ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ ನಿವಾರಣೆಗೆ ₹556 ಕೋಟಿ: ಡಿ.ಕೆ. ಶಿವಕುಮಾರ್‌

ನೋಂದಣಿ ಮಾಡಿಸಿಕೊಳ್ಳದಿದ್ದರೆ ಟ್ಯಾಂಕರ್‌ಗಳು ಸೀಜ್: ಡಿ.ಕೆ. ಶಿವಕುಮಾರ್‌
Published 4 ಮಾರ್ಚ್ 2024, 20:00 IST
Last Updated 4 ಮಾರ್ಚ್ 2024, 20:00 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿನ ನೀರಿನ ಸಮಸ್ಯೆಯನ್ನು ನಿವಾರಿಸಲು ₹556 ಕೋಟಿ ಮೀಸಲಿಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಮತ್ತು ಪರಿಹಾರ ಕ್ರಮಗಳ ಕುರಿತು ಸೋಮವಾರ ನಡೆದ ಅಧಿಕಾರಿಗಳ ಸಭೆಯ ನಂತರ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ನಗರ ವ್ಯಾಪ್ತಿಯ ಎಲ್ಲ ಶಾಸಕರಿಗೆ ನೀರಿನ ಸಮಸ್ಯೆ ಬಗೆಹರಿಸಲು ತಲಾ ₹10 ಕೋಟಿ ಅನುದಾನ ನೀಡಲಾಗಿದೆ. ಬಿಬಿಎಂಪಿಯಿಂದ ₹148 ಕೋಟಿ,  ಬೆಂಗಳೂರು ಜಲಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ)ಯಿಂದ ₹128 ಕೋಟಿ ಸೇರಿದಂತೆ ಒಟ್ಟು ₹556 ಕೋಟಿಯನ್ನು ಕುಡಿಯುವ ನೀರಿನ ಪೂರೈಕೆಗೆ ಮೀಸಲಿಡಲಾಗಿದೆ’ ಎಂದರು.

‘ನೀರಿನ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಸಹಾಯವಾಣಿ ಮತ್ತು ವಾರ್ಡ್ ವಾರು ದೂರು ಕೇಂದ್ರಗಳನ್ನು ತೆರೆಯಲಾಗುವುದು. ಕುಡಿಯುವ ನೀರನ್ನು ಪೂರೈಕೆ ಮಾಡುವುದು ಸರ್ಕಾರದ ಜವಾಬ್ದಾರಿ. ಬೆಂಗಳೂರಿನ ಜನತೆ ಗಾಬರಿಯಾಗುವುದು ಬೇಡ. ಪ್ರತಿಯೊಬ್ಬರಿಗೂ ನೀರು ನೀಡುತ್ತೇವೆ’ ಎಂದು ಭರವಸೆ ನೀಡಿದರು.

ನಗರದಲ್ಲಿ 16,781 ಕೊಳವೆ ಬಾವಿಗಳಿವೆ. ಇದರಲ್ಲಿ 6,997 ಕೊಳವೆ ಬಾವಿಗಳು ಬತ್ತಿ ಹೋಗಿದ್ದು, 7,784 ಕೊಳವೆ ಬಾವಿಗಳು ಚಾಲ್ತಿಯಲ್ಲಿವೆ. ಹೊಸ ಕೊಳವೆ ಬಾವಿ ಕೊರೆಸಲು ಸ್ಥಳೀಯ ಗುತ್ತಿಗೆದಾರರು ಮತ್ತು ತಮಿಳುನಾಡಿನ ಕೊಳವೆಬಾವಿ ಕೊರೆಯುವವರ ನಡುವೆ ದರದ ವಿಚಾರವಾಗಿ ಒಂದಷ್ಟು ಗೊಂದಲಗಳಿದ್ದು, ಇದನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ನಿಷ್ಕ್ರಿಯವಾಗಿರುವ ಎಲ್ಲ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಚಾಲನೆ ನೀಡಲಾಗುವುದು. ಬೆಸ್ಕಾಂನವರು ನಗರದಲ್ಲಿ ಚಾಲನೆಯಲ್ಲಿರುವ ಕೃಷಿ, ವಾಣಿಜ್ಯ ಬಳಕೆಯ ಕೊಳವೆ ಬಾವಿಗಳ ಮಾಹಿತಿಗಳನ್ನು ದಾಖಲಿಸಬೇಕು ಎಂದರು.

‘ನಾಗರಿಕರು ಸಹ ಅನಗತ್ಯವಾಗಿ ನೀರನ್ನು ಬಳಕೆ ಮಾಡಬಾರದು. ಉದ್ಯಾನಗಳಿಗೆ, ಇತರೇ ಬಳಕೆಗೆ ಸಂಸ್ಕರಿಸಿದ ನೀರನ್ನು ಪೂರೈಸಲಾಗುವುದು. ಭೀಕರ ಬರಗಾಲದಲ್ಲಿ ನೀರಿನ ಮಿತ ಬಳಕೆ ಮಾಡಬೇಕು’ ಎಂದು ಮನವಿ ಮಾಡಿದರು.

ಬಿಡಿಎ ಅಧ್ಯಕ್ಷ ಎನ್.ಎ ಹ್ಯಾರೀಸ್, ಆಡಳಿತಗಾರ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಬಿಡಿಎ ಆಯುಕ್ತ ಜಯರಾಮ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್ ಉಪಸ್ಥಿತರಿದ್ದರು.

7ರಂದು ದರ ನಿಗದಿ

‘ಖಾಸಗಿ ಟ್ಯಾಂಕರ್ ನೀರು ಪೂರೈಕೆ ಮಾಲೀಕರ ಸಭೆ ಮಾರ್ಚ್‌ 7ರಂದು ನಡೆಯಲಿದ್ದು ಅಂದೇ ಟ್ಯಾಂಕರ್‌ಗಳ ನೀರಿನ ದರ ನಿಗದಿ ಮಾಡಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು. ‘ಎಲ್ಲಾ ನೀರಿನ ಟ್ಯಾಂಕರ್ ಮಾಲೀಕರು ಮಾರ್ಚ್‌ 7ರೊಳಗೆ ನೋಂದಣಿ ಮಾಡಿಸದಿದ್ದರೆ ವಶಪಡಿಸಿಕೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಖಡಕ್ ಎಚ್ಚರಿಕೆ ನೀಡಿದರು. ‘ಬೆಂಗಳೂರಿನಲ್ಲಿ 3500 ಟ್ಯಾಂಕರ್‌ಗಳು ಇದ್ದು ಕೇವಲ 219 ಟ್ಯಾಂಕರ್‌ಗಳ ಮಾಲೀಕರು ನೋಂದಣಿ ಮಾಡಿಕೊಂಡಿದ್ದಾರೆ. ನಿರುಪಯುಕ್ತ ಹಾಲಿನ ಟ್ಯಾಂಕರ್‌ಗಳನ್ನು ನೀರು ಸರಬರಾಜಿಗೆ ಬಳಕೆ ಮಾಡಲು ಸೂಚಿಸಲಾಗಿದೆ. ಕೆಎಂಎಫ್ ವ್ಯಾಪ್ತಿಯ ಎಲ್ಲಾ ಘಟಕಗಳಿಂದ ಟ್ಯಾಂಕರ್‌ಗಳನ್ನು ತರಿಸಿ ನೀರಿನ ಸಮಸ್ಯೆ ಬಗೆಹರಿಯುವವರೆಗೆ ಬಳಸಲಾಗುತ್ತದೆ’ ಎಂದು ತಿಳಿಸಿದರು. ಕಾವೇರಿ 5 ನೇ ಹಂತದ ಕಾಮಗಾರಿಯಲ್ಲಿ ಎರಡು ಕಿ.ಮೀ. ನಷ್ಟು ಸಮಸ್ಯೆ ಇದೆ. ಅರಣ್ಯ ಭೂಮಿ ಮತ್ತು ಒಂದು ಕಡೆ ಕಲ್ಲು ಅಡ್ಡ ಬಂದಿರುವುದರಿಂದ ಸಮಸ್ಯೆ ಉಂಟಾಗಿದೆ. ತೊಡಕು ನಿವಾರಣೆ ಮಾಡಿ 110 ಹಳ್ಳಿಗಳಿಗೆ ಮೇ ಅತ್ಯಂತ ವೇಳೆಗೆ ನೀರು ಪೂರೈಕೆಯಾಗುವುದು ಎಂದು ಹೇಳಿದರು.‌

‘ನೀರು ಸರ್ಕಾರಕ್ಕೆ ಸೇರಿದ್ದು’

‘ನೀರು ಸರ್ಕಾರಕ್ಕೆ ಸೇರಿದ್ದು. ಯಾವುದೇ ವೈಯಕ್ತಿಕ ವ್ಯಕ್ತಿಗೆ ಸೇರಿದ್ದಲ್ಲ. ಯಾವ ನೀರನ್ನು ಬೇಕಾದರೂ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹಕ್ಕು ಸರ್ಕಾರಕ್ಕೆ ಇದೆ. ಬೆಂಗಳೂರು ಹೊರವಲಯದಲ್ಲಿ ಅಂತರ್ಜಲ ನೀರಿನ ಮಟ್ಟ ಹೆಚ್ಚಿರುವ ಕಡೆಯಿಂದಲೂ ನೀರಿನ ಪೂರೈಕೆ ಮಾಡಲು ಸಿದ್ದರಾಗಿರಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ. ನೀರಿನ ಸಮಸ್ಯೆ ಬಗೆಹರಿಸಲು ಚುನಾವಣಾ ನೀತಿ ಸಂಹಿತೆ ಅಡ್ಡ ಬರುವುದಿಲ್ಲ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

110 ಹಳ್ಳಿಗಳ 35 ವಾರ್ಡ್‌ಗಳಿಗೆ ನೋಡಲ್‌ ಅಧಿಕಾರಿ

ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳನ್ನು ಒಳಗೊಂಡ 35 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. 35 ವಾರ್ಡ್‌ಗಳಿಗೂ ಒಬ್ಬೊಬ್ಬ ನೋಡಲ್‌ ಅಧಿಕಾರಿಯನ್ನು ನೇಮಿಸಲಾಗಿದ್ದು ಮೇಲುಸ್ತುವಾರಿಗಾಗಿ ದಾಸರಹಳ್ಳಿ ವಲಯದ ಕಾರ್ಯಪಾಲಕ ಎಂಜಿನಿಯರ್‌ ಧರಣೇಂದ್ರ ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ. 110 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ಸಹಾಯವಾಣಿ 1533ಗೆ ಕರೆ ಮಾಡಬಹುದು. ಬಿಬಿಎಂಪಿ ವ್ಯಾಪ್ತಿಯ ಇನ್ನುಳಿದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದ್ದರೆ ಜಲಮಂಡಳಿ ಮಂಡಳಿ ಸಹಾಯವಾಣಿ 1916ಗೆ ಕರೆ ಮಾಡಬಹುದು ಎಂದು ಬಿಬಿಎಂಪಿ ಯೋಜನಾ ವಿಭಾಗದ ವಿಶೇಷ ಆಯುಕ್ತ ಡಾ. ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT