ಮಂಗಳವಾರ, ಮಾರ್ಚ್ 21, 2023
30 °C

ಕರ್ನಾಟಕದ 'ಗ್ವಾಲಿಯರ್' ಉಚ್ಚಂಗಿದುರ್ಗ

ರಾಮಚಂದ್ರ ಎಂ.ನಾಗತಿಕಟ್ಟೆ Updated:

ಅಕ್ಷರ ಗಾತ್ರ : | |

Prajavani

ಉಚ್ಚಂಗಿದುರ್ಗ/ಅರಸೀಕೆರೆ (ಹರಪನಹಳ್ಳಿ ತಾಲ್ಲೂಕು): ಬೆಟ್ಟಗುಡ್ಡಗಳ ನಡುವೆ ಪ್ರಕೃತಿ ಸೌಂದರ್ಯದಿಂದ ಕೂಡಿರುವ ಉಚ್ಚಂಗಿದುರ್ಗ ಕೋಟೆಯು ಕರ್ನಾಟಕದ ಗ್ವಾಲಿಯರ್‌ ಎಂದೇ ಪ್ರಸಿದ್ಧಿ ಪಡೆದಿದೆ.

ದಾವಣಗೆರೆ ಜಿಲ್ಲಾ ಕೇಂದ್ರದಿಂದ 25 ಕಿಮೀ ದೂರದಲ್ಲಿ ಉಚ್ಚಂಗಿದುರ್ಗ ಗ್ರಾಮಕ್ಕೆ ತಲುಪುವ ಮೊದಲೇ ಉತ್ತರದಿಂದ ದಕ್ಷಿಣಾಭಿಮುಖವಾಗಿ ಹಬ್ಬಿರುವ 600 ಅಡಿ ಎತ್ತರದ ಬೆಟ್ಟ ಗೋಚರಿಸುತ್ತದೆ. ಆ ಬೆಟ್ಟವನ್ನು ಪಶ್ಚಿಮ ದಿಕ್ಕಿನಿಂದ ನೋಡಿದರೆ ಮಲಗಿರುವ ಹೆಣ್ಣಿನ ಆಕೃತಿಯಂತೆ ಭಾಸವಾಗುತ್ತದೆ.

ಉಚ್ಚಂಗಿದುರ್ಗ ಬೆಟ್ಟವು ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಕ್ರಿ.ಶ 1064 ರ ಆಸುಪಾಸಿನಲ್ಲಿ ಚಾಲುಕ್ಯರ ಕಾಲದಲ್ಲಿ ಬೆಟ್ಟದಲ್ಲಿ ಕೋಟೆಯನ್ನು ನಿರ್ಮಿಸಿ ಆಳ್ವಿಕೆ ಮಾಡಿದ ಕುರುಹುಗಳು ಇಂದಿಗೂ ಇವೆ. ಹನ್ನೆರಡನೆಯ ಶತಮಾನದಲ್ಲಿ ಪಾಂಡ್ಯರು ಉಚ್ಚಂಗಿದುರ್ಗವನ್ನು ರಾಜಧಾನಿಯನ್ನಾಗಿಸಿದರು. ಬಳಿಕ ಹೊಯ್ಸಳ ಸಾಮ್ರಾಜ್ಯದ ರಾಜರು ಉಚ್ಚಂಗಿದುರ್ಗವನ್ನು ವಶಕ್ಕೆ ತೆಗೆದುಕೊಂಡು ಆಳ್ವಿಕೆ ನಡೆಸಿದ್ದಾರೆ. ಈ ಕುರಿತು ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಯ್ಸಳರ ಕಾಲದ ಅವಶೇಷಗಳು ಇಂದಿಗೂ ಕಾಣಬಹುದು. ನಂತರದ ಕಾಲಘಟ್ಟದಲ್ಲಿ ಚಿತ್ರದುರ್ಗದ ನಾಯಕರು ಆಳ್ವಿಕೆ ನಡೆಸಿದ್ದಾರೆ.

ಚಿತ್ರದುರ್ಗದ ಮೂಲ ಪುರುಷ ಚಿತ್ರನಾಯಕ ಉಚ್ಚಂಗಿದುರ್ಗವನ್ನು ಮೊದಲು ಆಳ್ವಿಕೆ ನೆಡೆಸಿದ್ದಾರೆ. ಹರಪನಹಳ್ಳಿ ಸೋಮಶೇಖರ ನಾಯಕರನ್ನು ಹಿರೇ ಮದಕರಿನಾಯಕ ಸೋಲಿಸಿ ಉಚ್ಚಂಗಿದುರ್ಗವನ್ನು ವಶಪಡಿಸಿಕೊಂಡು ಉಚ್ಚೆಂಗೆಮ್ಮ ಮೂರ್ತಿಯನ್ನು ತೆಗೆದುಕೊಂಡು ಹೋಗುವಾಗ 1748 ರಲ್ಲಿ ಮಾಯಕೊಂಡ ಬಳಿ ಪುನಃ ಕಾದಾಡಿದ್ದಾರೆ. ಇದರಲ್ಲಿ ಮದಕರಿನಾಯಕ ಮರಣ ಹೊಂದಿದ್ದರು.

ಚಿತ್ರದುರ್ಗದ ಕೋಟೆಯಂತೆ ಇಲ್ಲಿನ ಕೋಟೆ ನಿರ್ಮಿಸಲಾಗಿದೆ. ಕೋಟೆಯ ದ್ವಾರ ಪ್ರವೇಶಿಸುತ್ತಿದ್ದಂತೆ ಆನೆಬಾಗಿಲು, ರಾಣಿ ಅರಮನೆ, ರಾಜನ ಅರಮನೆ, ಹೊನ್ನೆಜರಿ, ಆನೆಹೊಂಡ, ಅರಶಿಣ ಹೊಂಡ, ಹಾಲಮ್ಮ ತೋಪು ಪುರಾತನ ಕಾಲದ ಸ್ಥಳಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಹೀಗೆ ಕೋಟೆಯಲ್ಲಿ ಅನೇಕ ಅಪರೂಪದ ಸ್ಥಳಗಳಿರುವುದರಿಂದ ಪ್ರವಾಸಿಗರು, ಅದರಲ್ಲೂ ಹವ್ಯಾಸಿ ಛಾಯಾಗ್ರಾಹಕರ ನೆಚ್ಚಿನ ತಾಣವಾಗಿ ಬದಲಾಗಿದೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಉಚ್ಚೆಂಗೆಮ್ಮ ದೇವಿ:

ಹಚ್ಚ ಹಸಿರಿನಿಂದ ಕಂಗೊಳಿಸುವ ಬೆಟ್ಟದ ತುತ್ತತುದಿಯಲ್ಲಿ ಚಿತ್ರದುರ್ಗ ನಾಯಕರ ಆದಿ ದೇವತೆ ಉಚ್ಚೆಂಗೆಮ್ಮ ದೇವಿ ನೆಲೆಸಿದ್ದಾಳೆ. ಈ ಹಿನ್ನಲೆಯಲ್ಲಿ ಆ ಐತಿಹಾಸಿಕ ಕೋಟೆ ಇಂದು ಭಕ್ತರ ಸಂಕಷ್ಟ ಹರಿಸೋ ಧಾರ್ಮಿಕ ಕ್ಷೇತ್ರವಾಗಿ ಮಾರ್ಪಟ್ಟಿದೆ.

ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆಗೆ ಸಾವಿರಾರು ಮಂದಿ ಭಕ್ತರು ಇಲ್ಲಿ ಆಗಮಿಸುತ್ತಾರೆ. ಮಾರ್ಚ್ ತಿಂಗಳಲ್ಲಿ ನಡೆಯುವ ವಾರ್ಷಿಕ ಜಾತ್ರೆಗೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ದೇವಿ ದರ್ಶನ ಪಡೆಯುತ್ತಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು