಿಂದ ಜಿಲ್ಲೆಯ ಎಲ್ಲ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯಾಗುತ್ತಿದೆ. ಜಿಲ್ಲೆಗೆ ಕಾಂಗ್ರೆಸ್‌ ಕೊಡುಗೆ ಏನೂ ಇಲ್ಲ. ಈ ಕುರಿತು ಚರ್ಚೆಗೂ ಸಿದ್ಧ’ ಎಂದು ಸವಾಲು ಹಾಕಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮುಖಂಡರಾದ ಎಚ್.ಆರ್. ಗವಿಯಪ್ಪ, ಶ್ರೀನಿವಾಸ ರೆಡ್ಡಿ, ಬಸವರಾಜ ನಾಲತ್ವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT