ಶನಿವಾರ, ಫೆಬ್ರವರಿ 29, 2020
19 °C
ಸ್ಮಾರ್ಟ್‌ ಸಿಟಿ ಯೋಜನೆಯಡಿ ಬಸ್ ಗುತ್ತಿಗೆ

ಮೆಟ್ರೊ ಫೀಡರ್‌ಗೆ 90 ಎಲೆಕ್ಟ್ರಿಕ್ ಬಸ್

ವಿಜಯಕುಮಾರ್‌ ಎಸ್‌.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಫೆಮಾ ಇಂಡಿಯಾ ಯೋಜನೆಯಡಿ ಬಿಎಂಟಿಸಿಗೆ 300 ಎಲೆಕ್ಟ್ರಿಕ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ವಿಳಂಬವಾಗುತ್ತಿರುವ ಬೆನ್ನಲ್ಲೇ, ಮೆಟ್ರೊ ಫೀಡರ್ ಸೇವೆಗೆ 90 ಎಲೆಕ್ಟ್ರಿಕ್‌ ಬಸ್‌ಗಳನ್ನು ಪಡೆಯಲು ಕೆಎಸ್‌ಆರ್‌ಟಿಸಿ ಟೆಂಡರ್ ಆಹ್ವಾನಿಸಿದೆ.

ಇದೇ 3ರಂದು ಟೆಂಡರ್ ಆಹ್ವಾನಿಸಿದ್ದು, ಬಿಡ್ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಹವಾನಿಯಂತ್ರಣರಹಿತ, 30ರಿಂದ 35 ಸೀಟುಗಳನ್ನು ಹೊಂದಿರುವ 9 ಮೀಟರ್ ಉದ್ದದ ಬಸ್‌ಗಳನ್ನು ಗುತ್ತಿಗೆಗೆ ಪಡೆಯಲು ಉದ್ದೇಶಿಸಲಾಗಿದೆ.

ಬಸ್‌ಗಳನ್ನು ಖರೀದಿಸಿ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಟೆಂಡರ್ ಸಂಸ್ಥೆಯೇ ನೋಡಿಕೊಳ್ಳಬೇಕು. ಅದಕ್ಕೆ ಬೇಕಿರುವ ಚಾರ್ಚಿಂಗ್ ಪಾಯಿಂಟ್‌ಗಳು ಮತ್ತು ಚಾಲಕರನ್ನೂ ಒದಗಿಸಬೇಕೆಂಬ ಷರತ್ತನ್ನೂ ವಿಧಿಸಲಾಗಿದೆ.

ಒಮ್ಮೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೆ ಮುಂದಿನ ಆರು ತಿಂಗಳಲ್ಲಿ ನಗರದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭವಾಗಲಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಯೋಜನೆಗೆ ಸ್ಮಾರ್ಟ್‌ ಸಿಟಿ ಯೋಜನೆಯ ಆಡಳಿತ ಮಂಡಳಿ ₹50 ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಒಂದು ಬಾಗಿಲನ್ನು ಹೊಂದಿರುವ ಈ ಬಸ್‌ಗಳು ಎಲ್ಲಾ ಮೆಟ್ರೊ ನಿಲ್ದಾಣಗಳಿಂದ ಫೀಡರ್ ಸೇವೆಗಳಾಗಿ ಮಾತ್ರ ಸಂಚರಿಸಲಿವೆ.

ಈ ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಮಗ್ರ ಸಂಚಾರ ವ್ಯವಸ್ಥೆಯಡಿ ಸ್ಮಾರ್ಟ್ ಕಾರ್ಡ್‌ ಸೇವೆ ಒದಗಿಸುವ ಆಲೋಚನೆಯನ್ನೂ ಬಿಎಂಟಿಸಿ ಹೊಂದಿದೆ. ಆದರೆ, ಈ ಬಗ್ಗೆ ಇನ್ನೂ ಅಂತಿಮ ನಿರ್ಣಯವಾಗಿಲ್ಲ ಎಂದೂ ಬಿಎಂಟಿಸಿ ಮೂಲಗಳು ತಿಳಿಸಿವೆ.

ಮರು ಟೆಂಡರ್

ಫೆಮಾ ಇಂಡಿಯಾ ಯೋಜನೆಯಡಿ ಬಿಎಂಟಿಸಿಗೆ 300 ಸೇರಿ ಒಟ್ಟು 400 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಕೆಎಸ್‌ಆರ್‌ಟಿಸಿ ಮತ್ತೊಮ್ಮೆ ಟೆಂಡರ್‌ ಕರೆದಿದೆ.

ಈ ಹಿಂದೆ ಕರೆದಿದ್ದ ಟೆಂಡರ್‌ನಲ್ಲಿ ಹೈದರಾಬಾದ್‌ನ ಕಂಪನಿಯು ಪ್ರತಿ ಕಿಲೋ ಮೀಟರ್‌ಗೆ ₹89.64 ನಮೂದಿಸಿ ಬಿಡ್ ಸಲ್ಲಿಸಿತ್ತು. ದುಬಾರಿ ಎಂಬ ಕಾರಣಕ್ಕೆ ಟೆಂಡರ್ ರದ್ದುಗೊಳಿಸಿ ಮತ್ತೊಮ್ಮೆ ಕರೆಯಲಾಗಿದೆ.

ಈ ಯೋಜನೆಯಡಿ ಕೆಎಸ್‌ಆರ್‌ಟಿಸಿ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ತಲಾ 50 ಬಸ್‌ಗಳನ್ನು
ಪಡೆಯಲಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು