ಬೆಂಗಳೂರು: ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ಬೆಂಗಳೂರು ರೈಲು ನಿಲ್ದಾಣದ ಸುತ್ತಲ ಪ್ರದೇಶದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ವಾಹನಗಳ ಸಂಚಾರವನ್ನು ಶಿಸ್ತುಬದ್ಧಗೊಳಿಸಲು ನಿಲ್ದಾಣದ ಆಗಮನ–ನಿರ್ಗಮನಗಳಲ್ಲಿ ಪ್ರವೇಶ ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ನಿಲ್ದಾಣದ ವಾಹನ ನಿಲುಗಡೆ ಪ್ರದೇಶ ಹೊರತುಪಡಿಸಿ ಬೇರೆ ಕಡೆಗಳಲ್ಲಿ ವಾಹನಗಳು 10 ನಿಮಿಷಕ್ಕಿಂತ ಹೆಚ್ಚು ಕಾಲ ನಿಂತಲ್ಲಿ ದ್ವಿಚಕ್ರ ವಾಹನಗಳು ₹ 40 ಮತ್ತು ನಾಲ್ಕು ಚಕ್ರ ವಾಹನಗಳು ₹ 50 ಪ್ರವೇಶ ನಿಯಂತ್ರಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 20ರಿಂದ 30 ನಿಮಿಷಗಳವರೆಗೆ ದ್ವಿಚಕ್ರ ವಾಹನಗಳು ₹ 100 ಮತ್ತು ನಾಲ್ಕು ಚಕ್ರ ವಾಹನಗಳು ₹ 200 ನೀಡಬೇಕಾಗುತ್ತದೆ. 30 ನಿಮಿಷ ದಾಟಿದರೆ ವಾಹನಗಳನ್ನು ವಾರಸುದಾರರಿಲ್ಲದ ವಾಹನ ಎಂದು ಪರಿಗಣಿಸಿ ವಶಕ್ಕೆ ಪಡೆಯಲಾಗುತ್ತದೆ. ಚಾಲಕರಿಗೆ ದಂಡ ವಿಧಿಸಲಾಗುತ್ತದೆ.
ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಮೊದಲ 2 ಗಂಟೆ ಅವಧಿಗೆ ದ್ವಿಚಕ್ರ ವಾಹನಕ್ಕೆ ₹ 10, ನಾಲ್ಕು ಚಕ್ರ ವಾಹನಗಳಿಗೆ ₹ 20 ಶುಲ್ಕ ಮಾತ್ರವಿದೆ. ಹಾಗಾಗಿ ವಾಹನವನ್ನು ನಿಗದಿಪಡಿಸಿದ ಪಾರ್ಕಿಂಗ್ ಸ್ಥಳದಲ್ಲಿಯೇ ನಿಲ್ಲಿಸುವಂತೆ ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.