ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೈಕೊಟ್ಟ ವಿದ್ಯುತ್‌, ಕೆಲಸ ಮಾಡದ ಜನರೇಟರ್‌: ಬಳ್ಳಾರಿ ವಿಮ್ಸ್‌ನಲ್ಲಿ ಇಬ್ಬರ ಸಾವು

Last Updated 14 ಸೆಪ್ಟೆಂಬರ್ 2022, 15:18 IST
ಅಕ್ಷರ ಗಾತ್ರ

ಬಳ್ಳಾರಿ: ವಿದ್ಯುತ್‌ ಕೈಕೊಟ್ಟು, ಜನರೇಟರ್‌ ಕೆಲಸ ಮಾಡದೆ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ವಿಮ್ಸ್‌) ಬುಧವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ಮೌಲಾ ಹುಸೇನ್‌ ಮತ್ತು ಚಿಟ್ಟೆಮ್ಮ ಎಂದು ಗುರುತಿಸಲಾಗಿದೆ. ಮೌಲಾ ಅವರಿಗೆ ಮೂತ್ರಪಿಂಡ ಸೇರಿದಂತೆ ಗಂಭೀರ ಸಮಸ್ಯೆಗಳಿದ್ದವು. ಚಿಟ್ಟೆಮ್ಮ ಅವರಿಗೆ ಹಾವು ಕಡಿದಿತ್ತು. ಕರೆಂಟ್‌ ಕೈಕೊಟ್ಟಿದ್ದಕ್ಕೂ ಸಾವಿಗೂ ಸಂಬಂಧವಿಲ್ಲ ಎಂದು ವಿಮ್ಸ್‌ ಮೂಲಗಳು ತಿಳಿಸಿವೆ.

ವಿಮ್ಸ್‌ನಲ್ಲಿ ಬೆಳಿಗ್ಗೆ 6ರಿಂದ 10ಗಂಟೆವರೆಗೆ ಕರೆಂಟ್‌ ಇರಲಿಲ್ಲ. ಜನರೇಟರ್‌ ಇದ್ದರೂ ಕೆಲಸ ಮಾಡಲಿಲ್ಲ. ಪರಿಣಾಮ ಐಸಿಯುನಲ್ಲಿದ್ದ ವೆಂಟಿಲೇಟರ್‌ಗಳು ಸ್ಥಗಿತಗೊಂಡು ರೋಗಿಗಳು ಮೃತಪಟ್ಟಿದ್ದಾರೆ ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಘಟನೆ ಕುರಿತು ಮಾಹಿತಿ ಪಡೆಯಲು ವಿಮ್ಸ್‌ ನಿರ್ದೇಶಕ ಡಾ.ಗಂಗಾಧರಗೌಡ ಅವರಿಗೆ ಕರೆ ಮಾಡಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ಬುಧವಾರ ಬೆಳಿಗ್ಗೆ 8.20ರಿಂದ 10 ಗಂಟೆವರೆಗೆ ಕರೆಂಟ್‌ ಹೋಗಿತ್ತು. ಇದಕ್ಕೆ ಪರ್ಯಾಯವಾಗಿ ಜನರೇಟರ್‌ ವ್ಯವಸ್ಥೆ ಮಾಡಲಾಗಿತ್ತು. 9.30ರಲ್ಲಿ ಒಬ್ಬರು, 9.35ರಲ್ಲಿ ಮತ್ತೊಬ್ಬರು ರೋಗಿ ಮೃತ‍ಪಟ್ಟರು ಎಂದು ವಿಮ್ಸ್‌ ಮೂಲಗಳು ಹೇಳಿವೆ.

ವಿಮ್ಸ್‌ ಕಟ್ಟಡ 60 ವರ್ಷ ಹಳೆಯ‌ದು. ವಿದ್ಯುತ್‌ ಪೂರೈಸುವ ವಾಹಕಗಳು (ತಂತಿ) ಅಷ್ಟೇ ಹಳೆಯದಾಗಿವೆ. ಅಗತ್ಯವಿರುವ ಎಲ್ಲ ವಿಭಾಗಗಳಿಗೂ ಜನರೇಟರ್‌ ಸೌಲಭ್ಯ ಒದಗಿಸಲಾಗಿದೆ. ಐಸಿಯುಗೂ ಹೊಸ ಜನರೇಟರ್‌ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಕೆಲವು ದಿನಗಳ ಹಿಂದೆ ಮಕ್ಕಳ ಐಸಿಯು ವಿಭಾಗದಲ್ಲೂ ಕರೆಂಟ್‌ ಮತ್ತು ಜನರೇಟರ್‌ ಕೈಕೊಟ್ಟ ಪರಿಣಾಮ ಮಗುವೊಂದು ಮೃತಪಟ್ಟಿತು. ಅದು ಸುದ್ದಿಯಾಗಲೇ ಇಲ್ಲ ಎಂಬ ಆರೋಪವೂ ಕೇಳಿಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT