ಶನಿವಾರ, ಮಾರ್ಚ್ 25, 2023
29 °C

ತೈಲ, ಅಗತ್ಯ ವಸ್ತು ಬೆಲೆ ಏರಿಕೆಖಂಡಿಸಿ ಎಸ್‌ಯುಸಿಐ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಪೆಟ್ರೋಲ್‌, ಡೀಸೆಲ್‌, ಸಿಲಿಂಡರ್‌ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ) ಕಾರ್ಯಕರ್ತರು ಗುರುವಾರ ನಗರದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೋವಿಡ್‌ ಲಾಕ್‌ಡೌನ್‌ನಿಂದ ಜನಸಾಮಾನ್ಯರ ಬದುಕು ನಾಶವಾಗಿದೆ. ಅನೇಕರು ತೀವ್ರ ಸಂಕಷ್ಟದಲ್ಲಿ ಬದುಕು ನಡೆಸುತ್ತಿದ್ದಾರೆ. ಹೀಗಿದ್ದರೂ ಪೆಟ್ರೋಲ್‌, ಡೀಸೆಲ್‌ ಹಾಗೂ ಸಿಲಿಂಡರ್‌ ದರ ಸತತವಾಗಿ ಹೆಚ್ಚಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಸಂವೇದನೆ ಕಳೆದುಕೊಂಡಂತೆ ವರ್ತಿಸುತ್ತಿದೆ. ಇಷ್ಟೊಂದು ಜನವಿರೋಧಿಯಾಗಿ ವರ್ತಿಸಿದ ಸರ್ಕಾರ ಹಿಂದೆಂದೂ ಇರಲಿಲ್ಲ ಎಂದು ತಹಶೀಲ್ದಾರ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಮನವಿ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂತರರಾಷ್ಟ್ರೀಯ ಮಾನದಂಡಕ್ಕೆ ತಕ್ಕಂತೆ ತೈಲ ದರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಹೇಳುವುದರ ಮೂಲಕ ಕೇಂದ್ರ ಸರ್ಕಾರವು ಹಗಲು ದರೋಡೆ ನಡೆಸುತ್ತಿದೆ. ಈ ಹಿಂದೆ ನೀಡುತ್ತಿದ್ದ ಸಬ್ಸಿಡಿ ಕೂಡ ತೆಗೆದು ಹಾಕಿದೆ. ಬೆಲೆ ಏರಿಕೆಯಿಂದ ಉದ್ಯಮಿಗಳು, ಕಾರ್ಪೊರೇಟ್‌ ತಿಮಿಂಗಿಲಗಳಿಗೆ ಭಾರಿ ಲಾಭ ಮಾಡಿಕೊಡಲಾಗುತ್ತಿದೆ. ಕೇಂದ್ರ ಸರ್ಕಾರವೇ ಅಂಬಾನಿ, ಅದಾನಿಯವರಿಗೆ ಲೂಟಿ ಹೊಡೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಟೀಕಿಸಿದ್ದಾರೆ.

ಪ್ರತಿಯೊಂದರ ಬೆಲೆ ಹೆಚ್ಚಿಸಿರುವ ಕೇಂದ್ರ ಸರ್ಕಾರವು ‘ದೇಶಕ್ಕಾಗಿ ನೀವು ಇಷ್ಟನ್ನೂ ಮಾಡುವುದಿಲ್ಲವೇ?, ಬೆಲೆ ಹೆಚ್ಚಳದಿಂದ ದೇಶಕ್ಕೆ ಒಳ್ಳೆಯದಾಗಲಿದೆ, ದೇಶಕ್ಕಾಗಿ ತ್ಯಾಗ ಮಾಡಿ’ ಎಂದು ನಾಚಿಕೆಯಿಲ್ಲದೆ ಜನತೆಯನ್ನು ಕಳ್ಳರಂತೆ ನೋಡಲಾಗುತ್ತಿದೆ. ದೇಶದ ಜನರ ರಕ್ತ ಹೀರುತ್ತಿರುವ ಬಂಡವಾಳಷಾಹಿಗಳಿಗೆ ಮಣೆ ಹಾಕುತ್ತಿರುವುದು ದೊಡ್ಡ ದುರಂತವೇ ಸರಿ ಎಂದಿದ್ದಾರೆ.

ತೈಲ, ಸಿಲಿಂಡರ್‌ ಹಾಗೂ ಅಗತ್ಯ ವಸ್ತುಗಳ ಬೆಲೆ ತಕ್ಷಣವೇ ಇಳಿಸಬೇಕು. ಇಲ್ಲವಾದಲ್ಲಿ ದೇಶದಾದ್ಯಂತ ಹಂತ ಹಂತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯರಾದ ಡಾ.ಪ್ರಮೋದ್, ಪಂಪಾಪತಿ, ಹುಲುಗಪ್ಪ, ಚಿರಂಜೀವಿ, ಮಂಜುಳಾ, ಮುಸ್ತಾಫ್, ಮನೋಜ್, ಗಂಗಾ ಭವಾನಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು