ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹78 ಲಕ್ಷ ಕೋಟಿ ಡಿಜಿಟಲ್‌ ಆರ್ಥಿಕತೆ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳ

ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿಕೆ
Last Updated 24 ಜೂನ್ 2022, 20:41 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದ ಡಿಜಿಟಲ್‌ ಆರ್ಥಿಕತೆಯು 2025ರ ವೇಳೆಗೆ ಒಂದು ಟ್ರಿಲಿಯನ್‌ ಡಾಲರ್‌ (₹78.29 ಲಕ್ಷ ಕೋಟಿ) ತಲುಪುವ ನಿರೀಕ್ಷೆ ಇದೆ’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.

ನಗರದಲ್ಲಿ ಶುಕ್ರವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಕೇಂದ್ರ (’ಇನ್‌-ಸ್ಪೇಸ್‌’), ನ್ಯೂ ಸ್ಪೇಸ್‌ ಇಂಡಿಯಾ ಲಿಮಿಟೆಡ್‌ (ಎನ್‌ಎಸ್‌ಐಎಲ್‌) ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸಹಯೋಗದಲ್ಲಿ ಭಾರತೀಯ ಖಗೋಳ ಸೊಸೈಟಿ(ಎಎಸ್‌ಐ) ಆಯೋಜಿಸಿದ್ದ ’ಭಾರತದಲ್ಲಿ ಬಾಹ್ಯಾಕಾಶ ನವೋದ್ಯಮಗಳ ಅಭಿವೃದ್ಧಿ’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

’ದೇಶದ ಆರ್ಥಿಕತೆಯ ಕೇಂದ್ರ ಬಿಂದುವಾಗುತ್ತಿರುವ ನವೋದ್ಯಮಗಳು ವೇಗವಾಗಿ ಬೆಳೆಯುತ್ತಿವೆ. ಬಾಹ್ಯಾಕಾಶ ಸೇರಿ ಎಲ್ಲ ವಲಯಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ನವೋದ್ಯಮಗಳು ಈಗ ಆರ್ಥಿಕತೆಗೆ ಹೊಸ ಚೈತನ್ಯ ತುಂಬುತ್ತಿವೆ’ ಎಂದರು.

‘ಸರ್ಕಾರ ಡಿಜಿಲಿಟೀಕರಣಕ್ಕೆ ಆದ್ಯತೆ ನೀಡಿದೆ. ಹಣಕಾಸು ವಲಯವನ್ನು ಸಂಪೂರ್ಣವಾಗಿ ಡಿಜಿಲೀಕರಣಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ. ಇದರಿಂದಾಗಿಯೇ ಎನ್‌ಪಿಸಿಐ, ಯುಪಿಐಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದರು.

‘ದಶಕಗಳ ಕಾಲ ದೇಶದ ಆರ್ಥಿಕತೆಯು ಕೆಲವೇ ಕಂಪನಿಗಳ ಮೇಲೆ ಅವಲಂಬಿತವಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಅವಕಾಶಗಳನ್ನು ಸೃಷ್ಟಿಸಲಾಗಿದೆ. ಕೃತಕ ಬುದ್ಧಿಮತ್ತೆ, ಮಷಿನ್‌ ಲರ್ನಿಂಗ್‌ ಮುಂತಾದ ಹೊಸ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ’ ಎಂದರು.

ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಕೇಂದ್ರದ (’ಇನ್‌-ಸ್ಪೇಸ್‌’) ಅಧ್ಯಕ್ಷ ಡಾ. ಪವನ್‌ ಕುಮಾರ್‌ ಗೋಯೆಂಕಾ, ‘ಬಾಹ್ಯಾಕಾಶ ತಂತ್ರಜ್ಞಾನ ಜನಸಾಮಾನ್ಯರಿಗೆ ತಲುಪಬೇಕು. ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಿದೆ. ರಾಜಕೀಯ ಇಚ್ಛಾಶಕ್ತಿಯ ಬಗ್ಗೆ ಅನುಮಾನ ಬೇಡ. ಈ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಸಾಗಬೇಕಾಗಿದೆ’ ಎಂದು ಸಲಹೆ ನೀಡಿದರು.

ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಎಸ್‌. ಸೋಮನಾಥ್‌ , ‘ಬಾಹ್ಯಾಕಾಶ ಕ್ಷೇತ್ರದಲ್ಲಿ ಸರ್ಕಾರೇತರ ಸಂಸ್ಥೆಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ಆದ್ಯತೆ ನೀಡಲಾಗುವುದು. ಬಾಹ್ಯಾಕಾಶ ಕ್ಷೇತ್ರದಲ್ಲಿ ಸದ್ಯ 100ಕ್ಕೂ ಹೆಚ್ಚು ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಈ ಉದ್ಯಮಗಳಿಗೆ ಬೆಂಬಲ ಅಗತ್ಯ’ ಎಂದು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT