ಶುಕ್ರವಾರ, ಡಿಸೆಂಬರ್ 13, 2019
24 °C

‘ವಿಜಯ’ನಗರ ಕಣದಲ್ಲಿ ಗಣಿ ಮಾಲೀಕರ ಸದ್ದು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಖಾಡದಲ್ಲಿ ಗಣಿ ಮಾಲೀಕತ್ವ ಹೊಂದಿದ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬಿಜೆಪಿಯಿಂದ ಆನಂದ್‌ ಸಿಂಗ್‌, ಕಾಂಗ್ರೆಸ್‌ನಿಂದ ವೆಂಕಟರಾವ ಘೋರ್ಪಡೆ ಹಾಗೂ ಬಿಜೆಪಿಗೆ ಸೆಡ್ಡು ಹೊಡೆದು ಆ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಕವಿರಾಜ ಅರಸ್‌ ಕಣಕ್ಕಿಳಿದಿದ್ದಾರೆ. ಸುಪ್ರೀಂಕೋರ್ಟ್‌  ಗಣಿಗಳನ್ನು ಹರಾಜು ಮಾಡಿದ ನಂತರ ಅರಸ್‌ ಹೊರತುಪಡಿಸಿ ಸಿಂಗ್‌ ಹಾಗೂ ಘೋರ್ಪಡೆ ಅದರಿಂದ ದೂರ ಉಳಿದಿದ್ದಾರೆ.

ಆನಂದ್‌ ಸಿಂಗ್‌ ಅವರು ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕವಿರಾಜ ಅರಸ್‌ ಎರಡನೇ ಬಾರಿಗೆ ಸ್ಪರ್ಧಿಸಿದರೆ, ವೆಂಕಟರಾವ ಘೋರ್ಪಡೆ ಮೊದಲ ಸಲ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಈ ಹಿಂದೆ ಸಾರಿಗೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಆನಂದ್‌ ಸಿಂಗ್‌, 2008ರಲ್ಲಿ ಬಿಜೆಪಿಯಿಂದ ಮೊದಲ ಸಲ ಗೆದ್ದು ಶಾಸಕರಾದರು. ನಂತರ ಅವರು ಗಣಿಗಾರಿಕೆಯಲ್ಲೂ ತೊಡಗಿಸಿಕೊಂಡರು. ಅಕ್ರಮ ಗಣಿಗಾರಿಕೆ ಆರೋಪದ ಮೇರೆಗೆ ಜೈಲಿಗೂ ಹೋದರು. ಈಗಲೂ ಅವರ ವಿರುದ್ಧ ಲೋಕಾಯುಕ್ತ, ಎಸ್‌.ಐ.ಟಿ.ಯಲ್ಲಿ ಪ್ರಕರಣಗಳಿವೆ.

ಹೀಗಿದ್ದರೂ ಅವರು 2013ರ ಚುನಾವಣೆಯಲ್ಲಿ ಪುನಃ ಬಿಜೆಪಿಯಿಂದ ಪುನರಾಯ್ಕೆಯಾದರು. 2018ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರನ್ನು ಮತದಾರರು ಕೈಬಿಡಲಿಲ್ಲ. ಸತತ ಮೂರು ಸಲ ಗೆಲುವು ಸಾಧಿಸಿ ‘ಹ್ಯಾಟ್ರಿಕ್‌’ ಬಾರಿಸಿದ ಕೀರ್ತಿಗೆ ಪಾತ್ರರಾದರು. ಶಾಸಕರಾಗಿ ಆಯ್ಕೆಯಾದ ಒಂದೂವರೆ ವರ್ಷದಲ್ಲೇ ರಾಜೀನಾಮೆ ನೀಡಿ ಪುನಃ ಬಿಜೆಪಿ ಸೇರಿದ್ದಾರೆ. ಆ ಪಕ್ಷದಿಂದಲೇ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಎಂ.ವೈ. ಘೋರ್ಪಡೆ ಅವರ ಸಹೋದರ ವೆಂಕಟರಾವ ಘೋರ್ಪಡೆ ಅವರು ಸ್ಮಯೊರ್‌ ಉಕ್ಕಿನ ಕಂಪೆನಿಯಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಈ ಮನೆತನ ಸಂಡೂರಿನಲ್ಲಿ ಅನೇಕ ವರ್ಷಗಳ ಕಾಲ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿತು.

ವೆಂಕಟರಾವ ಅವರು ಒಮ್ಮೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಆದರೆ, ವಿಧಾನಸಭೆಗೆ ಆಯ್ಕೆಯಾಗಲು ಎರಡೂ ಸಲ ವಿಫಲರಾಗಿದ್ದಾರೆ. 2004ರಲ್ಲಿ ಸಂಡೂರಿನಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜೆ.ಡಿ.ಎಸ್‌. ಅಭ್ಯರ್ಥಿ ಸಂತೋಷ್‌ ಲಾಡ್‌ ವಿರುದ್ಧ ಸೋಲು ಕಂಡಿದ್ದಾರೆ. 2009ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲೂ ವೆಂಕಟರಾವ ಸೋಲಿನ ಕಹಿ ಉಂಡಿದ್ದಾರೆ.

ಪಂಚಾಯತ್‌ ರಾಜ್‌ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಘೋರ್ಪಡೆ ಸಾಕಷ್ಟು ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು. ಮೂರನೇ ಸಲ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಇನ್ನು ಬಿಜೆಪಿ ವಿರುದ್ಧ ಅಸಮಾಧಾನಗೊಂಡು ಬಂಡಾಯವಾಗಿ ಸ್ಪರ್ಧಿಸುತ್ತಿರುವ ಕವಿರಾಜ ಅರಸ್‌ ‘ಎ’ ಕೆಟಗರಿಯ ಗಣಿ ಮಾಲೀಕರಾಗಿದ್ದಾರೆ. ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. 1999ರ ಚುನಾವಣೆಯಲ್ಲಿ ಕರ್ನಾಟಕ ಕಾಂಗ್ರೆಸ್‌ ಪಕ್ಷದಿಂದ ಚುನಾವಣೆಗೆ ನಿಂತು ಸೋಲು ಕಂಡಿದ್ದಾರೆ. ಕಳೆದ ಮೂರು ಚುನಾವಣೆಗಳಿಂದ ಬಿಜೆಪಿ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಮೂರೂ ಸಲ ನಿರಾಸೆಯಾಗಿದೆ. ಈ ಸಲ ಹಾಗಾಗಿಯೇ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

ಮೂವರ ಪೈಕಿ ಅತಿ ಹೆಚ್ಚು ಆಸ್ತಿಯನ್ನು ಆನಂದ್‌ ಸಿಂಗ್‌ ಘೋಷಣೆ ಮಾಡಿಕೊಂಡಿದ್ದಾರೆ. ಅವರು ₹104 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಕವಿರಾಜ ಅರಸ್‌ ಇದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು