ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಮಹಿಳೆ ಜತೆಗೆ ಸಲುಗೆ: ಸ್ನೇಹಿತನ ಕೊಲೆ

ರೌಡಿಶೀಟರ್‌ ಸೇರಿ ಇಬ್ಬರನ್ನು ಬಂಧಿಸಿದ ಸಿದ್ದಾಪುರ ಠಾಣೆ ಪೊಲೀಸರು
Published 3 ಆಗಸ್ಟ್ 2024, 15:33 IST
Last Updated 3 ಆಗಸ್ಟ್ 2024, 15:33 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯೊಂದಿಗೆ ಸಲುಗೆ ಬೆಳೆಸಿದ್ದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರನ್ನು ಶನಿವಾರ ಮುಂಜಾನೆ ಕೊಲೆ ಮಾಡಲಾಗಿದ್ದು, ಪ್ರಕರಣದಲ್ಲಿ ರೌಡಿಶೀಟರ್‌ ಸೇರಿ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದಯಾನಂದನಗರದ ಕೊಳೆಗೇರಿಯ ನಿವಾಸಿ ಸೈಯದ್ ಇಸಾಕ್ (31) ಕೊಲೆಯಾದ ವ್ಯಕ್ತಿ. 

ಸಿದ್ದಾಪುರ ಠಾಣಾ ರೌಡಿಶೀಟರ್ ವೆಂಕಟೇಶ ಅಲಿಯಾಸ್ ಒಂಟಿ ಕೈ ವೆಂಕಟೇಶ್, ಅಜಯ್ ಬಂಧಿತರು.

ಕೊಲೆಯಾದ ಇಸಾಕ್ ಹಾಗೂ ಬಂಧಿತ ಆರೋಪಿಗಳು ಸ್ನೇಹಿತರಾಗಿದ್ದರು. ಈ ಹಿಂದೆ ಮೂವರೂ ಕೊಲೆ ಯತ್ನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದರು. ನಂತರ, ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.

‘ಇಸಾಕ್‌ಗೆ ಮದುವೆಯಾಗಿ ಒಂದು ಮಗುವಿದೆ. ಇವರ ಗುಂಪಿನಲ್ಲೇ ಗುರುತಿಸಿಕೊಂಡಿದ್ದ ಸ್ನೇಹಿತರೊಬ್ಬರ ಪತ್ನಿಯ ಜತೆಗೆ ಇಸಾಕ್‌ ಸಲುಗೆ ಬೆಳೆಸಿಕೊಂಡಿದ್ದರು. ಈ ವಿಷಯವು ಆಕೆಯ ಪತಿಯ ಗಮನಕ್ಕೆ ಬಂದಿತ್ತು. ಆತ ಒಂಟಿ ಕೈ ವೆಂಕಟೇಶ್ ಬಳಿ ಈ ವಿಚಾರ ಹೇಳಿಕೊಂಡಿದ್ದರು. ಇಸಾಕ್‌ನನ್ನು ಕರೆಸಿಕೊಂಡಿದ್ದ ವೆಂಕಟೇಶ್, ಸ್ನೇಹಿತನ ಪತ್ನಿಯ ಜೊತೆಗೆ ಸಲುಗೆಯಿಂದ ಇರುವುದನ್ನು ಬಿಡುವಂತೆ ಎಚ್ಚರಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಇಸಾಕ್ ನನಗೆ ಬುದ್ದಿಮಾತು ಹೇಳುವ ಅಗತ್ಯವಿಲ್ಲ ಎಂದು ಬೆದರಿಕೆ ಹಾಕಿದ್ದರು. ಅಲ್ಲದೇ, ವೆಂಕಟೇಶ್‌ನನ್ನು ಕೊಲೆ ಮಾಡುವುದಾಗಿ ಸ್ನೇಹಿತರ ಬಳಿ ಹೇಳಿಕೊಂಡು ಓಡಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಕೊಲೆ ಮಾಡುವ ವಿಚಾರವನ್ನು ಹಲವರ ಬಳಿ ಹೇಳಿಕೊಂಡಿದ್ದು ವೆಂಕಟೇಶ್ ಗಮನಕ್ಕೂ ಬಂದಿತ್ತು. ಶುಕ್ರವಾರ ಪರಸ್ಪರ ಎದುರಾಗಿ ಗಲಾಟೆ ಮಾಡಿಕೊಂಡಿದ್ದರು. ಆಗ ಸ್ಥಳೀಯರು ಇಬ್ಬರನ್ನೂ ಸಮಾಧಾನ ಪಡಿಸಿ ಮನೆಗೆ ಕಳುಹಿಸಿದ್ದರು. ನಂತರ, ವೆಂಕಟೇಶ್ ತನ್ನ ಸಹಚರ ಅಜಯ್ ಜೊತೆಗೆ ಸೇರಿ ಇಸಾಕ್ ಕೊಲೆಗೆ ಸಂಚು ರೂಪಿಸಿದ್ದರು. ಶನಿವಾರ ಮುಂಜಾನೆ ದಯಾನಂದನಗರದ ಕೊಳೆಗೇರಿ ಬಳಿಯ ಮೋರಿ ಬಳಿ ಇಸಾಕ್ ಕರೆಸಿಕೊಂಡಿದ್ದ ಆರೋಪಿಗಳು ಮತ್ತೆ ಜಗಳ ತೆಗೆದಿದ್ದರು. ಗಲಾಟೆ ವಿಕೋಪಕ್ಕೆ ಹೋಗಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಇಸಾಕ್‌ ಕುಟುಂಬಸ್ಥರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.

ವೆಂಕಟೇಶ್‌ 
ವೆಂಕಟೇಶ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT