ಶನಿವಾರ, ಜುಲೈ 2, 2022
27 °C
ರಾಮಯ್ಯ ಶಿಕ್ಷಣ ಸಂಸ್ಥೆ:‘ಸ್ಟಾರ್‌ ಸ್ಟಾರ್ಟ್‌ಅಪ್ಸ್‌’ ಪ್ರಶಸ್ತಿ ಪ್ರದಾನ

ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಯಿಂದ ನವೋದ್ಯಮಗಳಿಗೆ ₹50 ಲಕ್ಷ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಯು ನವೋದ್ಯಮಿಗಳನ್ನು ಪ್ರೋತ್ಸಾಹಿಸಲು ವಿಕಸನ ಕೇಂದ್ರ (ಎವಲ್ಯೂಟ್) ಆರಂಭಿಸಿದ್ದು, 24 ನವೋದ್ಯಮಗಳಿಗೆ ತಲಾ ₹50 ಲಕ್ಷದವರೆಗೆ ನೆರವು ನೀಡಲಿದೆ. ಅಲ್ಲದೆ, ಇದೇ 23ರಂದು ಈ ನವೋದ್ಯಮಗಳಿಗೆ ‘ಸ್ಟಾರ್‌ ಸ್ಟಾರ್ಟ್‌ಅಪ್‌’ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಿದೆ.

‘ಭವಿಷ್ಯದ ನವೋದ್ಯಮಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ವಿಕಸನ ಕೇಂದ್ರ ರಚಿಸಲಾಗಿದೆ. ಆಯ್ಕೆಯಾದ ನವೋದ್ಯಮದ ಸಮಗ್ರ ರೀತಿಯ ಅಭಿವೃದ್ಧಿಗೆ ₹50 ಲಕ್ಷದವರೆಗೆ ಧನಸಹಾಯ ಹಾಗೂ ಇತರೆ ತಾಂತ್ರಿಕ ಮಾರ್ಗದರ್ಶನ ಮತ್ತು ಸಲಹೆ ನೀಡಲಾಗುವುದು’ ಎಂದು ರಾಮಯ್ಯ ಸಮೂಹ ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್.ಸೀತಾರಾಂ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಉದ್ಯಮ ಚಿಂತನೆ ಹೊಂದಿರುವ ಭವಿಷ್ಯದ ನವೋದ್ಯಮಿಗಳಿಂದ ಮೇ–ಜೂನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ದೇಶದಾದ್ಯಂತ 160ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಎಲ್ಲ ಅರ್ಜಿಗಳನ್ನು ಉನ್ನತ ಮಟ್ಟದ ಉದ್ಯಮಿಗಳನ್ನೊಳಗೊಂಡ ತೀರ್ಪುಗಾರರ ತಂಡ ಪರಿಶೀಲಿಸಿತ್ತು. ಅಂತಿಮವಾಗಿ 24 ನವೋದ್ಯಮಿಗಳನ್ನು ಆಯ್ಕೆ ಮಾಡಲಾಗಿದೆ’
ಎಂದರು. 

‘ದೇಶದ 24 ನವೋದ್ಯಮಿಗಳ ಪೈಕಿ, 16 ಉದ್ಯಮಿಗಳು ರಾಜ್ಯದವರೇ ಇದ್ದಾರೆ. ಎಂ.ಎಸ್. ರಾಮಯ್ಯ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳೂ ಇದರಲ್ಲಿದ್ದಾರೆ’ ಎಂದು ಹೇಳಿದರು.

ವಿಕಸನ ಕೇಂದ್ರದ ಸಲಹೆಗಾರ ಸಮರ್ಥ ನಾಗಭೂಷಣಂ, ‘ಮಾರ್ಚ್‌ನಿಂದ ವಿಕಸನ ಕೇಂದ್ರ ಕಾರ್ಯಾರಂಭ ಮಾಡಿತು. ನವೋದ್ಯಮ ಆರಂಭಿಸುವವರಿಗೆ ಎಲ್ಲ ರೀತಿಯ ಸಲಹೆ ಮತ್ತು ಮಾರ್ಗದರ್ಶನದ ಜತೆಗೆ ಆರ್ಥಿಕ ಸಹಾಯವನ್ನು ನೀಡುವ ಉದ್ದೇಶವನ್ನು ಕೇಂದ್ರ ಹೊಂದಿದೆ. ಈ ನಿಟ್ಟಿನಲ್ಲಿ, ಆಯ್ದ 24 ನವೋದ್ಯಮಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಈ ಕಂಪನಿಗಳ ಅಭಿವೃದ್ಧಿಗೆ ಎಲ್ಲ ಸಹಕಾರ ನೀಡಲಾಗುವುದು. ಈ ಪ್ರಕ್ರಿಯೆ ಪ್ರತಿ ವರ್ಷವೂ ನಡೆಯಲಿದೆ’ ಎಂದರು.

ಕೇಂದ್ರದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮುರಳೀಕೃಷ್ಣನ್ ಗೋಪಾಲಕೃಷ್ಣನ್ ಇದ್ದರು.

ಈ ಪ್ರಶಸ್ತಿ ಪ್ರದಾನ ಸಮಾರಂಭವು ಸೋಮವಾರ ಬೆಳಿಗ್ಗೆ 11.30ಕ್ಕೆ ರಾಮಯ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು