ಸೋಮವಾರ, ಆಗಸ್ಟ್ 2, 2021
24 °C
ಸೋಂಕು ಹರಡುವಿಕೆಯ ಬಗ್ಗೆ ಗಣಿತದ ಹೊಸ ಮಾದರಿ ಆಧರಿಸಿ ವಿಜ್ಞಾನಿಗಳಿಂದ ವಿಶ್ಲೇಷಣೆ

2021ರವರೆಗೂ ಏರುಗತಿಯಲ್ಲೇ ಸಾಗಲಿದೆ ಕೋವಿಡ್‌?

ಅಖಿಲ್‌ ಕಡಿದಾಳ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಹರಡುವಿಕೆಯ ಬಗ್ಗೆ ಗಣಿತದ ಹೊಸ ಮಾದರಿಯ ಪ್ರಕಾರ ಭವಿಷ್ಯಸೂಚಕ ವಿಶ್ಲೇಷಣೆಗಳನ್ನು ನಡೆಸುತ್ತಿರುವ ವಿಜ್ಞಾನಿಗಳು, ಭಾರತದಲ್ಲಿ ಈ ಸೋಂಕು ಮುಂದಿನ ವರ್ಷದವರೆಗೂ ಏರುಗತಿಯಲ್ಲೇ ಸಾಗಲಿದೆ ಎಂದು ಎಚ್ಚರಿಸಿದ್ದಾರೆ.

ಗಣಿತದ ಈ ಹೊಸ ಮಾದರಿಯಲ್ಲಿ ನಡೆಸುವ ಲೆಕ್ಕಾಚಾರದಲ್ಲಿ ಸೋಂಕಿನ ಹೊಸ ಪ್ರಕರಣಗಳು, ಹರಡುವಿಕೆ, ಕ್ವಾರಂಟೈನ್‌ನ ಪರಿಣಾಮ, ಸರ್ಕಾರದ ನೀತಿಗಳು, ಆರೋಗ್ಯ ಮೂಲಸೌಕರ್ಯ, ಚೇತರಿಸುವಿಕೆ ಹಾಗೂ ರೋಗಿಗಳ ಸಾವು... ಬೇರೆ ಬೇರೆ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ. ಜನರು ಹೇಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತಾರೆ ಎಂಬುದು ಇದರ ಪ್ರಮುಖ ಅಂಶ.

‘ನಾವು ಮತ್ತೆ ಮತ್ತೆ ಒತ್ತಿ ಹೇಳುವುದೇನೆಂದರೆ ಸೋಂಕು ಹರಡುವಿಕೆಯ ರೇಖೆ ಕೆಳಗಿಳಿಯುವುದು ಜನರು ಸುರಕ್ಷಿತ ಅಂತರ ಕಾಪಾಡುವುದನ್ನು ಅವಲಂಬಿಸಿದೆ’ ಎನ್ನುತ್ತಾರೆ ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಕಂಪ್ಯೂಟೇಷನಲ್‌ ಡೇಟಾ ಸೈನ್ಸ್‌ ವಿಭಾಗದ ಮುಖ್ಯಸ್ಥ ಡಾ.ಶಶಿಕುಮಾರ್‌ ಗಣೇಶನ್‌. ಭಾಗಶಃ ಭೇದಾತ್ಮಕ ಸಮೀಕರಣ (ಪಿಡಿಇ) ಆಧರಿತ ಮಾದರಿಯನ್ನು ಅಭಿವೃದ್ಧಿಪಡಿಸಲು ಇವರು ನೆರವಾಗಿದ್ದಾರೆ.

‘ಈಗಿನ ಸ್ಥಿತಿಗತಿ’, ‘ಸುಧಾರಿತ ಸನ್ನಿವೇಶ’, ‘ಅತ್ಯಂತ ಕಳಪೆ ಸನ್ನಿವೇಶ’, ‘ಭಾನುವಾರದ ಲಾಕ್‌ಡೌನ್‌ ಆಧಾರದಲ್ಲಿ ಈಗಿನ ಸ್ಥಿತಿಗತಿ’, ಹಾಗೂ ‘ಭಾನುವಾರ ಮತ್ತು ಬುಧವಾರ ಲಾಕ್‌ಡೌನ್‌ ಮಾಡಿದಾಗಿನ ಸ್ಥಿತಿಗತಿ’ ಸೇರಿದಂತೆ ಐದು ಸನ್ನಿವೇಶಗಳ ಆಧಾರದಲ್ಲಿ ಕೋವಿಡ್‌ ಹರಡುವಿಕೆಯನ್ನು ಈ ಮಾದರಿಯಲ್ಲಿ ವಿಶ್ಲೇಷಿಸಲಾಗಿದೆ.

‘ಆರಂಭದಲ್ಲಿ ‘ಈಗಿನ ಸ್ಥಿತಿಗತಿ’ಯೇ ಮುಂದುವರಿಯುವ ಸನ್ನಿವೇಶವನ್ನು ಇಡೀ ಭಾರತಕ್ಕೆ ಅನ್ವಯಿಸಿದ್ದೆವು. ಇದರಲ್ಲಿ ದೀರ್ಘಾವಧಿಯ ಯಾವುದೇ ಲಾಕ್‌ಡೌನ್‌ ಇಲ್ಲದೇ ಹೋದರೆ ಮತ್ತು ಸುರಕ್ಷಿತ ಅಂತರ ಕಾಪಾಡುವಿಕೆ ಕಟ್ಟುನಿಟ್ಟಾಗಿ ಪಾಲನೆಯಾದರೆ ಪರಿಸ್ಥಿತಿ ಹೇಗಿರಲಿದೆ ಎಂಬುದನ್ನು ವಿಶ್ಲೇಷಿಸಿದ್ದೆವು. ಆದರೆ, ಜೂನ್‌ನಲ್ಲಿ ಕೆಲವೊಂದು ವ್ಯತಿರಿಕ್ತ ಬೆಳವಣಿಗೆಗಳಾದವು. ದೇಶದಲ್ಲಿ ಪತ್ತೆಯಾಗಲಾರಂಭಿಸಿದ ಪ್ರಕರಣಗಳ ಸಂಖ್ಯೆ ‘ಕಳಪೆ ಸನ್ನಿವೇಶ’ ಆಧರಿತ ಮಾದರಿಗೆ ಹೆಚ್ಚು ಸಮೀಪದಲ್ಲಿತ್ತು’ ಎನ್ನುತ್ತಾರೆ ವಿಜ್ಞಾನಿಗಳು.

‘30 ದಿನಗಳಷ್ಟು ಹಿಂದಿನಿಂದ ದೇಶದ ಸ್ಥಿತಿಗತಿ ‘ಅತ್ಯಂತ ಕಳಪೆ ಸನ್ನಿವೇಶ’ಕ್ಕೆ ಹೋಲಿಕೆಯಾಗುವಂತಿವೆ. ಇದು ಪರಿಸ್ಥಿತಿ ತೀರಾ ಹದಗೆಟ್ಟಿರುವುದರ ಸೂಚಕ’ ಎನ್ನುತ್ತಾರೆ ಡಾ.ಗಣೇಶನ್‌.

ಸುರಕ್ಷಿತ ಅಂತರ ಕಾಪಾಡುವಿಕೆ ಪಾಲನೆ ಆಗದಿದ್ದಾಗ ಹಾಗೂ ಲಾಕ್‌ಡೌನ್‌ ಇಲ್ಲದೇ ಹೋದಾಗ ಇಂತಹ ಸನ್ನಿವೇಶ ಕಾಣಿಸಿಕೊಳ್ಳುತ್ತದೆ. ಈ ಸನ್ನಿವೇಶ ಮುಂದುವರಿದರೆ 2021ರ ಮಾರ್ಚ್‌ ವೇಳೆಗೆ ದೇಶದಲ್ಲಿ 82 ಲಕ್ಷ ಸಕ್ರಿಯ ಪ್ರಕರಣಗಳು ಕಂಡುಬರಲಿವೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ 6.18 ಕೋಟಿ ಜನರು ಸೋಂಕಿಗೆ ಒಳಗಾಗಲಿದ್ದಾರೆ. ಕರ್ನಾಟಕದಲ್ಲಿ 32 ಲಕ್ಷ ಪ್ರಕರಣಗಳು ಕಾಣಿಸಿಕೊಳ್ಳಲಿವೆ. ಅದಕ್ಕಿಂತಲೂ ಮುಖ್ಯವಾಗಿ 2021ರ ಮಾರ್ಚ್‌ವರೆಗೂ ಸೋಂಕು ಪತ್ತೆ ಪ್ರಕರಣಗಳ ಗತಿರೇಖೆ ಏರುಮುಖವಾಗಿಯೇ ಸಾಗಲಿದೆ.

ರಾಜ್ಯ ಸರ್ಕಾರಕ್ಕಾಗಿ ಕೆಲಸ ಮಾಡುತ್ತಿರುವ ಸ್ವತಂತ್ರ ಸೋಂಕು ಶಾಸ್ತ್ರಜ್ಞರೊಬ್ಬರು ಸಹ, ’2021ರವರೆಗೂ ಸೋಂಕು ಪತ್ತೆ ಪ್ರಮಾಣ ಏರುಗತಿಯಲ್ಲೇ ಇರಲಿದೆ‘ ಎಂದು ಸಹಮತ ವ್ಯಕ್ತಪಡಿಸಿದರು.

ಗಣಿತ ಆಧರಿತವಾದ ಇನ್ನೊಂದು ಹೆಸರಾಂತ ಮಾದರಿಯನ್ನು (ಐಎನ್‌ಡಿಎಸ್‌ಸಿಐ–ಎಸ್‌ಐಎಂ) ಅಭಿವೃದ್ಧಿಪಡಿಸಲು ನೆರವಾಗಿರುವ ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಗೌತಮ್‌ ಮೆನನ್‌ ಪ್ರಕಾರ, ದೀರ್ಘಾವಧಿಯ ಬೆಳವಣಿಗೆಯನ್ನು ಊಹೆ ಮಾಡಲು ಮಾದರಿಗಳನ್ನು ಬಳಸುವುದು ಸೂಕ್ತವಲ್ಲ.

‘ಪದೇ ಪದೇ ಬದಲಾಗುವ ಸನ್ನಿವೇಶದಲ್ಲಿ ಹೊಸ ನಿರ್ಬಂಧಗಳನ್ನು ಹೇರಲಾಗುತ್ತದೆ ಅಥವಾ ಆಗಾಗ್ಗೆ ನಿರ್ಬಂಧ ಸಡಿಲಗೊಳಿಸಲಾಗುತ್ತದೆ. ಯಾವುದೇ ಮಾದರಿಯಲ್ಲೂ ದೀರ್ಘಾವಧಿಗೆ ಸಂಬಂಧಿಸಿದ ಊಹೆಗಳು ನಂಬಲು ಅರ್ಹವಲ್ಲ' ಎಂದು ಅವರು ಹೇಳಿದರು.

2021ರ ಫೆಬ್ರುವರಿಯಲ್ಲಿ ಸ್ಥಿರ ಸ್ಥಿತಿಗೆ?
ಹೆಸರಾಂತ ವೈರಾಣುಶಾಸ್ತ್ರಜ್ಞ ಹಾಗೂ ಕ್ರಿಸ್ಟಿಯನ್‌ ವೈದ್ಯಕೀಯ ಕಾಲೇಜಿನ ಗೌರವ ಪ್ರಾಧ್ಯಾಪಕ ಡಾ.ಟಿ.ಜೇಕಬ್‌ ಜಾನ್‌, ‘ಭಾರತದಲ್ಲಿ ಕೋವಿಡ್‌ ಸೋಂಕು ಆಗಸ್ಟ್‌ನಲ್ಲಿ ಗರಿಷ್ಠ ಮಟ್ಟ ತಲುಪಲಿದ್ದು, ಡಿಸೆಂಬರ್‌ ವೇಳೆಗೆ ಅಥವಾ ಅದಕ್ಕಿಂತ ಮುಂಚೆಯೇ ಏರುಗತಿ ಅಂತ್ಯ ಕಾಣಲಿದೆ’ ಎಂದು ಈ ಹಿಂದೆ ಹೇಳಿದ್ದರು.

‘ಈಗಿನ ಸೋಂಕು ಹರಡುವಿಕೆ ಗತಿರೇಖೆಯ ಏರಿಳಿತ ಗಮನಿಸಿದರೆ ಡಿಸೆಂಬರ್‌ನಲ್ಲಿ ಅಥವಾ 2021ರ ಫೆಬ್ರುವರಿಯಲ್ಲಿ ಕೋವಿಡ್‌ ಹರಡುವಿಕೆ ಸ್ಥಿರ ಸ್ಥಿತಿ ತಲುಪಲಿದೆ’ ಎಂದು ’ಪ್ರಜಾವಾಣಿ‘ಗೆ ಮಂಗಳವಾರ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು