ನೆರೆ ಸಂತ್ರಸ್ತರಿಗಾಗಿ ಸೆರಗೊಡ್ಡಿ ದೇಣಿಗೆ ಸಂಗ್ರಹಿಸಿದ ಹಂಪಿ ಕನ್ನಡ ವಿವಿ ಕುಲಪತಿ

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲಿಕಾ ಎಸ್. ಘಂಟಿ ಅವರು ನೆರೆ ಸಂತ್ರಸ್ತರಿಗಾಗಿ ಮಂಗಳವಾರ ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡಿ, ಸೆರಗೊಡ್ಡಿ ದೇಣಿಗೆ ಸಂಗ್ರಹಿಸಿದರು.
ನೆರೆಯಿಂದ ಸಂತ್ರಸ್ತರಾದ ಕೊಡಗು ಜಿಲ್ಲೆಯ ಜನತೆಗೆ ನೆರವಿನ ಹಸ್ತ ಚಾಚಲು ವಿ.ವಿ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕುಲಪತಿಯವರ ನೇತೃತ್ವದಲ್ಲಿ ದೇಣಿಗೆ ಸಂಗ್ರಹಿಸಿದರು.
ಬೆಳಿಗ್ಗೆ ನಗರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಕಾರ್ಯಕ್ರಮಕ್ಕೆ ಮಲ್ಲಿಕಾ ಘಂಟಿ ಚಾಲನೆ ನೀಡಿದರು. ಅದಾದ ನಂತರ ರೋಟರಿ ವೃತ್ತ, ಕಾಲೇಜು ರಸ್ತೆ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ರಾಮ ಟಾಕೀಸ್, ಮಹಾತ್ಮ ಗಾಂಧಿ ವೃತ್ತದ ಮೂಲಕ ಹಾದು ಹಂಪಿ ರಸ್ತೆಯ ವರೆಗೆ ಕಾಲ್ನಡಿಗೆಯಲ್ಲಿ ಓಡಾಡಿ ಜನರಿಂದ ಹಣ ಸಂಗ್ರಹಿಸಿದರು. ವಿಶೇಷ ರೀತಿಯಲ್ಲಿ ಅಲಂಕರಿಸಿದ ಟ್ರಾಕ್ಟರ್ಗೆ ಧ್ವನಿ ವರ್ಧಕ ಅಳವಡಿಸಲಾಗಿತ್ತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾ ಘಂಟಿ, ‘ಪ್ರವಾಹದಿಂದ ಇಡೀ ಕೊಡಗು ಜಿಲ್ಲೆಯ ಜನತೆ ಮನೆ–ಮಠ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ನೆರವಿಗೆ ಬರುವುದು ಪ್ರತಿಯೊಬ್ಬರ ಕರ್ತವ್ಯ. ಹಂಪಿ ಕನ್ನಡ ವಿ.ವಿ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಒಂದು ದಿನದ ಒಟ್ಟು ವೇತನ 10 ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡಲಾಗಿದೆ. ಜತೆಗೆ ಸಾರ್ವಜನಿಕರಿಂದಲೂ ದೇಣಿಗೆ ಸಂಗ್ರಹಿಸಿ, ಸರ್ಕಾರಕ್ಕೆ ತಲುಪಿಸಲಾಗುವುದು’ ಎಂದು ಹೇಳಿದರು.
‘ಸಂಕಷ್ಟದಲ್ಲಿರುವ ಕೊಡಗು ಜನತೆಯೊಂದಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸಬೇಕು. ಜತೆಗೆ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಹಾಯ ಮಾಡಿ, ಅವರು ಪುನಃ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು. ಇಂದಿನ ದೇಣಿಗೆ ಸಂಗ್ರಹಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದರು. ವಿ.ವಿ. ಸಿಬ್ಬಂದಿ ಇದ್ದರು.
ಎಸ್.ಯು.ಸಿ.ಐ: ಸಂಘಟನೆಯ ಕಾರ್ಯಕರ್ತರು ಕೇರಳ ಮತ್ತು ಕೊಡಗು ನೆರೆ ಸಂತ್ರಸ್ತರಿಗಾಗಿ ಮಂಗಳವಾರ ನಗರದಲ್ಲಿ ದೇಣಿಗೆ ಸಂಗ್ರಹಿಸಿದರು. ಇಲ್ಲಿನ ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಅವರು ದೇಣಿಗೆ ನೀಡಿ ಚಾಲನೆ ನೀಡಿದರು.
ಪ್ರಾಚಾರ್ಯ ವಿ.ಎಸ್. ಪ್ರಭಯ್ಯ ಇದ್ದರು. ಕಾರ್ಯಕರ್ತರು ಬಳಿಕ ಕಾಲೇಜು ರಸ್ತೆ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ರೋಟರಿ ವೃತ್ತದಲ್ಲಿ ಸಂಚರಿಸಿ ಹಣ ಸಂಗ್ರಹಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.