ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳಿಮಾವು ಕೆರೆ ದಂಡೆ ಒಡೆದವರಾರು?

ಒಡೆದ ಹುಳಿಮಾವು ಕೆರೆ ದಂಡೆ: ಅಪಾರ ಹಾನಿ
Last Updated 25 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಹುಳಿಮಾವು ಕೆರೆ ದಂಡೆ ಒಡೆದಿದ್ದರಿಂದ ಆರೇಳು ಬಡಾವಣೆ ಕೆಸರುಮಯವಾಗಿದ್ದು, ನೂರಾರು ಮಂದಿ ಬೀದಿಗೆ ಬಿದ್ದಿದ್ದಾರೆ. ಆದರೆ, ಅನಾಹುತಕ್ಕೆ ಯಾರು ಕಾರಣ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಅಳಲು ಆಲಿಸಿದರು.

ವಾರ್ಡ್‌ನ ಮನೆಗಳು, ರಸ್ತೆಗಳು ಕೆಸರುಗದ್ದೆಯಾಗಿವೆ. ನಿಂತ ನೀರು ದುರ್ವಾಸನೆ ಬೀರುತ್ತಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಹರಡಿದೆ.

ಹಾವು, ಆಮೆಗಳು ಕಣ್ಮುಂದೆಯೇ ಹರಿದಾಡುತ್ತಿದ್ದು ಸ್ಥಳೀಯರು ಆತಂಕದಲ್ಲಿಯೇ ಸಮಯ ದೂಡುತ್ತಿದ್ದಾರೆ. ಪ್ರತಿ ಮನೆಯಲ್ಲಿ ಕನಿಷ್ಠ ₹1ಲಕ್ಷ, ವಾಣಿಜ್ಯ ಮಳಿಗೆಗಳಲ್ಲಿ ಕನಿಷ್ಠ ₹5ಲಕ್ಷ ಮೌಲ್ಯದಷ್ಟು ಆಸ್ತಿ–ಪಾಸ್ತಿ ಹಾನಿಯಾಗಿದೆ. ಹೆಚ್ಚು ಹಾನಿಗೊಳಗಾಗಿರುವ 319 ಮನೆಗಳನ್ನು ಗುರುತಿಸಲಾಗಿದ್ದು, ಇವು ಪರಿಹಾರಕ್ಕೆ ಅರ್ಹವಾಗಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ವಸತಿ ಸಚಿವ ವಿ. ಸೋಮಣ್ಣ, ‘ಮನೆ ಹಾನಿಯಾದವರಿಗೆ ₹5ಲಕ್ಷ ಪರಿಹಾರ ನೀಡಲಾಗುವುದು ಇಲ್ಲವೇ ಸರ್ಕಾರದ ವತಿಯಿಂದ ಮನೆಯನ್ನು ನಿರ್ಮಿಸಿಕೊಡಲಾಗುವುದು. ಸದ್ಯ, ಪ್ರಾರಂಭಿಕ ಹಂತದಲ್ಲಿ ಸಂತ್ರಸ್ತರಿಗೆ ಪ್ರತಿ ಕುಟುಂಬಕ್ಕೆ ₹50 ಸಾವಿರ ನೀಡಲಾಗುವುದು. ಇದರಲ್ಲಿ ₹10 ಸಾವಿರವನ್ನು ಬಿಬಿಎಂಪಿ ಭರಿಸಿದರೆ, ₹40ಸಾವಿರವನ್ನು ಸರ್ಕಾರ ಕೊಡಲಿದೆ’ ಎಂದು ಅವರು
ತಿಳಿಸಿದರು.

ಒತ್ತುವರಿ ಮಾಹಿತಿ ಇಲ್ಲ:143 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕೆರೆ ಎಷ್ಟು ಒತ್ತುವರಿಯಾಗಿದೆ ಎಂಬ ಬಗ್ಗೆ ಈವರೆಗೆ ಅಧಿಕಾರಿಗಳಲ್ಲಿ ಮಾಹಿತಿ ಇಲ್ಲ. ಒತ್ತುವರಿ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೆರೆ ಒಡೆದಿರುವುದಕ್ಕೆ ಕಾರಣ ಕುರಿತು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲಾಗುವುದು
-ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ

ಬಿಬಿಎಂಪಿಗೆ ಲೋಕಾಯುಕ್ತ ನೋಟಿಸ್

‘ನಿಮ್ಮ ಕೆಲಸ ನೀವು ಸರಿಯಾಗಿ ಮಾಡದಿದ್ದರೆ ನನ್ನ ಕೆಲಸವನ್ನು ನಾನು ಮಾಡಬೇಕಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಎಚ್ಚರಿಕೆ ನೀಡಿದರು.

‘ಪ್ರಕರಣದ ತನಿಖೆ ನಡೆಸುವಂತೆ ಬಿಬಿಎಂಪಿಗೆ ನೋಟಿಸ್‌ ನೀಡಿದ್ದೇನೆ.ಈವರೆಗೆ ಘಟನೆಗೆ ನಿಖರ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ತನಿಖೆಯ ನಂತರ ತಪ್ಪಿತಸ್ಥರ ಪತ್ತೆಯಾಗಿದೆ. ಅವಘಡಕ್ಕೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಅವರು ತಿಳಿಸಿದರು.

‘ಪರಿಹಾರ ಕಾರ್ಯ ಚುರುಕುಗೊಳಿಸಬೇಕು. ಊಟ–ವಸತಿ ವ್ಯವಸ್ಥೆ ಕಲ್ಪಿಸಬೇಕು. ಶಾಲೆಗೆ ಹೋಗಲು ಮಕ್ಕಳಿಗೆ ತೊಂದರೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ನಿಷ್ಪಕ್ಷಪಾತವಾಗಿ ಪರಿಹಾರ ಕಾರ್ಯ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT