ಶನಿವಾರ, ಫೆಬ್ರವರಿ 27, 2021
28 °C
ಫಲಿತಾಂಶ ಸುಧಾರಣೆ ಕಾರ್ಯಾಗಾರ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ: ಬಳ್ಳಾರಿ ಜಿಲ್ಲೆ 5ನೇ ಸ್ಥಾನಕ್ಕೇರಲಿ–ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ಎಸ್ಸೆಸ್ಸೆಲ್ಸಿ ಫಲಿತಾಂಶದ ಜಿಲ್ಲಾವಾರು ಪಟ್ಟಿಯಲ್ಲಿ ಬಳ್ಳಾರಿಯನ್ನು 5 ರ ಒಳಗಿನ ಸ್ಥಾನಕ್ಕೆ ತರಬೇಕು’ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾದ್ ಮನೋಹರ್ ಹೇಳಿದರು.

ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಬುಧವಾರ ನಡೆದ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಸಭೆಯಲ್ಲಿ ಮಾತನಾಡಿದ ಅವರು, ‘ಈ ವರ್ಷ ಜಿಲ್ಲೆಯ ಫಲಿತಾಂಶ ರಾಜ್ಯದಲ್ಲಿ 5 ಸ್ಥಾನದೊಳಗೆ ಬರುವ ಆಶಯವಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರೂ ಕೆಲಸ ನಿರ್ವಹಿಸಬೇಕು. ಜಿಲ್ಲಾಡಳಿದಿಂದ ಅದಕ್ಕೆ ಬೇಕಾದ ಸಕಲ ಸಹಕಾರವನ್ನು ನೀಡಲಾಗುವುದು’ ಎಂದು ಹೇಳಿದರು.

‘30ನೇ ಸ್ಥಾನದಲ್ಲಿದ್ದ ಜಿಲ್ಲೆ 12ಕ್ಕೆ ಬಂದಿದ್ದು ಅದನ್ನು 3ಕ್ಕೆ ತರುವುದು ದೊಡ್ಡ ಕೆಲಸವಲ್ಲ. ಈಗಾಗಲೇ ರಾತ್ರಿ ಶಾಲೆಗಳನ್ನು ತೆರೆಯಲಾಗಿದೆ. ಹೊಸ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೆಚ್ಚಿನ ಗಮನಹರಿಸಿ, ಎಲ್ಲಿ ಕಡಿಮೆ ಫಲಿತಾಂಶ ಬಂದಿದೆಯೊ ಅಂತಹ ಶಾಲೆಗಳ ಕಡೆಗೆ ಗಮನ ಹೆಚ್ಚಿರಲಿ. ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗುವ ಶಾಲೆ ಮತ್ತು ಮುಖ್ಯ ಶಿಕ್ಷಕರ ಹೆಸರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಸಲಾಗುವುದು’ ಎಂದು ಹೇಳಿದರು.

‘ಮೂರು ತಿಂಗಳಲ್ಲಿ ಹೆಚ್ಚಿನ ಪರಿಶ್ರಮ ಹಾಕಿ ಫಲಿತಾಂಶ ಹೆಚ್ಚಿಸಲು ಪ್ರಯತ್ನಿಸಬೇಕು. ಕಳೆದ ಬಾರಿ ಉತ್ತಮ ಫಲಿತಾಂಶ ಪಡೆದ ಶಾಲೆಯವರನ್ನು ದೆಹಲಿ ಪ್ರವಾಸಕ್ಕೆ ಕಳಿಸಿಕೊಡಲು ಕೊಂಚ ಕಷ್ಟ ಆದರೂ ನೆರವೇರಿಸಲಾಗಿದೆ. ಪ್ರವಾಸಕ್ಕೆ ಹೋದ ಶಿಕ್ಷಕರು ಉಳಿದ ಅನುದಾನವನ್ನು ಜಿಲ್ಲಾಡಳಿತಕ್ಕೆ ಮರಳಿಸಿರುವುದು ಪ್ರಶಂಸನೀಯ. ಈ ಬಾರಿಯೂ ಪ್ರವಾಸಕ್ಕೆ ಕಳಿಸಲಾಗುವುದು’ ಎಂದು ಹೇಳಿದರು.

‘ಹಿಂದಿನ ವರ್ಷ ಬಡ ಮಕ್ಕಳಿಗೆ ರಾತ್ರಿ ತರಗತಿಗಳನ್ನು ತೆರೆದು ಶಿಕ್ಷಕರಿಗೆ ಗೌರವಧನ ನೀಡಿದ್ದೇವೆ. ಶಿಕ್ಷಕರೆಲ್ಲರೂ ಪರಿಶ್ರಮ ಪಟ್ಟು ಉತ್ತಮ ಸಾಧನೆ ಮಾಡಿದ್ದಾರೆ. ಶಿಕ್ಷಣದ ಗುಣಮಟ್ಟ ಇನ್ನೂ ಹೆಚ್ಚಾಗಲಿ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ‘ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಏಳಿಗೆಗೆ ಮುಂದಾಗುವವರೆ ನಿಜವಾದ ಶಿಕ್ಷಕರು ’ಎಂದು ಹೇಳಿದರು.

‘ನಪಾಸಾದ ಮಗು ದುಶ್ಚಟಗಳಿಗೆ ಬಲಿಯಾಗಿ ಸಮಾಜಕ್ಕೆ ಮಾರಕವಾಗಬಹುದು. ಹೆಣ್ಣಾದರೆ ದೌರ್ಜನ್ಯಕ್ಕೊಳಗಾಗಬಹುದು. ಆದರೆ, ಶಿಕ್ಷಕರಿಗೆ ಅವುಗಳೆಲ್ಲವನ್ನೂ ಸರಿ ಮಾಡುವ ಶಕ್ತಿ ಇದೆ. ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಸಮರ್ಥವಾಗಿರಬೇಕು. ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತರಾಗದೇ, ಪಠ್ಯೇತರ ಚಟುವಟಿಕೆಗಳಲ್ಲಿ ಸಮರ್ಥವಾಗಿ ಪಾಲ್ಗೊಂಡರೆ ಉತ್ತಮ ಫಲಿತಾಂಶ ನಿರೀಕ್ಷಸಲು ಸಾಧ್ಯ’ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಹಿಂದಿನ ಸಾಲಿನಲ್ಲಿ ಶೇ100ರಷ್ಟು ಫಲಿತಾಂಶ ಗಳಿಸಿದ ಶಾಲೆಗಳ ಮುಖ್ಯ ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಅವರು ಸನ್ಮಾನಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಓ.ಶ್ರೀಧರನ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು