ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ವಿಜ್ಞಾನ ಲೆಕ್ಕಾಚಾರ: ಬೆಂಗಳೂರಿನಲ್ಲಿ 2.23 ಲಕ್ಷ ಮಂದಿಗೆ ಕೋವಿಡ್‌?

ಸೋಂಕು ವಿಜ್ಞಾನ ಪ್ರಕಾರ ಲೆಕ್ಕಾಚಾರ
Last Updated 15 ಜುಲೈ 2020, 7:27 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದರಿಂದ ನಗರದಲ್ಲಿ ಸರಿಸುಮಾರು 2.23 ಲಕ್ಷ ಮಂದಿಗೆ ಈಗಾಗಲೇ ಸೋಂಕು ತಗುಲಿರಬಹುದು ಎಂದು ಹೇಳುತ್ತದೆ ಸೋಂಕು ವಿಜ್ಞಾನದ ಲೆಕ್ಕಾಚಾರ.

ಭಾರಿ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇದು ಸಮುದಾಯಕ್ಕೆ ವ್ಯಾಪಕವಾಗಿ ಹರಡಿದರೆ ಇಡೀ ಜನಸಮೂಹವೇ ರೋಗ ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದು ಸರ್ಕಾರದ ಮುಂದಿರುವ ತರ್ಕ ಹಾಗೂ ನಿರೀಕ್ಷೆ ಎಂದು ಮೂಲಗಳು ತಿಳಿಸಿವೆ.

ಆದರೆ, ‘ಇದಕ್ಕೆ ಇನ್ನೂ ಕಾಲ ಪಕ್ವವಾಗಿಲ್ಲ. ಇಡೀ ಜನಸಮೂಹವೇ ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳುವುದಕ್ಕೆ ಮುನ್ನ ಅಪಾರ ಸಂಖ್ಯೆಯ ಸಾವು ನೋವುಗಳನ್ನು ಕಾಣಬೇಕಾಗುತ್ತದೆ’ ಎಂದು ರಾಜ್ಯ ಕೋವಿಡ್‌ ಕಾರ್ಯಪಡೆಯ ತಜ್ಞರು ಎಚ್ಚರಿಸಿದ್ದಾರೆ.

ಮಂಗಳವಾರ ಸಂಜೆವರೆಗಿನ ಅಂಕಿ ಅಂಶಗಳ ಪ್ರಕಾರ ಬೆಂಗಳೂರು ನಗರ ಜಿಲ್ಲೆಯಲ್ಲಿ 15,599 ಮಂದಿ ಕೊರೊನಾ ಸೋಂಕಿತರು (ಸಕ್ರಿಯ ಪ್ರಕರಣಗಳು) ಇದ್ದಾರೆ. ‘ಇದು ನಂಬಲರ್ಹವಾದ ಸಂಖ್ಯೆ ಅಲ್ಲ’ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಉದಾಹರಣೆಗೆ ನಗರದಲ್ಲಿ ಮಂಗಳವಾರ 1,262 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆದರೆ, ಕನಿಷ್ಠ ಏಳು ದಿನಗಳ ಹಿಂದೆ ನಗರದಲ್ಲಿ ಹೊಸದಾಗಿ ಪತ್ತೆಯಾಗಬೇಕಿದ್ದ ಸೋಂಕಿತರ ಸಂಖ್ಯೆಯೇ ಇಷ್ಟಿರಬೇಕಿತ್ತು.

‘ವ್ಯಕ್ತಿಯು ಕೊರೊನಾ ಸೋಂಕಿನ ಲಕ್ಷಣಗಳನ್ನು ಬೆಳೆಸಿಕೊಳ್ಳುವುದಕ್ಕೆ ನಾಲ್ಕರಿಂದ ಐದು ದಿನಗಳು ಬೇಕಾಗುತ್ತವೆ. ಇದಾದ ಬಳಿಕ ಕೋವಿಡ್‌ ಪರೀಕ್ಷೆಯ ಫಲಿತಾಂಶ ಬರುವುದಕ್ಕೆ ಹೆಚ್ಚೂ ಕಡಿಮೆ ಐದು ದಿನಗಳು ತಗಲುತ್ತವೆ. ಸೋಮವಾರ ಕೋವಿಡ್‌ ದೃಢಪಟ್ಟವರು ಏಳರಿಂದ 15 ದಿನಗಳ ಹಿಂದೆಯೇಸೋಂಕು ತಗುಲಿಸಿಕೊಂಡಿದ್ದರು’ ಎಂದು ತಜ್ಞರ ಸಮಿತಿಯ ಹಿರಿಯ ಸದಸ್ಯ ಡಾ.ಗಿರಿಧರ ಬಾಬು ವಿವರಿಸಿದರು.

‘ಇವತ್ತು ಎಷ್ಟು ಮಂದಿಗೆ ಸೋಂಕು ತಗುಲಿತು ಎಂಬುದು ಇನ್ನೂ ತಿಳಿದಿಲ್ಲ’ ಎಂದು ತಜ್ಞರ ಸಮಿತಿಯಲ್ಲಿರುವ ಇನ್ನೊಬ್ಬ ಸೋಂಕು
ಶಾಸ್ತ್ರಜ್ಞ ಡಾ.ಪ್ರದೀಪ್‌ ಬಡಾನೂರು ಹೇಳಿದರು.

ನಗರದಲ್ಲಿ ಆಯ್ದ ಪ್ರದೇಶಗಳಲ್ಲಿ ನಿರ್ದಿಷ್ಟ ಗುಂಪುಗಳ ಜನರನ್ನು ಆರ್‌ಟಿ–ಪಿಸಿಆರ್‌, ಪ್ರತಿಜನಕ (ಆ್ಯಂಟಿಜೆನ್‌) ಆಧಾರಿತ ಮತ್ತು ರಕ್ತಸಾರ ಪರೀಕ್ಷೆಗೆ (ಸೆರೋಲಜಿ ಟೆಸ್ಟಿಂಗ್‌) ಒಳಪಡಿಸಿ ಕಾವಲು ಸಮೀಕ್ಷೆ (ಸೆಂಟಿನೆಲ್‌ ಸರ್ವೆ) ನಡೆಸಬೇಕಿತ್ತು. ಆಶಾ ಕಾರ್ಯಕರ್ತೆಯರನ್ನು ಹಾಗೂ ಸರ್ಕಾರಿ ಸಿಬ್ಬಂದಿಯನ್ನು ಬಳಸಿ ನಡೆಸಲು ಉದ್ದೇಶಿಸಿದ್ದ ಈ ಸರ್ವೆ ಇನ್ನೂ ನಡೆದಿಲ್ಲ. ಹಾಗಾಗಿ ಸಮಿತಿಯು ಸೋಂಕುಶಾಸ್ತ್ರ ಆಧಾರಿತ ಅಧ್ಯಯನ ನಡೆಸುತ್ತಿದೆ. ಇದರ ಪ್ರಕಾರ ನಗರದ 2.23 ಲಕ್ಷ ಮಂದಿಗೆ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ.

ಈ ಲೆಕ್ಕಾಚಾರವು ರಾಜ್ಯಮಟ್ಟದ ಕೋವಿಡ್‌ ವಾರ್‌ ರೂಂ ನೀಡುತ್ತಿರುವ ಇತ್ತೀಚಿನ 14 ದಿನಗಳ ದತ್ತಾಂಶಗಳ ಪ್ರಕಾರ ಇರುವ ಸಕ್ರಿಯ ಸೋಂಕು ಪ್ರಕರಣಗಳನ್ನು ಆಧರಿಸಿವೆ.

ಡಾ.ಬಾಬು ಅವರು ಇದರ ಹಿಂದಿನ ಲೆಕ್ಕಾಚಾರವನ್ನು ಹೀಗೆ ವಿವರಿಸುತ್ತಾರೆ. ಜೂನ್‌ 30ರಿಂದ ಜುಲೈ 13ರವರೆಗೆ 11,136 ಹೊಸ ಪ್ರಕರಣಗಳು ಬೆಂಗಳೂರು ನಗರ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಸೋಂಕು ಹರಡುತ್ತಿರುವ ವೇಗವನ್ನು (ಆರ್‌ 0/1.29) ಪರಿಗಣಿಸಿದರೆ ಇವು 31,978 ಪ್ರಕರಣಗಳಾಗಬೇಕಾಗಿತ್ತು. ಆದರೆ, ಇವು ಏಳು ದಿನಗಳ ಹಿಂದಿನ ಹೊಸ ಪ್ರಕರಣಗಳು. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಸೋಂಕು ಹರಡಿದ್ದಾನೆ ಎಂದು ಪರಿಗಣಿಸಿದರೂ ಏಳು ದಿನಗಳಲ್ಲಿ ಬೆಂಗಳೂರಿನಲ್ಲಿ 2,23, 846 ಮಂದಿಗೆ ಸೋಂಕು ತಗುಲಿರುತ್ತದೆ.

‘ಈ ನಗರದ ಜನಸಂಖ್ಯೆ 1.30 ಕೋಟಿಯಷ್ಟಿದೆ. ಜನಸಮೂಹವು ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳಬೇಕಾದರೆ ಸರಿಸುಮಾರು ಶೇ 60ರಷ್ಟು ಜನರಿಗೆ ಸೋಂಕು ತಗುಲಬೇಕಾಗುತ್ತದೆ ’ ಎಂದು ಡಾ.ಬಡಾನೂರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT