ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜರಾಜೇಶ್ವರಿ ನಗರ ವಿಧಾನಸಭೆ ಉಪ ಚುನಾವಣೆ: ಶೇ 45 ಮತದಾನ

ಕೋವಿಡ್‌ ನೆರಳಿನಲ್ಲಿ ಚುನಾವಣೆ; ಮತಗಟ್ಟೆ ಬಳಿಯಲ್ಲೇ ಮತದಾರರ ಸೆಳೆಯಲು ಯತ್ನ
Last Updated 3 ನವೆಂಬರ್ 2020, 18:59 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌.ಆರ್‌. ನಗರ ಕ್ಷೇತ್ರದಲ್ಲಿ ಮಂದಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ವೇಳೆಗೆ ಸ್ವಲ್ಪ ಚುರುಕುಗೊಂಡಿತ್ತು. ಆದರೆ, ಮತದಾರರು ನಿರುತ್ಸಾಹ ತೋರಿದ್ದರಿಂದ ಒಟ್ಟು ಮತದಾನ ಪ್ರಮಾಣ ಕಡಿಮೆಯಾಗಿದೆ.

ಕ್ಷೇತ್ರದ ಒಟ್ಟು ಮತದಾರರಲ್ಲಿ (4,62,201) ಮತ ಚಲಾಯಿಸಿದವರು 2,09,495 (ಶೇ 45.24). ಮತ ಚಲಾಯಿಸಿದವರಲ್ಲಿ ಪುರುಷ ಮತ್ತು ಮಹಿಳಾ ಮತದಾರರು ಸರಿಸಮ (ತಲಾ ಶೇ 45ರಷ್ಟು) ಇದ್ದಾರೆ.

ಕ್ಷೇತ್ರದ ಒಟ್ಟು 678 ಮತಗಟ್ಟೆಗಳ ಪೈಕಿ 5ರಲ್ಲಿ ಮಾತ್ರ ಮತದಾನದ ನಿಗದಿತ ಅವಧಿಯ (6 ಗಂಟೆ) ಬಳಿಕವೂ ಕೆಲವರು ಸರದಿಯಲ್ಲಿ ನಿಂತಿದ್ದರು. ಅವರಿಗೆ ಮತ ಚಲಾಯಿಸಲು ಅವಕಾಶ ನೀಡಲಾಯಿತು.

ಮತಗಟ್ಟೆಗಳ ಬಳಿಯಲ್ಲೇ ಮತದಾರರನ್ನು ಸೆಳೆಯುವ ಯತ್ನ, ಕೇಸರಿ ಬಣ್ಣದ ಮಾಸ್ಕ್‌ಗಳನ್ನು ಚುನಾವಣಾ ಸಿಬ್ಬಂದಿ ಧರಿಸಿದ್ದಾರೆ ಎಂಬ ಆರೋಪ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರ ನಡುವೆ ಅಲ್ಲಲ್ಲಿ ಮಾತಿನ ಚಕಮಕಿ, ಮತದಾರರಿಗೆ ಹಣ ಹಂಚಲಾಗುತ್ತಿದೆ ಎಂಬ ಆರೋಪ ಸೇರಿದಂತೆ ಸಣ್ಣಪುಟ್ಟ ಘಟನೆಗಳು ನಡೆದವು.

ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಕ್ಷೇತ್ರದಲ್ಲಿ ಮತದಾನ ಹಕ್ಕು ಇರಲಿಲ್ಲ.‌ ಬೆಳಿಗ್ಗೆ ಮಲ್ಲೇಶ್ವರದ ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಅವರು ಬಳಿಕ ಮತಗಟ್ಟೆಗಳಿಗೆ ತೆರಳಿ ವೀಕ್ಷಿಸಿದರು. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ತಮ್ಮ ತಂದೆ–ತಾಯಿ ಜೊತೆ ಜ್ಞಾನಭಾರತಿ ವಾರ್ಡ್‌ನ ಮಲ್ಲತಹಳ್ಳಿ ಕನ್ಯಾಕುಮಾರಿ ಪ್ರೌಢಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಅದಕ್ಕೂ ಮೊದಲು ಅವರು ವಿಜಯನಗರದ ಆದಿಚುಂಚನಗಿರಿ ಮಠದ ಆವರಣದಲ್ಲಿರುವ ಕಾಲಭೈರವ ಹಾಗೂ ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಜ್ಞಾನಭಾರತಿ ವಾರ್ಡ್‌ನ ಉಲ್ಲಾಳ್ ಮುಖ್ಯರಸ್ತೆ ಎಚ್‍ಎಂಆರ್ ಶಾಲೆಯ ಮತಗಟ್ಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಮತ ಹಕ್ಕು ಚಲಾಯಿಸಿದರು.

ಸೋಲುವ ಭಯದಿಂದ ಅಕ್ರಮ

‘ಆರ್‌.ಆರ್‌. ನಗರದಲ್ಲಿ ತಮ್ಮ ಅಭ್ಯರ್ಥಿ ಸೋಲುವ ಭಯದಿಂದ ಮತದಾರರು ಮತದಾನಕ್ಕೆ ಬರದಂತೆ ಬಿಜೆಪಿ
ಯವರು ತಡೆಯೊಡ್ಡಿದ್ದಾರೆ. ಚುನಾವಣಾ ಆಯೋಗದ ಗಮನಕ್ಕೂ ಈ ವಿಷಯವನ್ನು ತಂದಿದ್ದೇವೆ’ ಎಂದು ವಿಧಾನಪರಿಷತ್‌ ಸದಸ್ಯ ಕಾಂಗ್ರೆಸ್‌ನ ನಾರಾಯಣ ಸ್ವಾಮಿ ಹೇಳಿದರು. ‘ಬಿಜೆಪಿ ಬೆಂಬಲಿಗರು ಒಂದು ಮತಕ್ಕೆ ₹ 2 ಸಾವಿರದಂತೆ ಹಣ ಹಂಚಿದ್ದಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ತಂದೆ ಹನುಮಂತರಾಯಪ್ಪ ದೂರಿದರು.

‘ಮಾಸ್ಕ್‌’ ಜಗಳ: ಅಲ್ಲಲ್ಲಿ ಮಾತಿನ ಚಕಮಕಿ

ನಾಗರಬಾವಿ ಮತಗಟ್ಟೆ ಸಂಖ್ಯೆ 290ರ ಬಳಿ ಅರೆಸೇನಾ ಪಡೆ ಸಿಬ್ಬಂದಿ ಧರಿಸಿದ್ದ ಕೇಸರಿ ಬಣ್ಣದ ಮಾಸ್ಕ್‌ನ್ನು ಬಿಜೆಪಿ ಕಾರ್ಯಕರ್ತರು ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದ ಘಟನೆ ನಡೆಯಿತು. ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವವರ ಮೇಲೆ ಬಿಜೆಪಿ ಪ್ರಭಾವ ಬೀರುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕೇಸರಿ ಬಣ್ಣದ ಮಾಸ್ಕ್ ತೆಗೆಸಿ, ನೀಲಿಬಣ್ಣದ ಸರ್ಜಿಕಲ್ ಮಾಸ್ಕ್ ನೀಡಲಾಯಿತು.

ಜಾಲಹಳ್ಳಿ ಸೇಂಟ್ ಕ್ಲಾರೆಟ್ ಶಾಲೆಯ ಮತಗಟ್ಟೆ ಬಳಿ ಬೆಂಚ್ ಹಾಕುವ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಸುಮನಹಳ್ಳಿಯ ಮಾತಾಪುರ ಸಮೀಪದ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರು ಚುನಾವಣಾಧಿಕಾರಿಯನ್ನು ಪ್ರಶ್ನಿಸಿದರು. ಮತಗಟ್ಟೆ 248ರಲ್ಲಿಯೂ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ರಾಜೀವ್‍ಗಾಂಧಿ ಪಾಲಿಟೆಕ್ನಿಕ್ ಬಳಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಮತದಾನ ಪ್ರಮಾಣ

ವರ್ಷ; ಶೇಕಡಾ

2013-56.80

2018- 54.34

2018-(ಲೋಕಸಭೆ); 53.65

2020-(ಉಪ ಚುನಾವಣೆ) 45.24

ನಾಲ್ವರು ಸೋಂಕಿತರಿಂದ ಮತದಾನ

ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್‌ ದೃಢಪಟ್ಟಿದ್ದ 148 ಮತದಾರರ ಪೈಕಿ, ಆರು ಮಂದಿ ಮತ ಚಲಾಯಿಸುವುದಾಗಿ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ಮನೆಯಲ್ಲೇ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು (ಪುರುಷರು) ಮಾತ್ರ ತಮ್ಮ ಹಕ್ಕು ಚಲಾಯಿಸಿದರು. ಸೋಂಕಿತ ಮತದಾರರನ್ನು ಪಿಪಿಇ ಕಿಟ್‌ ನೀಡಿ, ಆಂಬುಲೆನ್ಸ್‌ನಲ್ಲಿ ಅವರವರ ಮತಗಟ್ಟೆಗಳಿಗೆ ಕರೆದುಕೊಂಡು ಬರಲಾಯಿತು. ಈ ವೇಳೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡಾ ಪಿಪಿಇ ಕಿಟ್‌ ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT