ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಜನಪದ ಶೈಲಿ ಚಿತ್ರಕಲಾವಿದ ಪರಶುರಾಮಪ್ಪ ನಿಧನ

Last Updated 26 ಆಗಸ್ಟ್ 2020, 6:14 IST
ಅಕ್ಷರ ಗಾತ್ರ

ಕಂಪ್ಲಿ: ವಿಜಯನಗರ ಜನಪದ ಶೈಲಿ ಮತ್ತು ಕಿನ್ನಾಳ ಕಲೆ ಚಿತ್ರಕಲಾವಿದ ಪರಶುರಾಮಪ್ಪ (75) ಅನಾರೋಗ್ಯದಿಂದ ಬುಧವಾರ ನಿಧನರಾದರು.

ಚಿತ್ರಗಾರ ಪರಶುರಾಮಪ್ಪ ಅವರು ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗ ಅವರ ಮಾವನವರಾದ ರಾಮಣ್ಣ ಚಿತ್ರಗಾರರಿಂದ ಕಲೆಯ ಸಂಸ್ಕಾರ ಪಡೆದರು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳದೆ ಇಡೀ ಜೀವನವನ್ನೇ ಕಲೆಗಾಗಿ ಮುಡಿಪಿಟ್ಟಿದ್ದರು.

ಅವರು ಕೈಯಲ್ಲಿ ಉಳಿ, ಕೊಡತೆ ಹಿಡಿದರೆಂದರೆ ಬರಡು ಮರವು ಕಲಾಕೃತಿಯಾಗಿ ಹೊರಹೊಮ್ಮುತ್ತಿತ್ತು. ಕಾಷ್ಠ, ಮಣ್ಣಿನ ಮೂರ್ತಿಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರಾಗಿದ್ದರು.

ಪ್ರಾಣಿ, ಮನುಷ್ಯರ ಮುಖವಾಡಗಳನ್ನು ಆಕರ್ಷಕವಾಗಿ ತಯಾರಿಸುತ್ತಿದ್ದರು. ದೇವತೆಗಳ ಅಲಂಕೃತ ಛತ್ರಿ ಛಾಮರಗಳನ್ನು, ಕುಂಚದಿಂದ ಚಿತ್ತಾರ, ಬಳ್ಳಿಗಳನ್ನು ಚಿತ್ರಿಸುವಲ್ಲಿ, ಬಯಲಾಟ, ನಾಟಕದ ಪಾತ್ರದಾರಿಗಳಿಗೆ ಪ್ರಸಾಧನ(ಮೇಕಪ್) ಸೇವೆ ಒದಗಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಗೋಡೆಗಳ ಮೇಲೆ ಪ್ರಕೃತಿ ಚಿತ್ರ, ಮದುವೆ ಮನೆಯಲ್ಲಿ ಸಾಸ್ವಿಕಟ್ಟೆ, ಐದಗಿತ್ತಿಯರ ಚಿತ್ರ, ಹಸೆಚಿತ್ರ, ಕಾಮಧೇನು, ಕಲ್ಪವೃಕ್ಷ ಜನಪದ ಚಿತ್ರಕಲೆ, ದೇವಸ್ಥಾನಗಳ ಗೋಪುರಗಳಿಗೆ ಬಣ್ಣ ನೀಡುವಲ್ಲಿ ಪರಶುರಾಮಪ್ಪ ಕೌಶಲ ಮೆರೆದಿದ್ದರು.

ಜಾತ್ರೆಯ ರಥಗಳಿಗೆ ಗೊಂಬೆಗಳನ್ನು ಕಟ್ಟಿ ಅಲಂಕರಿಸುವ, ಅಡ್ಡಪಲ್ಲಕ್ಕಿಗಳಿಗೆ ವಿವಿಧ ಫಲಪುಷ್ಪಗಳಿಂದ ಸಿಂಗರಿಸುವ ಮತ್ತು ದಸರಾ ನವರಾತ್ರಿಯಲ್ಲಿ ಗೊಂಬೆಗಳ ಪ್ರದರ್ಶಿಸುತ್ತಿದ್ದ, ಗ್ರಾಮ ದೇವತೆಗಳನ್ನು ತಯಾರಿಸಿ ನೈಜ ಬಣ್ಣ ಬಳಿದು ಜೀವಕಳೆ ತುಂಬುತ್ತಿದ್ದ ಅವರು ಇನ್ನು ನೆನಪು ಮಾತ್ರ.

ಕಲೆಯನ್ನೆ ಉಸಿರಾಗಿಸಿಕೊಂಡಿದ್ದ ಪರಶುರಾಮಪ್ಪ ಅವರಿಗೆ ಪತ್ನಿ ಸುಮಿತ್ರಮ್ಮ ಮತ್ತು ಮಕ್ಕಳು ಸಹಕರಿಸುತ್ತಿದ್ದರು.

ದೆಹಲಿಯ ಡಿಜಿಟಲ್ ಹಂಪಿ ವರ್ಕ್ ಶಾಪ್ ಮತ್ತು ಎಕ್ಜಿಬಿಷನ್ ಅಟ್ ಇಂಡಿಯಾ ಹೆಬಿಟ್ಯಾಟ್ ಸೆಂಟರ್, ಹೊಸ ಮಲಪನಗುಡಿಯ ಹಂಪಿ ಹೆರಿಟೇಜ್ ಹೊಟೇಲ್, ಮೈಸೂರು ದಸರಾ ಸೇರಿ ವಿವಿಧೆಡೆ ಅವರ ಕಲಾಕೃತಿಗಳ ಪ್ರದರ್ಶನ ನಡೆದಿತ್ತು.

‘ಕಲಾ ಕೇಸರಿ’, ‘ಪೇಟೆ ಬಸವಶ್ರೀ’ ಪ್ರಶಸ್ತಿ, ‘ಚಿತ್ರಕಲಾ ಸೇವಾ ಭಾರ್ಗವ’, ‘ನಿಮಿಷಾಂಬಾ ಶ್ರೀ’, ‘ಕರಿಸಿದ್ದ ಶ್ರೀ’ ಪ್ರಶಸ್ತಿ ಪುರಸ್ಕೃತರಾಗಿದ್ದರು.

ಹೊಸಪೇಟೆಯ ಆಕಾಶವಾಣಿ, ಚಂದನ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಅವರ ಸಂದರ್ಶನಗಳು ಪ್ರಸಾರಗೊಂಡಿವೆ.

ಕ್ಯಾಲಿಫೋರ್ನಿಯ ಯಾಲೆ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು, ಬೆಂಗಳೂರು ದಯಾನಂದ ಸಾಗರ ಕಾಲೇಜ್ ಆಫ್ ಆರ್ಕಿಟೆಕ್ಟ್ ವಿದ್ಯಾರ್ಥಿಗಳು ಕ್ಷೇತ್ರ ಕಾರ್ಯದ ಸಲುವಾಗಿ ಪರಶುರಾಮಪ್ಪ ಅವರ ಮನೆಗೆ ಭೇಟಿ ನೀಡಿ ಅಧ್ಯಯನ ನಡೆಸಿ ಕಿರು ಸಂಶೋಧನ ಕೃತಿಗಳನ್ನು ರಚಿಸಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT