ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

32 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ

Last Updated 10 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿಸಾಧನೆ ಮಾಡಿದ 32 ಮಂದಿಗೆ, ಬಿಬಿಎಂಪಿ ವತಿಯಿಂದ ಗುರುವಾರ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ಪ್ರದಾನ ಮಾಡಲಾಯಿತು.

‘ಕೊರೊನಾ ನಿಯಂತ್ರಣಕ್ಕಾಗಿ ಜೀವದ ಹಂಗು ತೊರೆದು ಕೆಲಸ ಮಾಡಿದ 20 ಮಂದಿಗೆ ಮಾತ್ರ ಈ ಬಾರಿ ಕೆಂಪೇಗೌಡ ಪ್ರಶಸ್ತಿ ನೀಡಲಾಗುವುದು’ ಎಂದು ಮೇಯರ್ ಎಂ.ಗೌತಮ್‌ ಕುಮಾರ್‌ ಈ ಹಿಂದೆ ತಿಳಿಸಿದ್ದರು. ಆದರೆ, ಪ್ರಶಸ್ತಿ ಪುರಸ್ಕೃತರಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸಿದವರಿಗಿಂತ ಇತರರ ಹೆಸರುಗಳೇ ಜಾಸ್ತಿ ಇವೆ. ಕೊರೊನಾ ನಿಯಂತ್ರಣಕ್ಕೆ ತಳಮಟ್ಟದಲ್ಲಿ ಕಾರ್ಯನಿರ್ವಹಿಸಿದ ಆಶಾಕಾರ್ಯಕರ್ತೆಯರು, ಪೌರಕಾರ್ಮಿಕರು, ಪೊಲೀಸ್‌ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿಯನ್ನು ಗುರುತಿಸದ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದು, ಕೊರೊನಾ ಸೇನಾನಿಗಳನ್ನು ಕಡೆಗಣಿಸಿರುವುದು ಅಕ್ಷಮ್ಯ ಎಂದು ಕಾಂಗ್ರೆಸ್‌ ಟೀಕಿಸಿದೆ.

ಸಮಾರಂಭದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ‘ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಕೆಂಪೇಗೌಡ ಜಯಂತಿಯಂದು ಪುರಸ್ಕರಿಸುವುದು ವಾಡಿಕೆ. ಈ ಬಾರಿ ವಿವಿಧ ಕ್ಷೇತ್ರದಲ್ಲಿ ತೋಡಗಿಸಿಕೊಂಡ ಕೋವಿಡ್‌ ಯೋಧರನ್ನು ಆದ್ಯತೆ ಮೇರೆಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದರು.

ಸಾಧಕರನ್ನು ಆರಿಸುವ ವೇಳೆ ಆರ್‌ಎಸ್‌ಎಸ್‌ ನಂಟಿದ್ದವರಿಗೆ ಆದ್ಯತೆ ನೀಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ, ‘ಆರ್‌ಎಸ್‌ಎಸ್‌ನವರಿಗೆ ಪ್ರಶಸ್ತಿ ಕೊಡಬಾರದು ಎಂದೇನಿಲ್ಲ. ಯಾರು ಸಮಾಜಕ್ಕೆ ಕೊಡುಗೆ ನೀಡುತ್ತಾರೋ, ಸಾಧನೆ ಮಾಡುತ್ತಾರೋ ಅವರನ್ನೆಲ್ಲ ಗೌರವಿಸುವ ಕೆಲಸ ಮಾಡಿದ್ದೇವೆ’ ಎಂದು ಸಮರ್ಥಿಸಿಕೊಂಡರು.

ನಂದಿದುರ್ಗ ಬಾಲು ಗೌಡ ಅವರಿಗೆ ಎರಡನೇ ಬಾರಿ ಪ್ರಶಸ್ತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಮೇಯರ್‌, ‘ಇದು ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಈ ಪ್ರಶಸ್ತಿಯು ₹ 50 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT