ಬುಧವಾರ, ಅಕ್ಟೋಬರ್ 28, 2020
17 °C

PV Web Exclusive: ಎಲ್ಲರ ಕಿಸೆಯಲ್ಲೂ ಸಾವಿರದ ನೋಟು; ಚಿಲ್ಲರೆಗೆ ಕಷ್ಟ..ಕಷ್ಟ..

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಹತ್ತರಿಂದ ಹನ್ನೆರಡು ವರ್ಷಗಳ ಹಿಂದಿನ ಮಾತು. ಅದು ಅಕ್ರಮ ಗಣಿಗಾರಿಕೆ ಉತ್ತುಂಗ ಸ್ಥಿತಿಯಲ್ಲಿದ್ದ ಕಾಲ. ಬಳ್ಳಾರಿಗೆ ‘ರಿಪಬ್ಲಿಕ್‌ ಆಫ್‌ ಬಳ್ಳಾರಿ’ ಎಂಬ ಕಳಂಕ ಬೇರೆ. ಆದರೆ, ಸ್ಥಳೀಯರು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಕಾರಣವಿಷ್ಟೇ ಆಗ ಎಲ್ಲರ ಬಳಿಯೂ ಸಾವಿರದ ಕೆಂಪು ನೋಟುಗಳೇ ಓಡಾಡುತ್ತಿದ್ದವು. ಹಾಗಾಗಿ ಅವರೂರಿಗೆ ಯಾವ ಹೆಸರಿನಿಂದ ಕರೆದರೇ ಏನಾಗಬೇಕು.

ಕೆಲಸಕ್ಕೆ ಹೋಗಿ ಮರಳಿ ಬಂದವರೆಲ್ಲರ ಬಳಿಯೂ ಸಾವಿರದ ನೋಟುಗಳೇ ಇರುತ್ತಿದ್ದವು. ನಿತ್ಯ ಮದ್ಯದಂಗಡಿ, ಬಾರ್‌ ಅಂಡ್‌ ರೆಸ್ಟೊರೆಂಟ್‌ನಲ್ಲಿ ಜನಜಾತ್ರೆ. ಎಲೆಕ್ಟ್ರಾನಿಕ್ಸ್‌, ಬಟ್ಟೆ, ಶೂ ಮಳಿಗೆಗಳಲ್ಲಿ ಸದಾ ಜನದಟ್ಟಣೆ. ಹೀಗೆ ಖರೀದಿ ಭರಾಟೆ ಜೋರಾಗಿತ್ತು. ರಸ್ತೆ ಬದಿಯ ಗೂಡಂಗಡಿಗಳು ಅದಕ್ಕೆ ಹೊರತಾಗಿರಲಿಲ್ಲ. ನಿತ್ಯವೂ ಭರ್ಜರಿ ವ್ಯಾಪಾರ ನಡೆಯುತ್ತಿತ್ತು. ಆದರೆ, ಎಲ್ಲರೂ ಸಾವಿರದ ನೋಟುಗಳನ್ನು ತೆಗೆದುಕೊಂಡು ಬರುತ್ತಿದ್ದರಿಂದ ವ್ಯಾಪಾರಿಗಳಿಗೆ ಚಿಲ್ಲರೆಯೇ ದೊಡ್ಡ ಸಮಸ್ಯೆಯಾಗಿತ್ತು.

ಇದು ಬರುಬರುತ್ತ ವ್ಯಾಪಾರಿಗಳಿಗೆ ದೊಡ್ಡ ತಲೆನೋವಾಗಿತ್ತು. ಅದರಿಂದ ತಪ್ಪಿಸಿಕೊಳ್ಳಲೆಂದೆ ಕೆಲವರು, ಅವರ ಮಳಿಗೆ ಎದುರು, ‘ಚಿಲ್ಲರೆ ಕೊಟ್ಟು’ ಸಹಕರಿಸಿ ಎಂದು ಫಲಕ ಕೂಡ ಹಾಕಿದ್ದರು. ಆದರೆ, ಹೆಚ್ಚಿನವರು ಅನಕ್ಷರಸ್ಥರು. ಕೆಲವರಿಗೆ ಓದಲು ಗೊತ್ತಿದ್ದರೂ ಸಹ ಅವರ ಬಳಿ ಚಿಲ್ಲರೆ ಇರುತ್ತಿರಲಿಲ್ಲ.

ಏಕೆಂದರೆ ಆ ಸಂದರ್ಭವೇ ಹಾಗಿತ್ತು. ಅದಿರಿನ ಗಣಿಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದವರೆಲ್ಲರೂ ಕೈತುಂಬ ಹಣ ಗಳಿಸುತ್ತಿದ್ದರು. ಸಂಜೆಯಾದೊಡನೆ ಐನೂರು, ಸಾವಿರದ ನೋಟುಗಳೊಂದಿಗೆ ಮನೆಗೆ ಹಿಂತಿರುಗುತ್ತಿದ್ದರು. ಲಾರಿ ಓಡಿಸುವವರು, ಅದಿರು ತುಂಬಿದ ಲಾರಿ ಮೇಲೆ ತಾಡಪಾಲ್‌ ಹಾಕುವವರು, ಕ್ರೇನ್‌, ಜೆ.ಸಿ.ಬಿ. ನಡೆಸುವವರು, ಲಾರಿಗಳ ಸಂಖ್ಯೆ ಎಣಿಕೆ ಮಾಡುವವರೆಲ್ಲರಿಗೂ ಕೈತುಂಬ ಹಣ ಸಿಗುತ್ತಿತ್ತು. ಹೀಗಾಗಿ ಎಲ್ಲರ ಬಳಿಯೂ ಕೆಂಪು ನೋಟುಗಳೇ ಇರುತ್ತಿದ್ದವು.

ಗಣಿನಗರಿ ಹೊಸಪೇಟೆ ಸುತ್ತಮುತ್ತಲಿನ ಅದಿರಿನ ಗಣಿಗಳಿಂದ ನಿತ್ಯ ಹತ್ತು ಸಾವಿರಕ್ಕೂ ಹೆಚ್ಚು ಲಾರಿಗಳು ಅದಿರನ್ನು ಲೋಡ್‌ ಮಾಡಿಕೊಂಡು ಹೋಗುತ್ತಿದ್ದವು. ಲಾರಿಗಳ ಓಡಾಟದ ಅಬ್ಬರ, ಗಣಿಗಳಲ್ಲಿ ಹಗಲು–ರಾತ್ರಿಯೆನ್ನದೆ ನಡೆಸುತ್ತಿದ್ದ ಸ್ಫೋಟದಿಂದ ಇಡೀ ಊರು ಧೂಳಿನಿಂದ ಆವರಿಸಿಕೊಂಡಿರುತ್ತಿತ್ತು. ಮನೆಯಲ್ಲಿ ಕೂತವರಿಗೂ ಧೂಳಿನ ಸಮಸ್ಯೆ ಬಿಟ್ಟಿರಲಿಲ್ಲ. ಎಲ್ಲರೂ ಗೊಣಗುವವರೇ. ಆದರೆ, ಆ ಗಣಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಾವಿರಾರು ಜನ ಮಾತ್ರ ಅದನ್ನು ಲೆಕ್ಕಿಸದೇ ಅಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಕೈತುಂಬ ಹಣ ಸಿಗುತ್ತಿತ್ತು.

‘ಆಗ ಜಿಲ್ಲೆಯ ಬಹುತೇಕ ಗಣಿಗಳನ್ನು ಕೆಲವು ರಾಜಕಾರಣಿಗಳು ಕಾನೂನುಬಾಹಿರವಾಗಿ ಅವರ ಸ್ವಾಧೀನಕ್ಕೆ ತೆಗೆದುಕೊಂಡಿದ್ದರು. ಹಗಲು–ರಾತ್ರಿಯೆನ್ನದೆ ಗಣಿಗಾರಿಕೆ ಮಾಡಿ ಬೇಕಾಬಿಟ್ಟಿ ಅದಿರು ತೆಗೆದು ಸಾಗಿಸುತ್ತಿದ್ದರು. ಅದಕ್ಕೆ ಯಾವುದೇ ಮಿತಿಯೇ ಇರಲಿಲ್ಲ. ಹೆಚ್ಚಿನ ಹಣ ಮಾಡುವುದೇ ಅವರ ಉದ್ದೇಶವಾಗಿತ್ತು. ಎಷ್ಟು ಜನ ಕೆಲಸಕ್ಕೆ ಕೂಲಿ ಆಳುಗಳು ಇದ್ದರೂ ಆಗ ಕಡಿಮೆ ಬೀಳುತ್ತಿದ್ದರು. ಹೀಗಾಗಿ ಕೆಲಸ ಮಾಡುತ್ತಿದ್ದವರಿಗೆ ಕೈತುಂಬ ಹಣ ಕೊಡುತ್ತಿದ್ದರು. ಹಣದಾಸೆಗೆ ಸಹಜವಾಗಿಯೇ ಜನ ಅವರ ಆರೋಗ್ಯ ಲೆಕ್ಕಿಸದೇ ಕೆಲಸಕ್ಕೆ ಹೋಗುತ್ತಿದ್ದರು’ ಎಂದು ನೆನಪು ಮಾಡಿಕೊಳ್ಳುತ್ತಾರೆ ವಕೀಲ ಯೂಸುಫ್‌ ಪಟೇಲ್‌.

‘ಒಂದು ಅದಿರಿನ ಲಾರಿ ಮೇಲೆ ತಾಡಪಾಲ್‌ ಹಾಕಿದರೆ ₹200 ಕೊಡುತ್ತಿದ್ದರು. ನಿತ್ಯ ಹತ್ತು ಸಾವಿರಕ್ಕೂ ಹೆಚ್ಚು ಲಾರಿಗಳು ಓಡಾಡುತ್ತಿದ್ದವು. ಅನೇಕರು ಆ ಕೆಲಸ ಮಾಡುತ್ತಿದ್ದರು. ಅವರು ದಿನಕ್ಕೆ ಎಷ್ಟು ಹಣ ಗಳಿಸುತ್ತಿದ್ದರು ಎನ್ನುವುದನ್ನು ಇದರಿಂದಲೇ ಊಹಿಸಬಹುದು. ಹೀಗೆ ಸಣ್ಣಪುಟ್ಟ ಕೆಲಸಕ್ಕಾಗಿ ಜನರಿಗೆ ಗಣಿ ಮಾಲೀಕರು ಬೇಕಾಬಿಟ್ಟಿ ಹಣ ನೀಡುತ್ತಿದ್ದರು. ಸಹಜವಾಗಿಯೇ ಜನರ ಖರೀದಿ ಸಾಮರ್ಥ್ಯ ಹೆಚ್ಚಾಗಿತ್ತು. ಸಂಜೆಯಾದೊಡನೆ ಮದ್ಯದಂಗಡಿ, ರೆಸ್ಟೊರೆಂಟ್‌, ಶೋ ರೂಂ, ಹೋಟೆಲ್‌ಗಳಲ್ಲಿ ಜನಜಾತ್ರೆ ಇರುತ್ತಿತ್ತು. ಎಲ್ಲರೂ ಐನೂರು, ಸಾವಿರದ ನೋಟುಗಳನ್ನೇ ಹಿಡಿದುಕೊಂಡು ಬರುತ್ತಿದ್ದರಿಂದ ವ್ಯಾಪಾರಿಗಳಿಗೆ ಚಿಲ್ಲರೆ ಸಮಸ್ಯೆ ಎದುರಾಗುತ್ತಿತ್ತು’ ಎಂದರು.

‘ಸಿರಿವಂತರೇ ರೆಸ್ಟೊರೆಂಟ್‌ಗಳಲ್ಲಿ ಊಟ ಮಾಡಿದ ನಂತರ ಹತ್ತಿಪ್ಪತ್ತು ಟಿಪ್ಸ್‌ ಕೊಡುವುದು ಸಾಮಾನ್ಯ. ಆದರೆ, ಗಣಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಈ ಕಾರ್ಮಿಕರು ₹50ರಿಂದ ₹100 ಟಿಪ್ಸ್‌ ಕೊಡುತ್ತಿದ್ದರು. ಏನಾದರೂ ಖರೀದಿಸಲು ಹೋದರೆ ಚಿಲ್ಲರೆ ಇಲ್ಲವೆಂದು ವ್ಯಾಪಾರಿಗಳು ಹೇಳಿದರೆ ನೀವೇ ಇಟ್ಟುಕೊಳ್ಳಿ ಎಂಬ ಧಾರಾಳತನ ತೋರುತ್ತಿದ್ದರು. ಬಹುತೇಕರು ಆಗ ಬೇಕಾಬಿಟ್ಟಿ ಖರ್ಚು ಮಾಡಿ ಎಲ್ಲ ಕಳೆದುಕೊಂಡಿದ್ದಾರೆ. ಬೆರಳೆಣಿಕೆಯಷ್ಟು ಜನ ನಿತ್ಯ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಖರ್ಚು ಮಾಡಿ, ಅದರಲ್ಲಿ ಸ್ವಲ್ಪ ಕೂಡಿಡುತ್ತಿದ್ದರು. ಈಗ ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ. ಬಂಗ್ಲೆಯಂತಹ ಮನೆ ಕಟ್ಟಿಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದಾರೆ’ ಎಂದು ವಿವರಿಸಿದರು.

‘ಯಾವಾಗ ಅಕ್ರಮ ಗಣಿಗಾರಿಕೆಗೆ ಬ್ರೇಕ್‌ ಬಿತ್ತೋ ಆಗ ಅನೇಕ ಜನ ಕೆಲಸ ಕಳೆದುಕೊಂಡರು. ಸದಾ ಸಾವಿರದ ಗರಿ ಗರಿ ನೋಟುಗಳನ್ನು ಕಿಸೆಯಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದವರ ಬಳಿ ಈಗ ಚಿಲ್ಲರೆಯೂ ಇಲ್ಲ. ಇದಕ್ಕೆ ಕಾಲದ ಮಹಿಮೆ ಅಲ್ಲದೆ ಮತ್ತೇನೂ ಅನ್ನುತ್ತಾರೋ’ ಎಂದು ಕೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು