ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ: ಕಾಯ್ದಿರುವ ಎರಡು ಲಕ್ಷ ರೈತರು

ದರ ಕುಸಿತ; ಬೆಳೆಗಾರರು ಕಂಗಾಲು
Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯದಲ್ಲಿ ಈ ಬಾರಿ ತೊಗರಿ ಉತ್ಪಾದನೆ ಹೆಚ್ಚಿದ್ದು, ಬೆಂಬಲ ಬೆಲೆಯಡಿ ಮಾರಾಟ ಮಾಡಲು ಅಂದಾಜು 2 ಲಕ್ಷ ರೈತರು ಕಾಯುತ್ತಿದ್ದಾರೆ.

ಕ್ವಿಂಟಲ್‌ಗೆ ₹7,500 ದರ ನಿಗದಿಪಡಿಸಬೇಕು ಎಂಬುದು ರೈತರ ಬೇಡಿಕೆಯಾಗಿತ್ತು. ಕೇಂದ್ರ ಸರ್ಕಾರದ ₹5,450 ಹಾಗೂ ರಾಜ್ಯ ಸರ್ಕಾರದ ₹550 ಪ್ರೋತ್ಸಾಹಧನ ಸೇರಿ ಕ್ವಿಂಟಲ್‌ಗೆ ₹ 6 ಸಾವಿರ ಬೆಂಬಲ ಬೆಲೆ ನಿಗದಿಯಾಗಿದೆ. ಈ ಬೆಂಬಲ ಬೆಲೆಯಡಿ 2.65 ಲಕ್ಷ ಟನ್‌ ಮಾತ್ರ ಖರೀದಿಸುವಂತೆ ಕೇಂದ್ರ ಸರ್ಕಾರ ಮಿತಿ ವಿಧಿಸಿತ್ತು. ಆರಂಭದಲ್ಲಿ ರೈತರಿಂದ ತಲಾ 20 ಕ್ವಿಂಟಲ್‌ ಖರೀದಿಸಲಾಯಿತು. ಕೇಂದ್ರ ಸರ್ಕಾರ ನಿಗದಿ ಮಾಡಿದ ಗರಿಷ್ಠ ಮಿತಿಯಷ್ಟು ಖರೀದಿಯಾಗಿದೆ ಎಂಬ ಕಾರಣ ನೀಡಿ ರಾಜ್ಯ ಸರ್ಕಾರ ಏಕಾಏಕಿ ಖರೀದಿ ಸ್ಥಗಿತಗೊಳಿಸಿತು.

ಇದರಿಂದ ರೈತರು ಕಂಗಾಲಾದರು. ಹೋರಾಟಗಳೂ ಆರಂಭಗೊಂಡವು. ಮತ್ತೆ 5 ಲಕ್ಷ ಟನ್‌ ಖರೀದಿಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಕೋರಿತ್ತಾದರೂ, ಕೇಂದ್ರ ಸರ್ಕಾರ 99,450 ಟನ್‌ ಖರೀದಿಗೆ ಮಾತ್ರ ಅನುಮತಿ ನೀಡಿದೆ. ಫೆ.14ರಿಂದ ಎರಡನೇ ಹಂತದಲ್ಲಿ ತೊಗರಿ ಖರೀದಿ ಆರಂಭಗೊಂಡಿದ್ದು, ತಲಾ 10 ಕ್ವಿಂಟಲ್‌ ಮಾತ್ರ ಖರೀದಿಸಲಾಗುತ್ತಿದೆ.

‘ಬೆಳೆದಿರುವ ಎಲ್ಲ ತೊಗರಿಯನ್ನು ಬೆಂಬಲ ಬೆಲೆಯಡಿ ಸರ್ಕಾರ ಖರೀದಿಸುತ್ತಿಲ್ಲ. ಆರ್ಥಿಕ ತೊಂದರೆಯ ಕಾರಣ ರೈತರು ಕಡಿಮೆ ದರಕ್ಕೆ ಮಾರಾಟ ಮಾಡುವುದು ಅನಿವಾರ್ಯ’ ಎಂದು ಕಡಣಿ ಗ್ರಾಮದ ರೈತ ಲಕ್ಷ್ಮೀಪುತ್ರ, ರೈತ ಮಹಿಳೆ ಗೋಟ್ರು ತಾಂಡಾದ ಕಮಲಾಬಾಯಿ ಅಳಲು ತೋಡಿಕೊಂಡರು.

‘ಕಲಬುರ್ಗಿ ಜಿಲ್ಲೆಯೊಂದರಲ್ಲಿಯೇ 3.73 ಲಕ್ಷ ಟನ್‌ ತೊಗರಿ ಬೆಳೆಯಲಾಗಿದೆ. ನಿತ್ಯ ಸರಾಸರಿ 15 ಸಾವಿರ ಕ್ವಿಂಟಲ್‌ ಆವಕವಾಗುತ್ತಿದ್ದು, ಮಾದರಿ ದರ ₹4,200 ಇದೆ’ ಎಂದು ಕಲಬುರ್ಗಿ ಎಪಿಎಂಸಿಯವರು ಮಾಹಿತಿ ನೀಡಿದರು.

ಆಶಾವಾದ: ‘ಖರೀದಿ ಅವಧಿ ವಿಸ್ತರಿಸಬೇಕು ಮತ್ತು ಖರೀದಿ ಪ್ರಮಾಣದ ಮಿತಿ ಹೆಚ್ಚಿಸಬೇಕು ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ’ ಎಂದು ಕರ್ನಾಟಕ ತೊಗರಿ ಮಂಡಳಿಯ ಅಧ್ಯಕ್ಷ ಭಾಗನಗೌಡ ಪಾಟೀಲ ಸಂಕನೂರ ಹೇಳಿದರು.

‘ಹಣದ ಸಮಸ್ಯೆ ಇಲ್ಲ. ಮಂಡಳಿಗೇ ₹30 ಕೋಟಿ ಹಣ ಬಿಡುಗಡೆಯಾಗಿದೆ. ತೊಗರಿ ಖರೀದಿಸಿರುವ ವ್ಯವಸಾಯ ಸೇವಾ ಸಹಕಾರ ಸಂಘದವರು ರೈತರ ಖಾತೆಗಳನ್ನು ದೃಢೀಕರಿಸದ ಕಾರಣ ಹಣ ಪಾವತಿ ವಿಳಂಬವಾಗುತ್ತಿದೆ’ ಎಂದು ಸಮಜಾಯಿಷಿ ನೀಡಿದರು.

ವ್ಯತ್ಯಾಸದ ಹಣ ಭರಿಸುವ ಯೋಜನೆ: ‘ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಉತ್ಪನ್ನ ಮಾರಾಟವಾದರೆ ವ್ಯತ್ಯಾಸದ ಹಣ ಭರಿಸುವ ಯೋಜನೆಯನ್ನು ಕರ್ನಾಟಕ ಸರ್ಕಾರವೂ ಜಾರಿಗೆ ತರಬೇಕು’ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರ ಪತ್ರಕ್ಕೆ ಪ್ರತಿಕ್ರಿಯಿಸಿದ್ದಾರೆ.

‘ಕೇಂದ್ರ ಸರ್ಕಾರ ವಿಧಿಸಿರುವ ಮಿತಿಗಿಂತ ಹೆಚ್ಚುವರಿ ತೊಗರಿ ಖರೀದಿಗೆ ಈ ಯೋಜನೆಯಲ್ಲಿ ಅವಕಾಶವಿದೆ. ಮಧ್ಯಪ್ರದೇಶದಂತೆ ಕರ್ನಾಟಕದಲ್ಲಿಯೂ ಇದನ್ನು ಜಾರಿಗೊಳಿಸಿದರೆ ಬೆಳೆಗಾರರಿಗೆ ಅನುಕೂಲವಾಗಲಿದೆ’ ಎಂದು ಹೇಳಿದ್ದಾರೆ.
***
30 ಚೀಲ ತೊಗರಿ ಬೆಳೆದಿದ್ದೇನೆ. ನೋಂದಣಿ ಅವಧಿ ಮುಗಿದಿದ್ದು, ತೊಗರಿ ಖರೀದಿಸುವುದಿಲ್ಲ ಎಂದು ಖರೀದಿ ಕೇಂದ್ರದವರು ಹೇಳುತ್ತಿದ್ದಾರೆ. ಏನು ಮಾಡುವುದು ತೋಚುತ್ತಿಲ್ಲ.
ಶಿವಶರಣಪ್ಪ, ಪಾಣೇಗಾಂವ ಗ್ರಾಮದ ರೈತ
**

ಬೆಂಬಲ ಬೆಲೆಯಲ್ಲಿ ತೊಗರಿ ಮಾರಿ 15 ದಿನವಾದರೂ ಹಣ ಜಮೆ ಆಗಿಲ್ಲ. 4 ತಿಂಗಳ ಹಿಂದೆ ಮಾರಾಟ ಮಾಡಿದ್ದ ಉದ್ದಿನ ಹಣವೂ ಬಂದಿಲ್ಲ.
ಪೀರಪ್ಪ ಪೊಲೀಸ್‌ಪಾಟೀಲ, ವೆಂಕಟಬೆಣ್ಣೂರ ರೈತ
**
ರಾಜ್ಯದಲ್ಲಿ ತೊಗರಿ ಬೆಳೆಯ ಸ್ಥಿತಿಗತಿ


8.84 ಲಕ್ಷ ಹೆಕ್ಟೇರ್‌
ತೊಗರಿ ಬೆಳೆದ ಪ್ರದೇಶ

8.58 ಲಕ್ಷ ಟನ್‌
ಉತ್ಪಾದನೆ ನಿರೀಕ್ಷೆ

3.65 ಲಕ್ಷ ಟನ್‌
ಬೆಂಬಲ ಬೆಲೆಯಡಿ ಖರೀದಿಸಲು ಕೇಂದ್ರ ವಿಧಿಸಿರುವ ಮಿತಿ

3.15 ಲಕ್ಷ
ಮಾರಾಟಕ್ಕೆ ನೋಂದಾಯಿಸಿರುವ ರೈತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT