ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆನಂದ’ ತಂದ ವಿಜಯನಗರ ಘೋಷಣೆ

Last Updated 8 ಫೆಬ್ರುವರಿ 2021, 17:07 IST
ಅಕ್ಷರ ಗಾತ್ರ

ಹೊಸಪೇಟೆ: ವಿಜಯನಗರ ಜಿಲ್ಲೆ ರಚಿಸಿ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ನಗರ ಸೇರಿದಂತೆ ಪಶ್ಚಿಮ ತಾಲ್ಲೂಕುಗಳಲ್ಲಿ ಸೋಮವಾರ ಸಂಜೆ ಸಂಭ್ರಮ ಮನೆ ಮಾಡಿತು. ಎಲ್ಲೆಲ್ಲೂ ಆನಂದ, ಸಡಗರದ ವಾತಾವರಣ ಸೃಷ್ಟಿಯಾಗಿತು.

ಜಿಲ್ಲೆ ಘೋಷಣೆಯಾದ ನಂತರ ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಅವರು ಹೆಲಿಕ್ಯಾಪ್ಟರ್‌ನಲ್ಲಿ ನಗರದ ಮುನ್ಸಿಪಲ್‌ ಮೈದಾನದ ಹೆಲಿಪ್ಯಾಡ್‌ಗೆ ಬಂದಿಳಿದರು. ಅವರು ಬರುವ ವಿಷಯ ಮೊದಲೇ ಗೊತ್ತಾಗಿದ್ದರಿಂದ ನೂರಾರು ಜನ ಅಲ್ಲಿ ಸೇರಿದ್ದರು. ಆನಂದ್ ಸಿಂಗ್ ಬರುತ್ತಿದ್ದಂತೆ ಅವರ ಪರ ಜಯಘೋಷ ಹಾಕಿದರು. ವಿಜಯನಗರಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದರು.

ಹಾರ, ತುರಾಯಿ ಹಿಡಿದುಕೊಂಡು ಅವರನ್ನು ಮುತ್ತಿಕೊಂಡರು. ಬಳಿಕ ಆನಂದ್ ಸಿಂಗ್ ಅವರು ಸ್ಕಾರ್ಪಿಯೊ ವಾಹನದ ಮುಂಭಾಗದಲ್ಲಿ ನಿಂತು ‘ವಿಜಯನಗರ’ ಎಂದು ಬರೆದಿದ್ದ ಕೆಂಪು ಬಾವುಟ, ಅವರ ಭಾವಚಿತ್ರವಿದ್ದ ಬಿಳಿ ಬಣ್ಣದ ಧ್ವಜ ಬೀಸಿ ವಿಜಯದ ಸಂಕೇತ ತೋರಿಸಿದರು.

ನಂತರ ಜೀಪ್‌ ಮುಂಭಾಗದಲ್ಲಿಯೇ ನಿಂತು ನಗರದಲ್ಲಿ ರ್‍ಯಾಲಿ ನಡೆಸಿದರು. ಅವರೊಂದಿಗೆ ಅವರ ಬೆಂಬಲಿಗರ ದಂಡು ಇತ್ತು. ನಗರದ ಕಾಲೇಜು ರಸ್ತೆ, ರೋಟರಿ ವೃತ್ತ, ಬಸ್ ನಿಲ್ದಾಣ, ಮೂರಂಗಡಿ ವೃತ್ತ, ಹಂಪಿ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಹಂಪಿ ರಸ್ತೆ ಮೂಲಕ ಕೊಂಡನಾಯಕನಹಳ್ಳಿ, ಮಲಪನಗುಡಿ, ಗಾಳೆಮ್ಮನ ಗುಡಿ, ಕಮಲಾಪುರ ಮಾರ್ಗವಾಗಿ ಹಂಪಿಗೆ ತೆರಳಿದರು.

ನೇರವಾಗಿ ತುಂಗಭದ್ರಾ ನದಿ ಸ್ನಾನಘಟ್ಟಕ್ಕೆ ತೆರಳಿ, ಸ್ನಾನ ಮಾಡಿದರು. ಆನೆ ಲಕ್ಷ್ಮಿಯಿಂದ ಹಾರ ಹಾಕಿಸಿಕೊಂಡು ಆಶೀರ್ವಾದ ಪಡೆದು, ಅದರ ಸೊಂಡಿಲಿಗೆ ಮುತ್ತಿಕ್ಕಿದರು. ನಂತರ ಹಳದಿ ವರ್ಣದ ಮಡಿ ಬಟ್ಟೆ ಧರಿಸಿಕೊಂಡು ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿದರು. ವಿರೂಪಾಕ್ಷನ ಸಮ್ಮುಖದಲ್ಲಿ ಅಧಿಸೂಚನೆ ಪತ್ರ ಇಟ್ಟು ಪೂಜೆ ನೆರವೇರಿಸಿದರು.

ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, ‘ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಆಡಳಿತಾತ್ಮಕ ದೃಷ್ಟಿಯಿಂದ ಪಶ್ಚಿಮ ತಾಲ್ಲೂಕುಗಳ ಜನರಿಗೆ ಸಹಾಯವಾಗಲಿದೆ. ಇದರಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ಎರಡು ಜಿಲ್ಲೆಗಳ ನಡುವೆ ಆಡಳಿತದ ಅನುಕೂಲಕ್ಕಾಗಿ ಒಂದು ಗಡಿರೇಖೆ ಬರಲಿದೆ. ಆದರೆ, ಹಿಂದಿನಂತೆ ನಾವೆಲ್ಲ ಅಣ್ಣ ತಮ್ಮಂದಿರಂತೆಯೇ ಇರುತ್ತೇವೆ. ಜಿಲ್ಲೆ ವಿರುದ್ಧ ಹೋರಾಟ ನಡೆಸಿದವರು ನಮ್ಮ ಅಣ್ಣ ತಮ್ಮಂದಿರು. ಅದು ಅವರ ವೈಯಕ್ತಿಕ ವಿಚಾರ. ಅವರನ್ನು ಆತ್ಮೀಯವಾಗಿ ನೋಡುತ್ತೇನೆ. ಸದಾ ಅಣ್ಣ ತಮ್ಮಂದಿರಂತೆ ಇರೋಣ’ ಎಂದರು.

‘ಸಚಿವ ಸ್ಥಾನ ಮುಖ್ಯವಲ್ಲ. ವಿಜಯನಗರ ಜಿಲ್ಲೆ ನನ್ನ ಹಾಗೂ ಪಶ್ಚಿಮ ತಾಲ್ಲೂಕುಗಳ ಜನರ ಮೊದಲ ಆದ್ಯತೆಯಾಗಿತ್ತು. ಗಡಿ ಭಾಗದಲ್ಲಿ ಬಳ್ಳಾರಿಯವರಿಗೆ ತೊಂದರೆಯಾದರೆ ನಾವು ಸುಮ್ಮನಿರುವುದಿಲ್ಲ. ಬೆಳಗಾವಿ ಕೂಡ ಗಡಿ ಭಾಗದಲ್ಲಿದೆ. ಗಡಿ ಭಾಗದ ಜಿಲ್ಲೆ ಕಿತ್ತುಕೊಳ್ಳಲು ಅದೇನೂ ಗಿಡದ ನೆಲ್ಲಿಕಾಯಿ ಅಲ್ಲ. ಅಂತಹ ಸಂದರ್ಭ ಬಂದರೆ ವಿಜಯನಗರದವರು ಸೇರಿ ಹೋರಾಟ ಮಾಡುತ್ತೇವೆ. ರಾಜ್ಯದ ಯಾವ ಗಡಿ ಜಿಲ್ಲೆಯೂ ಬೇರೆ ರಾಜ್ಯಕ್ಕೆ ಹೋಗೊಲ್ಲ’ ಎಂದು ಹೇಳಿದರು.

ನೆಲಕ್ಕೆ ನಮಸ್ಕಾರ, ತಂದೆಗೆ ಆಲಿಂಗನ
ಬೆಂಗಳೂರಿನಿಂದ ಹೆಲಿಕ್ಯಾಪ್ಟರ್‌ನಲ್ಲಿ ನಗರದ ಹೆಲಿಪ್ಯಾಡ್‌ಗೆ ಬಂದಿಳಿದ ತಕ್ಷಣ ಆನಂದ್‌ ಸಿಂಗ್‌ ಅವರು ಎರಡು ಕೈಗಳನ್ನು ನೆಲಕ್ಕೆ ಊರಿ, ಶಿರಬಾಗಿ ನೆಲಕ್ಕೆ ನಮಸ್ಕರಿಸಿದರು. ನಂತರ ಜೈ ವಿಜಯನಗರ ಎಂದು ಅಲ್ಲಿ ಸೇರಿದ್ದ ಜನರತ್ತ ವಿಜಯದ ಸಂಕೇತ ತೋರಿಸಿದರು.

ಬೆಂಬಲಿಗರಿಂದ ಹಾರ, ತುರಾಯಿ ಹಾಕಿಸಿಕೊಂಡ ಅವರು, ಅಲ್ಲಿಯೇ ಕಾದು ನಿಂತಿದ್ದ ಅವರ ತಂದೆ ಪೃಥ್ವಿರಾಜ್‌ ಸಿಂಗ್‌ ಅವರನ್ನು ತಬ್ಬಿಕೊಂಡು ಸಂಭ್ರಮಿಸಿದರು. ಈ ವೇಳೆ ಅವರ ಅಳಿಯ ಸಂದೀಪ್‌ ಸಿಂಗ್‌, ಭಾಮೈದ ಧರ್ಮೇಂದ್ರ ಸಿಂಗ್‌ ಇದ್ದರು.

‘ತಿಂಗಳೊಳಗೆ ಡಿಸಿ, ಎಸ್ಪಿ ಕಚೇರಿ’
‘ಈಗಷ್ಟೇ ವಿಜಯನಗರ ಜಿಲ್ಲೆ ಘೋಷಣೆಯಾಗಿದೆ. ತಿಂಗಳೊಳಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಆರಂಭಿಸಲಾಗುವುದು’ ಎಂದು ಆನಂದ್‌ ಸಿಂಗ್‌ ತಿಳಿಸಿದರು.

‘ಎಲ್ಲಿ ಯಾವ ಕಚೇರಿಯಿದ್ದರೆ ಅನುಕೂಲ ಎನ್ನುವುದಕ್ಕೆ ಸಂಬಂಧಿಸಿದಂತೆ ಸರ್ವೇ ನಡೆಸಲಾಗುತ್ತಿದೆ. ಬಳಿಕ ನೀಲನಕಾಶೆ ಸಿದ್ಧಪಡಿಸಿ ಕೆಲಸ ಆರಂಭಿಸಲಾಗುವುದು. ಪ್ರತಿಭಟನೆ ನಡೆಸುವುದಕ್ಕೂ ಒಂದು ಜಾಗ ಗುರುತಿಸಲಾಗುವುದು. ನಗರವನ್ನು ವ್ಯವಸ್ಥಿತವಾಗಿ ಕಟ್ಟಲಾಗುವುದು’ ಎಂದು ಹೇಳಿದರು.

ಹೋರಾಟ ಸಮಿತಿ ಸಂಭ್ರಮಾಚರಣೆ
ಆರಂಭದಿಂದಲೂ ವಿಜಯನಗರ ಜಿಲ್ಲೆ ಹೋರಾಟಕ್ಕೆ ಹೋರಾಡುತ್ತಿರುವ ವಿಜಯನಗರ ಜಿಲ್ಲಾ ಹೋರಾಟ ಸಮಿತಿಯ ಕಾರ್ಯಕರ್ತರು ಸಂಜೆ ನಗರದ ರೋಟರಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಇದೇ ವೇಳೆ ಸಮಿತಿಯ ಹೆಸರನ್ನು ವಿಜಯನಗರ ಜಿಲ್ಲಾ ಸಂರಕ್ಷಣ ಸಮಿತಿ ಎಂದು ಬದಲಿಸಿಕೊಂಡರು.

ಸಮಿತಿ ಸಂಚಾಲಕರಾದ ವೈ.ಯಮುನೇಶ, ಮಲ್ಹಾರಿ ದೀಕ್ಷಿತ್, ಗುಜ್ಜಲ್‌ ನಾಗರಾಜ್‌, ಎಂ.ಸಿ.ವೀರಸ್ವಾಮಿ, ಗುಜ್ಜಲ ಗಣೇಶ, ನಿಂಬಗಲ್ ರಾಮಕೃಷ್ಣ, ರೇವಣಸಿದ್ದಪ್ಪ, ಶಿವಾನಂದ ಕಿನ್ನಾಳ, ಎಸ್. ಗಾಳೆಪ್ಪ, ವಿಶ್ವನಾಥ್ ಕೌತಾಳ್, ಎಚ್.ಮಹೇಶ್ ಇತರರಿದ್ದರು.

ರಾತ್ರಿ ಆನಂದ್‌ ಸಿಂಗ್‌ ಬೆಂಬಲಿಗರು ಇದೇ ರೋಟರಿ ವೃತ್ತದಲ್ಲಿ ಸುಮಾರು ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆಕಾಶದಲ್ಲಿ ಸಿಡಿಮದ್ದಿನ ಚಿತ್ತಾರ ನೋಡಲು ವೃತ್ತದಲ್ಲಿ ಅಪಾರ ಜನ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT