ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲ್ಯಾಪ್ರೊಸ್ಕೋಪಿ ಶಸ್ತ್ರಚಿಕಿತ್ಸೆ: 4.5 ಕೆ.ಜಿ. ನಾರುಗಡ್ಡೆ ಹೊರತೆಗೆದ ವೈದ್ಯರು

Published 21 ಮೇ 2024, 15:20 IST
Last Updated 21 ಮೇ 2024, 15:20 IST
ಅಕ್ಷರ ಗಾತ್ರ

ಬೆಂಗಳೂರು: ಲ್ಯಾಪ್ರೊಸ್ಕೋಪಿ ಶಸ್ತ್ರಚಿಕಿತ್ಸೆ ವಿಧಾನದ ಮೂಲಕ ಇಲ್ಲಿನ ಆಸ್ಟರ್ ಆರ್‌ವಿ ಆಸ್ಪತ್ರೆಯ ವೈದ್ಯರು 42 ವರ್ಷದ ಮಹಿಳೆಯ ಗರ್ಭಾಶಯದಲ್ಲಿ ಬೆಳೆದಿದ್ದ 4.5 ಕೆ.ಜಿ. ತೂಕದ ನಾರುಗಡ್ಡೆಯನ್ನು (ಫೈಬ್ರಾಯ್ಡ್) ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. 

ಮಹಿಳೆಗೆ ಯಾವುದೇ ರೋಗ ಲಕ್ಷಣಗಳು ಗೋಚರಿಸಿರಲಿಲ್ಲ. ವೈದ್ಯರು ಸ್ಕ್ಯಾನ್ ಮಾಡಿದಾಗ 12 ಸೆಂ.ಮೀ. ಉದ್ದದ ನಾರುಗಡ್ಡೆ ಗೋಚರಿಸಿತ್ತು. ಉದರ ಭಾಗದಲ್ಲಿ 3 ಸೆಂ.ಮೀ. ಮಾತ್ರ ಕತ್ತರಿಸಿ, ನಾರುಗಡ್ಡೆಯನ್ನು ಹೊರತೆಗೆಯಲಾಗಿದೆ. ಆಸ್ಪತ್ರೆಯ ಲ್ಯಾಪ್ರೊಸ್ಕೋಪಿ ತಜ್ಞ ಡಾ. ಸುನೀಲ್ ಈಶ್ವರ್ ನೇತೃತ್ವದ ವೈದ್ಯರ ತಂಡವು 5 ಗಂಟೆಗಳ ಅವಧಿಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಿದೆ. 

‘ಈ ಪ್ರಕರಣದಲ್ಲಿ ಶಸ್ತ್ರಚಿಕಿತ್ಸೆ ಸವಾಲಿನಿಂದ ಕೂಡಿತ್ತು. ಗರ್ಭಾಶಯಕ್ಕೆ ರಕ್ತ ಪೂರೈಸುವ ಹೊಟ್ಟೆ ಭಾಗದಲ್ಲಿನ ಸಾಮಾನ್ಯ ರಕ್ತನಾಳಗಳನ್ನು ಪತ್ತೆಹಚ್ಚಿ, ಜಾಗರೂಕತೆಯಿಂದ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಸಂತಾನೋತ್ಪತ್ತಿ ವಯಸ್ಸಿನ ಶೇ 20ರಿಂದ ಶೇ 30 ಮಹಿಳೆಯರಲ್ಲಿ ನಾರುಗಡ್ಡೆಗಳು ಕಂಡುಬರುತ್ತವೆ. ಆದರೂ, ಗರ್ಭಾಶಯದಲ್ಲಿ ಅಂತಹ ದೊಡ್ಡ ನಾರುಗಡ್ಡೆ ಕಂಡುಬರುವುದು ಅಪರೂಪ’ ಎಂದು ಡಾ. ಸುನೀಲ್ ಈಶ್ವರ್ ತಿಳಿಸಿದ್ದಾರೆ. 

‘ನಾರುಗಡ್ಡೆ ತೆಗೆದುಹಾಕಲು ಸಾಮಾನ್ಯವಾಗಿ 8 ಸೆಂ.ಮೀ. ಕತ್ತರಿಸುವ ಅಗತ್ಯವಿರುತ್ತದೆ. ಆದರೆ, ಲ್ಯಾಪ್ರೊಸ್ಕೋಪಿ ವಿಧಾನದಲ್ಲಿ 3 ಸೆಂ.ಮೀ. ಕತ್ತರಿಸಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ಆದ 48 ಗಂಟೆಗಳಲ್ಲಿ ರೋಗಿ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT