ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಣ ಹಂತದ ಕಟ್ಟಡ ಪಿಯು ಪರೀಕ್ಷಾ ಕೇಂದ್ರ!

ವಿದ್ಯಾರ್ಥಿ ಸಂಘಟನೆಗಳಿಂದ ತೀವ್ರ ಆಕ್ಷೇಪ; ಕೇಂದ್ರ ಬದಲಿಸಲು ಆಗ್ರಹ
Last Updated 3 ಮಾರ್ಚ್ 2020, 19:04 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ಚಿತ್ತವಾಡ್ಗಿಯ ಸರ್ಕಾರಿ ಕಾಲೇಜಿನ ನಿರ್ಮಾಣ ಹಂತದ ಕಟ್ಟಡವನ್ನು ಪಿ.ಯು ಪರೀಕ್ಷಾ ಕೇಂದ್ರವಾಗಿ ಆಯ್ಕೆ ಮಾಡಿರುವುದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.

ಬುಧವಾರದಿಂದ (ಮಾ.4) ಪರೀಕ್ಷೆಗಳು ಆರಂಭಗೊಳ್ಳಲಿವೆ. ಆದರೆ, ಕಾಲೇಜಿನ ಮೊದಲ ಮಹಡಿಯ ಕಟ್ಟಡದಲ್ಲಿ ಯಾವುದೇ ರೀತಿಯ ಕನಿಷ್ಠ ಸೌಕರ್ಯಗಳೂ ಇಲ್ಲ. ಇತ್ತೀಚೆಗಷ್ಟೇ ಕೊಠಡಿಗಳ ಪ್ಲಾಸ್ಟರ್‌ ಕೆಲಸ ಪೂರ್ಣಗೊಂಡಿದೆ. ಕ್ಯೂರಿಂಗ್‌ ಮುಂದುವರಿದಿದೆ. ಇನ್ನಷ್ಟೇ ನೆಲಹಾಸು ಹಾಕಬೇಕು. ವಿದ್ಯುತ್‌ ಸಂಪರ್ಕ ಕಲ್ಪಿಸಬೇಕಿದೆ. ಎಲ್ಲೆಡೆ ಮರಳು, ಸಿಮೆಂಟ್‌ ಹರಡಿಕೊಂಡಿದೆ. ಯಾವ ಕೊಠಡಿಗೂ ಕಿಟಕಿ, ಬಾಗಿಲು ಇಲ್ಲ.

ವಿದ್ಯಾರ್ಥಿಗಳು ಕುಳಿತುಕೊಂಡು ಪರೀಕ್ಷೆ ಬರೆಯಲು ಬೆಂಚ್‌ಗಳಿಲ್ಲ. ಮದುವೆ ಸಮಾರಂಭದಲ್ಲಿ ಊಟಕ್ಕೆ ಬಳಸುವ ಟೇಬಲ್‌ಗಳನ್ನು ಹಾಕಲಾಗಿದೆ. ಹೊಸ ಕಟ್ಟಡದಲ್ಲಿ ಶೌಚಾಲಯವಿಲ್ಲ. ವಿದ್ಯಾರ್ಥಿಗಳು ಅಲ್ಲಿಯೇ ಇರುವ ಹಳೆಯ ಕಟ್ಟಡಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.

ಕೆಲಸಕ್ಕೆ ವಿದ್ಯಾರ್ಥಿಗಳ ಬಳಕೆ: ಪರೀಕ್ಷಾಮುನ್ನಾ ದಿನವಾದ ಮಂಗಳವಾರ ಕೊಠಡಿಗಳಲ್ಲಿ ಬಿದ್ದಿದ್ದ ಮಣ್ಣು ಹೊರಹಾಕುವ ಕೆಲಸದಲ್ಲಿ ಕಾಲೇಜಿನ ಸಹಾಯಕಿಯರು ತೊಡಗಿಸಿಕೊಂಡಿದ್ದರು. ವಿದ್ಯಾರ್ಥಿಗಳು ಟೇಬಲ್‌ಗಳನ್ನು ಎತ್ತಿಕೊಂಡು ಪರೀಕ್ಷಾ ಕೊಠಡಿಗಳಲ್ಲಿ ಸಾಲಾಗಿ ಹಾಕುತ್ತಿರುವುದು ಕಂಡು ಬಂತು. ಕಟ್ಟಡದ ಮೇಲೆ ನೀರಿನ ಪೈಪ್‌ಲೈನ್‌ ಸಂಪರ್ಕ ಕಲ್ಪಿಸುವ ಕೆಲಸದಲ್ಲೂ ವಿದ್ಯಾರ್ಥಿಗಳೇ ನಿರತರಾಗಿದ್ದರು.

‘ಹೇಳಿದ ಕೆಲಸ ಮಾಡದಿದ್ದರೆ ಪರೀಕ್ಷೆಯಲ್ಲಿ ಫೇಲ್‌ ಮಾಡುತ್ತೇವೆ ಎಂದು ಹೆದರಿಸುತ್ತಾರೆ. ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಪಿಯು ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬ ತಿಳಿಸಿದ.

‘ಪರೀಕ್ಷೆ ಬರೆಯಲು ಸರಿಯಾಗಿ ಬೆಂಚ್‌ಗಳ ವ್ಯವಸ್ಥೆ ಇಲ್ಲ.ಎರಡು ವಾರಗಳಿಂದ ಭಾರಿ ಬಿಸಿಲು ಇದೆ. ವಿದ್ಯುತ್‌ ಸಂಪರ್ಕವೇ ಇಲ್ಲದ ಕಾರಣ ಫ್ಯಾನ್‌ಗಳು, ವಿದ್ಯುದ್ದೀಪಗಳ ಸೌಲಭ್ಯ ದೂರದ ಮಾತು. ಅವ್ಯವಸ್ಥೆ ನಡುವೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಾದರೂ ಹೇಗೆ’ ಎಂದುಭಾರತ ವಿದ್ಯಾರ್ಥಿ ಫೆಡರೇಶನ್‌ ತಾಲ್ಲೂಕು ಘಟಕದ ಅಧ್ಯಕ್ಷ ಜೆ. ಶಿವಕುಮಾರ ಪ್ರಶ್ನಿಸಿದರು.

**

ಹಳೆ ಕಟ್ಟಡ ಸರಿಯಿಲ್ಲ. ನಿರ್ಮಾಣ ಹಂತದ ಕಟ್ಟಡವನ್ನು ಆಯ್ಕೆ ಮಾಡಲಾಗಿದೆ. ಗಾಳಿ, ಬೆಳಕು ಉತ್ತಮವಾಗಿದ್ದು, ಯಾವುದೇ ಸಮಸ್ಯೆ ಎದುರಾಗಲ್ಲ.
–ಸಿ. ಸಿಕಂದರ್‌, ಪ್ರಾಚಾರ್ಯ

**

ನಿರ್ಮಾಣ ಹಂತದ ಕಟ್ಟಡದಲ್ಲಿ ಪರೀಕ್ಷೆ ನಡೆಸುತ್ತಿರುವುದು ಸರಿಯಲ್ಲ. ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಬಾರದು.
–ಜೆ. ಶಿವಕುಮಾರ, ತಾಲ್ಲೂಕು ಅಧ್ಯಕ್ಷ, ಎಸ್‌.ಎಫ್‌.ಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT