ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಜಯನಗರ ವೈಭವ’ ಅಧಿವೇಶನ

ಕಿರು ಉದ್ಯಮ ವ್ಯಾಪ್ತಿಗೆ ಶಾಮಿಯಾನ ಸಪ್ಲೈಯರ್ಸ್‌ಗಳನ್ನು ಸೇರಿಸಲು ಅಪ್ಪಣ್ಣ ಆಗ್ರಹ
Last Updated 12 ಜುಲೈ 2019, 12:26 IST
ಅಕ್ಷರ ಗಾತ್ರ

ಹೊಸಪೇಟೆ: ‘ದಿ ನಾರ್ತ್‌ ಕರ್ನಾಟಕ ಟೆಂಟ್‌ ಅಂಡ್‌ ಡೆಕೊರೇಟರ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌ 16ನೇ ಮಹಾ ಅಧಿವೇಶನ ‘ವಿಜಯನಗರ ವೈಭವ’ ಶೀರ್ಷಿಕೆ ಅಡಿ ಶುಕ್ರವಾರ, ಶನಿವಾರ (ಜು.13,14) ನಗರದ ನಾಗಪ್ಪ ಕಟ್ಟೆ ಬಳಿ ಹಮ್ಮಿಕೊಳ್ಳಲಾಗಿದೆ’ ಎಂದು ಅಶೋಸಿಯೇಷನ್‌ ಅಧ್ಯಕ್ಷ ಕೆ. ನರಸಿಂಹಮೂರ್ತಿ ಅಪ್ಪಣ್ಣ ತಿಳಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ 13 ಜಿಲ್ಲೆ ಸೇರಿದಂತೆ ಅನ್ಯ ರಾಜ್ಯದ ಐದು ಸಾವಿರ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಗರದ ಹನ್ನೊಂದು ಕಲ್ಯಾಣ ಮಂಟಪ, ವಿವಿಧ ಹೋಟೆಲ್‌ಗಳಲ್ಲಿ ಒಟ್ಟು 300 ರೂಮ್‌ಗಳನ್ನು ಅವರ ವಾಸ್ತವ್ಯಕ್ಕೆ ಕಾಯ್ದಿರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಅಧಿವೇಶನದಲ್ಲಿ ವೃತ್ತಿನಿರತ ನೌಕರರು ಎದುರಿಸುತ್ತಿರುವ ಸಮಸ್ಯೆಗಳು, ಸಿಗಬೇಕಾದ ಸರ್ಕಾರದ ಸೌಲಭ್ಯಗಳ ಕುರಿತು ಚರ್ಚಿಸಲಾಗುವುದು. ವೃತ್ತಿಯಲ್ಲಿ ಇನ್ನೂ ಹೆಚ್ಚಿನ ಪರಿಣತಿ ಸಾಧಿಸಲು ಅಗತ್ಯ ಮಾಹಿತಿ ನೀಡಲಾಗುವುದು. 100 ಮಳಿಗೆಗಳಲ್ಲಿ ವಸ್ತು ಪ್ರದರ್ಶನ ನಡೆಯಲಿದ್ದು, ನಮ್ಮ ವೃತ್ತಿಗೆ ಸಂಬಂಧಿಸಿದ ಪರಿಕರಗಳ ಪ್ರದರ್ಶನ, ಮಾರಾಟ ನಡೆಯಲಿದೆ’ ಎಂದು ವಿವರಿಸಿದರು.

‘ಶುಕ್ರವಾರ ಬೆಳಿಗ್ಗೆ 11.30ಕ್ಕೆ ನಗರದ ವಡಕರಾಯ ದೇವಸ್ಥಾನದಿಂದ ತಾಲ್ಲೂಕು ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಯಲಿದೆ. ಸಂಜೆ 4ಕ್ಕೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ಉದ್ಘಾಟಿಸುವರು. ಕೊಟ್ಟೂರು ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ, ಹರಪನಹಳ್ಳಿ ತೆಗ್ಗಿನಮಠದ ವರಸದ್ಯೋಜಾತ ಶಿವಚಾರ್ಯ ಸ್ವಾಮೀಜಿ, ಮೌಲ್ವಿ ಸೈಯದ್‌ ಮುಸ್ತಾಫ್‌ ಅಹಮ್ಮದ್‌, ಫಾದರ್‌ ಜೆ. ಪೀಟರ್‌ ಜೇಮ್ಸ್‌ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸುವರು’ ಎಂದು ತಿಳಿಸಿದರು.

‘ದೇಶದಾದ್ಯಂತ ಶಾಮಿಯಾನ ಮಾಲೀಕರು ವರ್ಷಕ್ಕೆ ₹30 ಕೋಟಿ ಜಿ.ಎಸ್‌.ಟಿ. ಭರಿಸುತ್ತಾರೆ. ಆದರೆ, ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸರ್ಕಾರದಿಂದ ಯಾವುದೇ ರೀತಿಯ ಸೌಲಭ್ಯಗಳು ಸಿಗುತ್ತಿಲ್ಲ. ಈ ಉದ್ಯಮವನ್ನು ಕಿರು ಉದ್ಯಮದ ವ್ಯಾಪ್ತಿಗೆ ತರಬೇಕು. ಜೀವ ವಿಮೆ, ಅಪಘಾತ ವಿಮೆ, ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಅದಕ್ಕೆ ಯಾವ ಸರ್ಕಾರವೂ ಸ್ಪಂದಿಸಿಲ್ಲ. ಬರುವ ದಿನಗಳಲ್ಲಿ ಈ ವಿಷಯದ ಕುರಿತು ಹೋರಾಟ ನಡೆಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ’ ಎಂದರು.

‘ರಾಜ್ಯದ ಎಲ್ಲ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಶಾಮಿಯಾನ ವೃತ್ತಿಯಲ್ಲಿ ತೊಡಗಿಸಿಕೊಂಡವರು ಇದ್ದಾರೆ. ಅವರು ಹಾಗೂ ಅವರ ಕುಟುಂಬದವರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

‘ನಮ್ಮ ಶಾಮಿಯಾನ ಸಂಘದಿಂದ ಎರಡು ಲಕ್ಷ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್‌ ವಿತರಿಸಲಾಗಿದೆ. ವಿಧವೆಯರಿಗೆ ಹೊಲಿಗೆ ಯಂತ್ರಗಳನ್ನು ಕೊಡಲಾಗಿದೆ. ತುಂಗಭದ್ರಾ ಹೂಳೆತ್ತಲು ನೆರವು ನೀಡಲಾಗಿದೆ. ಸರ್ವಧರ್ಮ ಸಾಮೂಹಿಕ ವಿವಾಹ, ಸಸಿ ನೆಡುವ ಕಾರ್ಯಕ್ರಮ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುತ್ತದೆ. ಅಧಿವೇಶನದ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ಜನ ರಕ್ತದಾನ ಮಾಡುವ ಕಾರ್ಯಕ್ರಮವಿದೆ’ ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ. ಸೋಮಶೇಖರ್‌, ಸಂಘದ ಗೌರವ ಅಧ್ಯಕ್ಷ ಎನ್‌. ರಾಮರಾವ ಗದಗ, ಮುಖಂಡರಾದ ಶಿವಾನಂದ ಮಾನಕರ, ಇ. ಸುಬ್ರಮಣ್ಯಂ, ಬಿ. ಕಿಶೋರ್‌, ವಿ. ಜಂಬಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT