ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಸೀದಾ ರುಪಯ್ಯಾ ಸರ್ಕಾರ: ಮೋದಿ ಟೀಕೆ

ದಾವಣಗೆರೆ ‘ಅನ್ನದಾತರ ಬೃಹತ್ ಸಮಾವೇಶ’ದಲ್ಲಿ ಮಣ್ಣಿನ ಮಕ್ಕಳ ಕುರಿತೇ ಮಾತು
Last Updated 27 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ದಾವಣಗೆರೆ: ‘ಕರ್ನಾಟಕ ಸರ್ಕಾರ ಪಾಪಗಳ ಭಾರದಿಂದ ನಲುಗಿದೆ. ಇಲ್ಲಿ ಅದು ಎಂಥ ಸ್ಥಿತಿ ತಲುಪಿದೆಯೆಂದರೆ, ಮುತ್ಸದ್ದಿಗಳೇ ಉಳಿದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಮಂಗಳವಾರ ನಡೆದ ‘ಅನ್ನದಾತರ ಬೃಹತ್ ಸಮಾವೇಶ’ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದ ನಿಮಿತ್ತ ಆಯೋಜಿಸಲಾಗಿದ್ದ ‘ರೈತ ಬಂಧು ಯಡಿಯೂರಪ್ಪ ಸಮಾವೇಶ’ದಲ್ಲಿ ಅವರು ಸರಿಯಾಗಿ ಅರ್ಧ ತಾಸು ಭಾಷಣ ಮಾಡಿದರು.

ಸಿದ್ದರಾಮಯ್ಯ ಸರ್ಕಾರದ್ದು ‘ಸೀದಾ ರುಪಯ್ಯಾ’ ಸಂಸ್ಕೃತಿ. ಎಲ್ಲಕ್ಕೂ ಹಣ ಕೇಳುತ್ತಾರೆ. ಈ ಸರ್ಕಾರ ಕಿತ್ತೆಸೆಯಲು ಜನ ಉತ್ಸುಕರಾಗಿದ್ದಾರೆ. ಕಾಂಗ್ರೆಸ್ ಸಂಸ್ಕೃತಿಯಿಂದ ಜನ ರೋಸಿಹೋಗಿದ್ದಾರೆ. ದೇಶದ ಎಲ್ಲ ಸಮಸ್ಯೆಗಳ ಮೂಲ ಆ ಸಂಸ್ಕೃತಿಯಲ್ಲೇ ಇದೆ. ಸರ್ಕಾರದ ವಿರುದ್ಧ ದ್ವೇಷದ ಭಾವನೆ ಮೂಡಿದೆ. ಅದನ್ನು ಕಿತ್ತೆಸೆಯಲು ಜನ ಉತ್ಸಾಹದಿಂದ ಕಾಯುತ್ತಿದ್ದಾರೆ ಎಂದರು.

ತಮ್ಮ ಸರ್ಕಾರದ ಪ್ರತಿ ಯೋಜನೆಗೂ ಕೃಷಿ ವಿಕಾಸ, ಗ್ರಾಮಾಭ್ಯುದಯದ ಉದ್ದೇಶವಿದೆ ಎಂದ ಮೋದಿ, ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆಯ ಯಶಸ್ಸನ್ನು ಅದಕ್ಕೆ ಉದಾಹರಣೆಯಾಗಿ ಕೊಟ್ಟರು. ರೈತರ ಅಭ್ಯುದಯದ ಕುರಿತು ಮಾತನಾಡುತ್ತಲೇ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೂ ತೆಗೆದುಕೊಂಡರು.

ದೇಶಕ್ಕೆ ಸ್ವಾತಂತ್ರ್ಯ ಬಂದು 2022ರ ಹೊತ್ತಿಗೆ 75 ವರ್ಷ ತುಂಬಲಿದೆ. ಆ ಹೊತ್ತಿಗೆ ರೈತರ ಕೃತಿ ಉತ್ಪನ್ನಗಳ ಮತ್ತು ಆದಾಯದ ಪ್ರಮಾಣವನ್ನು ದುಪ್ಪಟ್ಟುಗೊಳಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

(ದಾವಣಗೆರೆಯಲ್ಲಿ ಮಂಗಳವಾರ ನಡೆದ ’ರೈತಬಂಧು ಯಡಿಯೂರಪ್ಪ’ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಸನ್ನ ಭಾವದಲ್ಲಿ ಕೃತಜ್ಞತೆ ಅರ್ಪಿಸಿದ ರೀತಿ.)

ಮೋದಿ ಹೇಳಿದ್ದು:

* ಭಾರತದ ಭಾಗ್ಯ ಬದಲಾಗಬೇಕಾದರೆ ಹಳ್ಳಿಗಳ, ರೈತರ ಭಾಗ್ಯ ಬದಲಾಗಬೇಕು.

* ಆಹಾರ ಧಾನ್ಯ ಕೆಡದಂತೆ ಸಂಗ್ರಹಿಸಲು ಸಾವಿರಾರು ಕೋಟಿ ರೂಪಾಯಿ ವಿನಿಯೋಗಿಸಿ ‘ಆಪರೇಷನ್ ಗ್ರಿಲ್ಸ್’ ಪ್ರಾರಂಭಿಸುವೆ.

* ಶೈತ್ಯಾಗಾರ, ಉಗ್ರಾಣಗಳ ನಿರ್ಮಾಣಕ್ಕೆ ಒತ್ತು ನೀಡಿ, ರೈತರ ಬದುಕನ್ನು ಹಸನಾಗಿಸುತ್ತೇವೆ.

* ವಿವಿಧ ಯೋಜನೆಗಳ ವಿನಿಯೋಗಕ್ಕಾಗಿ ಕೇಂದ್ರ ಸರ್ಕಾರವು ಕೊಟ್ಟಿರುವ ಹಣವನ್ನು ರಾಜ್ಯ ಸರ್ಕಾರ ಬಳಸದೆ ಖಜಾನೆಯಲ್ಲಿಯೇ ಉಳಿಸಿಕೊಂಡಿದೆ.

* ಕಾಂಗ್ರೆಸ್‌ನವರು ಗಂಟು ಮಾಡಿದ್ದಾರೆ. ಅವರ ಮನೆಗಳಲ್ಲಿ ಹಣದ ಬಂಡಲ್‌ಗಳು ಸಿಗುತ್ತಿವೆ.

* ಗುಜರಾತ್‌ನಲ್ಲಿ ಮಳೆನೀರು ಸಂಗ್ರಹಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ಅಭಿಯಾನ ಕೈಗೊಂಡಿದ್ದೆವು. ಸಣ್ಣ ಸಣ್ಣ ಅಣೆಕಟ್ಟು ಹಾಗೂ ಚೆಕ್‌ಡ್ಯಾಂಗಳ ನಿರ್ಮಾಣದಿಂದಾಗಿ ಅಲ್ಲಿ ಕೃಷಿ ಕ್ಷೇತ್ರದಲ್ಲಿ ಶೇ 10ರಷ್ಟು ಪ್ರಗತಿ ಆಯಿತು.

* 48 ವರ್ಷಗಳಲ್ಲಿ ಕಾಂಗ್ರೆಸ್‌ನವರು ಮಾಡಲಾಗದ್ದನ್ನು 48 ತಿಂಗಳಲ್ಲಿ ಈ ಚಾಯ್‌ವಾಲಾ ಮಾಡಿ ತೋರಿಸಿದ್ದಾನೆ.

* ಬಡವರು, ಕೂಲಿ ಕಾರ್ಮಿಕರು, ಆಟೊ ಓಡಿಸುವವರು ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಬೇಕೆಂಬ ಕನಸು ಕಾಣುತ್ತಾರೆ. ಸರ್ವ ಶಿಕ್ಷಣ ಅಭಿಯಾನದ ₹ 400 ಕೋಟಿ ಇಲ್ಲಿ ಬಳಕೆಯೇ ಆಗಿಲ್ಲ.

* ಯುಪಿಎ ಸರ್ಕಾರ ಕೇಂದ್ರದಲ್ಲಿದ್ದಾಗ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರೀ ₹ 73,000 ಕೋಟಿ ಸಿಕ್ಕಿತ್ತು. ಈಗ ಎನ್‌ಡಿಎ ಅಧಿಕಾರಾವಧಿಯಲ್ಲಿ ₹ 2 ಲಕ್ಷ ಕೋಟಿ ನೀಡಲಾಗಿದೆ.

* ಕರ್ನಾಟಕದ ಜನ ಒಳ್ಳೆಯವರು. ದೇಶಕ್ಕಾಗಿ ಏನನ್ನಾದರೂ ಕೊಡಬಲ್ಲರು. ಅವರಲ್ಲಿ ತಾಕತ್ತು ತುಂಬಬೇಕು. ಅದಕ್ಕಾಗಿ ಬಿಜೆಪಿಯನ್ನು ಇಲ್ಲಿ ಅಧಿಕಾರಕ್ಕೆ ಬರಬೇಕು.

ಮುಷ್ಟಿ ಧಾನ್ಯ ಅಭಿಯಾನ

ರೈತರಾದ ಕೆಂಚೀರಪ್ಪ, ಗಿರೀಶ್ ಹಾಗೂ ಪ್ರಕಾಶ್ ನೀಡಿದ ತಲಾ ಒಂದೊಂದು ಮುಷ್ಟಿ ಅಕ್ಕಿಯನ್ನು ಬಿ.ಎಸ್. ಯಡಿಯೂರಪ್ಪ ಅವರ ಜೋಳಿಗೆಗೆ ಹಾಕುವ ಮೂಲಕ ‘ಮುಷ್ಟಿ ಧಾನ್ಯ ಅಭಿಯಾನ’ಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಇನ್ನೂ ಹತ್ತು ದಿನ ರಾಜ್ಯದ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರು, ರೈತ ಯುವಕರು ಮನೆ ಮನೆಗೆ ಹೋಗಿ ಮುಷ್ಟಿ ಅಕ್ಕಿ ಸಂಗ್ರಹಿಸುವ ಅಭಿಯಾನವಿದು. ಸಂಗ್ರಹವಾಗುವ ಅಕ್ಕಿಯನ್ನು ಬಳಸಿ, ಆತ್ಮಹತ್ಯೆ ಮಾಡಿಕೊಂಡ ರೈತರ ಸಂತ್ರಸ್ತ ಕುಟುಂಬಗಳಿಗೆ ಮಠಗಳಲ್ಲಿ ಅನ್ನಸಂತರ್ಪಣೆ ಮಾಡುವ ಉದ್ದೇಶ ಇದಕ್ಕಿದೆ.

ಕೃಷಿ ಅಭಿವೃದ್ಧಿಗೆ ಕಾರಣರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಲೋಹದ ಬೃಹತ್ ಪ್ರತಿಮೆಯನ್ನು ಗುಜರಾತ್‌ನಲ್ಲಿ ನಿರ್ಮಿಸಲು ಇಂಥದ್ದೇ ಯೋಜನೆ ಪ್ರಾರಂಭಿಸಿರುವುದಾಗಿ ಮೋದಿ ಹೇಳಿದರು.

ಮನೆ ಮನೆಯಿಂದ ವ್ಯರ್ಥವಾದ ಕೃಷಿ ಉಪಕರಣಗಳ ತುಂಡು ಲೋಹ ಸಂಗ್ರಹಿಸಿ, ಅದನ್ನು ಕರಗಿಸಿ, ಪ್ರತಿಮೆ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಅಮೆರಿಕದ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ ಪ್ರತಿಮೆಗಿಂತ ಎರಡು ಪಟ್ಟು ಎತ್ತರದ ಪ್ರತಿಮೆ ವಲ್ಲಭಭಾಯ್ ಅವರದ್ದಾಗಲಿದೆ ಎಂದರು.

(ಸಮಾವೇಶದಲ್ಲಿ ನೆರೆದಿದ್ದ ಜನಸ್ತೋಮ)

ಕನ್ನಡದ ಮಾತು

‘ಸಾಗರೋಪಾದಿಯಲ್ಲಿ ಸೇರಿರುವ ಕರ್ನಾಟಕದ ಅನ್ನದಾತ ಮಹಾಜನರೇ, ನಿಮಗೆಲ್ಲ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲಿಯೇ ಮೋದಿ ಭಾಷಣ ಪ್ರಾರಂಭಿಸಿದರು.

‘ಬಸವೇಶ್ವರ, ಕನಕದಾಸ್, ಮಾದಾರ ಚನ್ನಯ್ಯ, ಮದಕರಿ ನಾಯಕ, ಓಬವ್ವ, ಶಾಂತವೇರಿ ಗೋಪಾಲಗೌಡ ಅವರಿಗೆ ನನ್ನ ನಮಸ್ಕಾರಗಳು’ ಎಂದಾಗ ಜನರಿಂದ ಕರತಾಡನ.

‘ಈ ಬಾರಿ ಬಿಜೆಪಿ ಸರ್ಕಾರ್... ಬನ್ನಿ, ಬಿಜೆಪಿ ಗೆಲ್ಲಿಸಿ ಬಿಜೆಪಿ... ಸಮಸ್ತ ಕನ್ನಡಿಗರಿಗೆ ನನ್ನ ಅನಂತ ಸಮಸ್ಕಾರಗಳು’ ಎಂದು ಭಾಷಣವನ್ನು ಅವರು ಮುಗಿಸಿದ್ದೂ ಕನ್ನಡದಲ್ಲೇ.

‘ಹುಟ್ಟುಹಬ್ಬಕ್ಕೆ ಮೋದಿ ಬಂದಿರುವುದು ಪುಣ್ಯಫಲ’

‘ಈ ಮೊದಲು 60 ವರ್ಷ ಆಗಿದ್ದಾಗ ನನಗೆ ಮತ್ತು ಪತ್ನಿ ಮೈತ್ರಾದೇವಿ ಅವರಿಗೆ ಆಶೀರ್ವಾದ ಮಾಡಲು ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ‌ಬೆಂಗಳೂರಿಗೆ ಬಂದಿದ್ದರು. ನಾನು ಯಾವುದೇ ಜಯಂತಿ ಆಚರಣೆಗಳಿಗೆ ಹೋಗುವುದಿಲ್ಲ. ನಿಮ್ಮ ಕಾರ್ಯಕ್ರಮಕ್ಕೆ ಬಂದಿರುವುದಾಗಿ ನನಗೆ ತಿಳಿಸಿದ್ದರು. ಈಗ 75ನೇ ವರ್ಷಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಬಂದು ಹರಸಿದ್ದಾರೆ. ಇದನ್ನು ಪೂರ್ವಜನ್ಮದ ಪುಣ್ಯಫಲ ಎಂದು ಭಾವಿಸುತ್ತೇನೆ’ ಎಂದು ಯಡಿಯೂರಪ್ಪ ಭಾವುಕರಾಗಿ  ಹೇಳಿದರು.

ಕಪ್ಪು ಬಟ್ಟೆ ಪ್ರದರ್ಶನ

ದಾವಣಗೆರೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಬರುವಾಗ ಪಿ.ಬಿ. ರಸ್ತೆಯಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿದ ಕಾಂಗ್ರೆಸ್‌ ಕಾರ್ಯಕರ್ತನೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಮತ್ತೊಂದೆಡೆ ಮೋದಿ ಭೇಟಿ ವಿರೋಧಿಸಿ ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT