ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಒಂದು ತಿಂಗಳಲ್ಲಿ 4 ಸಾವಿರ ಪ್ರಕರಣ, ಕಸ ಎಸೆಯುವವರ ಮೇಲೆ ತೀವ್ರ ನಿಗಾ

Published 14 ಜುಲೈ 2023, 16:23 IST
Last Updated 14 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕಸ ಎಸೆಯುವವರು, ತ್ಯಾಜ್ಯ ಸುಡುವವರ ಮೇಲೆ ನಿಗಾವಹಿಸಿರುವ ಬಿಬಿಎಂಪಿ, ಒಂದು ತಿಂಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದೆ. ನಾಲ್ಕು ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಂಡಿದ್ದು, ₹9 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಿದೆ.

ನಗರದ ಹಲವು ರಸ್ತೆಗಳು ಸೇರಿದಂತೆ ಖಾಲಿ ನಿವೇಶನಗಳಲ್ಲಿ ಕಸ ಎಸೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಮಾರ್ಪಲ್‌ಗಳ ಕಾರ್ಯಾಚರಣೆಗೆ ಹೆಚ್ಚಿಸಲಾಗಿದ್ದು, ಸ್ಥಳದಲ್ಲೇ ದಂಡ ವಿಧಿಸಲಾಗುತ್ತಿದೆ.

ದಕ್ಷಿಣ, ಪಶ್ಚಿಮ, ಪೂರ್ವ ವಲಯ ಕಾರ್ಯಾರಣೆಯಲ್ಲಿ ಮುಂದಿವೆ. ದಾಸರಹಳ್ಳಿ, ಯಲಹಂಕ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ, ಮಹದೇವಪುರದಲ್ಲಿ ಹೆಚ್ಚು ದಂಡ ವಸೂಲಿಯಾಗಿದ್ದರೂ ನಿರ್ವಹಣೆಯಲ್ಲಿ ಹಿಂದಿವೆ.

ಬೆಂಗಳೂರು ದಕ್ಷಿಣ ವಲಯದಲ್ಲಿ ಅತಿಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ವಲಯದಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಮಾಡಲು ವಲಯ ಆಯುಕ್ತ ಜಯರಾಂ ರಾಯಪುರ ಸೂಚಿಸಿದ್ದಾರೆ. ದಕ್ಷಿಣ ವಲಯದ 6 ವಿಭಾಗಗಳಲ್ಲಿ ಶುಕ್ರವಾರ ಒಂದೇ ದಿನ 268 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಕ್ರಮವಾಗಿ ತ್ಯಾಜ್ಯ ಎಸೆಯುವವರು, ಕಸ ವಿಂಗಡಿಸದವರು, ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾಡುವವರಿಗೆ ದಂಡ ₹40 ಸಾವಿರ ದಂಡ ವಿಧಿಸಲಾಗಿದೆ. 

ಗುರಪ್ಪನಪಾಳ್ಯದಲ್ಲಿ ಅಬ್ದುಲ್‌ ಅವರು ಖಾಲಿ ನಿವೇಶನದಲ್ಲಿ ಮರ ಹಾಗೂ ಇತರೆ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ವಿಭಾಗ ಮೇಲ್ವಿಚಾರಕ, ಕಿರಿಯ ಆರೋಗ್ಯಾಧಿಕಾರಿ ಮತ್ತು ಮಾರ್ಷಲ್‌ಗಳು ಬೆಂಕಿ ಹಚ್ಚಿದ ಅಬ್ದುಲ್‌ ಅವರಿಗೆ ₹10 ಸಾವಿರ ದಂಡ ವಿಧಿಸಿದರು.

ಜಯನಗರದ ಸಾರಕ್ಕಿ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ ತಪಾಸಣೆ ಹಾಗೂ ಜಾಗೃತಿ ಅಭಿಯಾನ ನಡೆಸಿದ ಬಿಬಿಎಂಪಿ ಅಧಿಕಾರಿಗಳು, ನಿಷೇಧಿತ ಪ್ಲಾಸ್ಟಿಕ್‌ ಬಳಸಿದ 9 ಪ್ರಕರಣಗಳನ್ನು ದಾಖಲಿಸಿದರು. ₹1,800 ದಂಡ ವಿಧಿಸಿ, 40 ಕೆ.ಜಿ ಪ್ಲಾಸ್ಟಿಕ್‌ ವಶಪಡಿಸಿಕೊಂಡಿದ್ದಾರೆ.

‘ದಕ್ಷಿಣ ವಲಯದಲ್ಲಿ ಕಸ ಎಸೆಯುವುದು ಹಾಗೂ ಪ್ಲಾಸ್ಟಿಕ್‌ ಬಳಕೆ ನಿರ್ಬಂಧಿಸಲು ಅಭಿಯಾನ ನಡೆಸಲಾಗುತ್ತಿದ್ದು, ಒಂದು ತಿಂಗಳಿಂದ ಹೆಚ್ಚಿನ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲ ವಲಯಗಳಲ್ಲೂ ಈ ಕಾರ್ಯಾಚರಣೆ ಹಾಗೂ ಜಾಗೃತಿಯನ್ನು ವೃದ್ಧಿಸಲಾಗುತ್ತಿದೆ. ಇದರಿಂದ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ನಾಗರಿಕರು ಸಹಕರಿಸಬೇಕು. ಏಕ ಬಳಕೆ ಪ್ಲಾಸ್ಟಿಕ್‌ ಬಳಕೆ ಹಾಗೂ ಸಂಗ್ರಹದ ಮೇಲೂ ನಿಗಾವಹಿಸಲಾಗಿದೆ’ ಎಂದು ಜಯರಾಂ ರಾಯಪುರ ಹೇಳಿದರು.

ನಿರಂತರ ಪ್ರಕ್ರಿಯೆ: ನಗರದಲ್ಲಿ ಕಸ ಎಸೆಯುವ ಪ್ರದೇಶಗಳನ್ನು (ಬ್ಲ್ಯಾಕ್‌ ಸ್ಪಾಟ್‌) ನಿರ್ಮೂಲನೆ ಮಾಡುವುದು ನಿರಂತರ ಪ್ರಕ್ರಿಯೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಈ ಕಾರ್ಯಾಚರಣೆಗೆ ಸ್ವಲ್ಪ ಹಿನ್ನಡೆಯಾಗಿತ್ತು. ನಗರದ ಕೇಂದ್ರ ಭಾಗಗಳಲ್ಲಿ ಬ್ಲ್ಯಾಕ್ ಸ್ಪಾಟ್‌ಗಳ ಸಮಸ್ಯೆ ಹೆಚ್ಚಿದ್ದು, ಮಾರ್ಷಲ್‌ಗಳ ಮೂಲಕ ನಿಗಾವಹಿಸಿ ನಿರ್ಮೂಲನೆಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್‌ ತಿಳಿಸಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT