ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ವಿವಿ: ಇನ್ನೂ ಇತ್ಯರ್ಥವಾಗದ ಎಂಟು ಜನ ಪ್ರಾಧ್ಯಾಪಕರ ನೇಮಕಾತಿ

ಯುಜಿಸಿ ನಿಯಮಕ್ಕೆ ವಿರುದ್ಧ ನೇಮಕ; ₹9.47 ಲಕ್ಷ ವಸೂಲಿಗೆ ಸೂಚನೆ
Last Updated 28 ನವೆಂಬರ್ 2021, 13:00 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): 1995ರಿಂದ 1997ರ ಅವಧಿಯಲ್ಲಿ ಯುಜಿಸಿ ನಿಯಮಕ್ಕೆ ವಿರುದ್ಧವಾಗಿ ನೇಮಕಗೊಂಡ ಎಂಟು ಜನ ಪ್ರಾಧ್ಯಾಪಕರ ನೇಮಕಾತಿ ವಿಷಯ ಇನ್ನೂ ಇತ್ಯರ್ಥಗೊಂಡಿಲ್ಲ.

ಈ ಸಂಬಂಧ ರಾಜ್ಯ ಸರ್ಕಾರ ಮತ್ತು ಯುಜಿಸಿಗೆ ವಿಶ್ವವಿದ್ಯಾಲಯದಿಂದ ಹಲವು ಸಲ ಪತ್ರ ಬರೆದರೂ ಇವರ ನೇಮಕವನ್ನು ಸಿಂಧುಗೊಳಿಸಿಲ್ಲ. ಇಷ್ಟೇ ಅಲ್ಲ, ರಾಜ್ಯ ಲೆಕ್ಕಪತ್ರ ಇಲಾಖೆಯು ಕಾಲಕಾಲಕ್ಕೆ ಇವರ ವೇತನ, ಪಿಂಚಣಿ ಬಿಡುಗಡೆಯ ಸಂದರ್ಭದಲ್ಲಿ ಆಕ್ಷೇಪ ಎತ್ತುತ್ತಲೇ ಬಂದಿದೆ.

ಎಂಟೂ ಜನರ ಪ್ರಕರಣ ಮುಕ್ತಾಯಗೊಳಿಸಬೇಕೆಂದು 2003ರಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದಿದ್ದಾರೆ. ವಿಶ್ವವಿದ್ಯಾಲಯವು ಈ ಪತ್ರ ಲೆಕ್ಕಪತ್ರ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಿದರೆ, ‘ಇದು ಸರ್ಕಾರದ ಪತ್ರವಷ್ಟೇ. ಆದೇಶದ ಪ್ರತಿ ತೆಗೆದುಕೊಂಡು ಬರಬೇಕು’ ಎಂದು ಹೇಳಿ ಕಳಿಸಿದ್ದಾರೆ ಎಂದು ವಿಶ್ವವಿದ್ಯಾಲಯದ ಮೂಲಗಳು ದೃಢಪಡಿಸಿವೆ.

ಇದಾದ ನಂತರ ವಿಶ್ವವಿದ್ಯಾಲಯವು 2020ರಿಂದ 2021ರ ನವೆಂಬರ್‌ 24ರವರೆಗೆ ನಾಲ್ಕು ಪತ್ರಗಳನ್ನು ಲೆಕ್ಕಪತ್ರ ಇಲಾಖೆಗೆ ಬರೆದಿದೆ. ಆದರೆ, ಲೆಕ್ಕಪತ್ರ ಇಲಾಖೆಯು ಅದನ್ನು ಒಪ್ಪಿಕೊಂಡಿಲ್ಲ. ಇತ್ತೀಚೆಗೆ ವಿಶ್ವವಿದ್ಯಾಲಯದ ಕುಲಸಚಿವ, ಹಣಕಾಸು ಅಧಿಕಾರಿ ನೇರವಾಗಿ ಲೆಕ್ಕಪತ್ರ ಇಲಾಖೆಯ ನಿರ್ದೇಶಕರನ್ನು ಭೇಟಿ ಮಾಡಿದ್ದಾರೆ. ‘ಲೆಕ್ಕಪತ್ರ ಇಲಾಖೆಯು ಈ ಸಂಬಂಧ ತೀರ್ಮಾನಕ್ಕೆ ಬರುವವರೆಗೆ ನೀವು ಯಾವುದೇ ನಿರ್ಧಾರ ಕೈಗೊಂಡರೆ ವೈಯಕ್ತಿಕವಾಗಿ ಕುಲಪತಿ, ಕುಲಸಚಿವ ಹಾಗೂ ಹಣಕಾಸು ಅಧಿಕಾರಿಯೇ ಜವಾಬ್ದಾರರು’ ಎಂದು ಇಲಾಖೆಯ ನಿರ್ದೇಶಕರು ಎಚ್ಚರಿಸಿ ಕಳಿಸಿದ್ದಾರೆ ಎಂದು ಗೊತ್ತಾಗಿದೆ.

ಎಂಟು ಜನರಿಂದ ₹9.47 ಲಕ್ಷ ವಸೂಲಿ ಮಾಡಬೇಕು ಎಂದು ವಿಶ್ವವಿದ್ಯಾಲಯಕ್ಕೆ ಲೆಕ್ಕಪತ್ರ ಇಲಾಖೆಯು ಸೂಚಿಸಿದೆ. ಆದರೆ, ವಿಶ್ವವಿದ್ಯಾಲಯ ಅವರಿಂದ ಹಣ ವಸೂಲಿ ಮಾಡಿಲ್ಲ. ನೇಮಕಾತಿ ನಿಯಮಕ್ಕೆ ವಿರುದ್ಧವಾಗಿದ್ದರೆ ನಿವೃತ್ತಿಯ ದಿನಾಂಕದೊಳಗೆ ಅದು ಇತ್ಯರ್ಥಗೊಂಡಿರಬೇಕು. ಇಲ್ಲವಾದಲ್ಲಿ ಉಪಧನ, ಪಿಂಚಣಿ ನಿಗದಿಗೊಳಿಸಲು ಅವಕಾಶವಿಲ್ಲ. ಅಷ್ಟೇ ಅಲ್ಲ, ಯಾರಾದರೂ ಅಕಾಲಿಕ ಮರಣ ಹೊಂದಿದ್ದರೆ ಅನುಕಂಪದ ಆಧಾರದ ಮೇಲೆ ನೌಕರಿ ಕೊಡುವುದಕ್ಕೂ ಅವಕಾಶವಿಲ್ಲ.

ಆಗಿದ್ದೇನು?: ಅಮರೇಶ ನುಗಡೋಣಿ, ಅಶೋಕಕುಮಾರ ರಂಜೇರೆ 1995ರಲ್ಲಿ, ಕಲವೀರ ಮನ್ವಾಚಾರ, ಎಚ್‌.ಡಿ. ಪ್ರಶಾಂತ್‌, ಬಿ.ಎನ್‌. ಪುಟ್ಟಯ್ಯ, ವೆಂಕಟೇಶ ಇಂದ್ವಾಡಿ ಹಾಗೂ ಎಸ್‌.ಎಸ್‌. ಅಂಗಡಿ 1996ರಲ್ಲಿ ಮತ್ತು ಶೈಲಜ ಹಿರೇಮಠ 1997ರಲ್ಲಿ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸಕ್ಕೆ ನೇಮಕಗೊಂಡಿದ್ದಾರೆ.

1995ರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯುಜಿಸಿ ನಿಗದಿಪಡಿಸಿದಂತೆ ಪಿಎಚ್‌.ಡಿ ಅಥವಾ ಎಂ.ಫಿಲ್‌, ನೆಟ್‌ ಪರೀಕ್ಷೆಯಲ್ಲಿ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದಾಗಿತ್ತು. ಇಷ್ಟೇ ಅಲ್ಲ, 1993ರ ಮುಂಚೆಯೇ ಪಿಎಚ್.ಡಿ ಪ್ರಬಂಧ ಮಂಡಿಸಿರಬೇಕೆಂಬ ಷರತ್ತು ಹಾಕಿತ್ತು. ಆದರೆ, ಈ ಅರ್ಹತೆ ಹೊಂದಿರದ ಎಂಟು ಜನರನ್ನು ನಿಯಮಕ್ಕೆ ವಿರುದ್ಧವಾಗಿ ವಿಶ್ವವಿದ್ಯಾಲಯವು ನೇಮಕಾತಿ ಮಾಡಿಕೊಂಡಿತ್ತು.

ಎಂಟೂ ಜನರಿಗೆ ವಿನಾಯಿತಿ ಕೊಡಬೇಕೆಂದು ವಿಶ್ವವಿದ್ಯಾಲಯವು ಯುಜಿಸಿಗೆ ಹಲವು ಸಲ ಪತ್ರ ಬರೆದಿದೆ. ಅದಕ್ಕೆ ಯುಜಿಸಿ ಪ್ರತಿಕ್ರಿಯಿಸಿ, ಎಂಟು ಜನರಿಗೆ ವಿನಾಯಿತಿ ಕೊಡಬೇಕೆಂದು ಕೇಳಿದ್ದೀರಿ. ಅದಕ್ಕೆ ಪೂರಕವಾಗಿ ನೇಮಕಾತಿ ಅಧಿಸೂಚನೆಯ ಪ್ರಕಾರ ಅವರ ವಿದ್ಯಾರ್ಹತೆಯ ದಾಖಲೆಗಳನ್ನು ಕಳಿಸಿಕೊಡಬೇಕೆಂದು ತಿಳಿಸಿದೆ. ಅರ್ಹತೆ ಹೊಂದಿರದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಕಾರಣವೇನು? ಇವರಿಗೇಕೇ ವಿನಾಯಿತಿ ಕೊಡಬೇಕು? ಎಂದು ಮರು ಪ್ರಶ್ನೆ ಹಾಕಿದೆ. ಅದಕ್ಕೆ ವಿಶ್ವವಿದ್ಯಾಲಯ ಪ್ರತಿಕ್ರಿಯಿಸಿಲ್ಲ. ಇದೇ ವಿಷಯ ಲೆಕ್ಕಪತ್ರ ಇಲಾಖೆಯ ಆಕ್ಷೇಪಣೆಗೆ ಮುಖ್ಯ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT