ಶನಿವಾರ, ಜುಲೈ 2, 2022
24 °C
ಬಾಲಕನಿಗೆ ವಿಮಾನ ತೋರಿಸಲು ಹೊರಟಿದ್ದ ವ್ಯಾಪಾರಿ

ಅಪಘಾತ: ಮೇಲ್ಸೇತುವೆಯಿಂದ ಬಿದ್ದು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಜಕ್ಕೂರು ಮೇಲ್ಸೇತುವೆಯಲ್ಲಿ ಭಾನುವಾರ ಅಪಘಾತ ಸಂಭವಿಸಿದ್ದು, ಗೋವಿಂದಪ್ಪ (46) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

‘ಗೌರಿಬಿದನೂರಿನ ಗೋವಿಂದಪ್ಪ, ಪಾನಿಪುರಿ ವ್ಯಾಪಾರಿ. ಜಕ್ಕೂರಿನಲ್ಲಿ ಕುಟುಂಬದ ಜೊತೆ ವಾಸವಿದ್ದರು. ಪತ್ನಿ ಸಹೋದರಿ ಮಗ ಸಂಜಯ್‌ನಿಗೆ (11) ವಿಮಾನ ತೋರಿಸಲೆಂದು ಬೆಳಿಗ್ಗೆ 7.20ರ ಸುಮಾರಿಗೆ ಏರೋಡ್ರಮ್‌ ಬಳಿ ಕರೆದೊಯ್ಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಸಂಜಯ್ ಸಹ ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಯಲಹಂಕ ಸಂಚಾರ ಪೊಲೀಸರು ಹೇಳಿದರು.

‘ಟಿವಿಎಸ್ ಮೊಪೆಡ್ ದ್ವಿಚಕ್ರ ವಾಹನದಲ್ಲಿ ಗೋವಿಂದಪ್ಪ ಹೊರಟಿದ್ದರು. ಹಿಂಬದಿಯಲ್ಲಿ ಸಂಜಯ್ ಕುಳಿತಿದ್ದ. ಮೇಲ್ಸೇತುವೆಯಲ್ಲಿ ಮೊಪೆಡ್ ತೆರಳುತ್ತಿದ್ದಾಗ, ಅದೇ ಮಾರ್ಗದಲ್ಲಿ ಅತೀ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿತ್ತು. ರಸ್ತೆಯಲ್ಲೇ ಮೊಪೆಡ್ ಉರುಳಿಬಿದ್ದಿತ್ತು. ಅದರ ಪಕ್ಕವೇ ಸಂಜಯ್ ಬಿದ್ದಿದ್ದ. ಗೋವಿಂದಪ್ಪ ಅವರು ಹಾರಿ ಮೇಲ್ಸೇತುವೆಯಿಂದ ಕೆಳ ರಸ್ತೆಗೆ ಬಿದ್ದಿದ್ದರು.’

‘ತಲೆಗೆ ತೀವ್ರ ಪೆಟ್ಟು ಬಿದ್ದು ಗೋವಿಂದಪ್ಪ ಸ್ಥಳದಲ್ಲೇ ಮೃತಪಟ್ಟರು. ಸ್ಥಳೀಯರೇ ಸಂಜಯ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ’ ಎಂದೂ ತಿಳಿಸಿದರು.

ಆಸ್ಪತ್ರೆ ಟೆಕ್ನಿಷಿಯನ್ ಬಂಧನ: ‘ಅಪಘಾತದ ಬಳಿಕ ಸ್ಥಳದಲ್ಲೇ ಕಾರು ಬಿಟ್ಟು ಚಾಲಕ ವರುಣ್ (26) ಪರಾರಿಯಾಗುತ್ತಿದ್ದ. ಸಾರ್ವಜನಿಕರ ಸಹಾಯದಿಂದ ಆತನನ್ನು ಬೆನ್ನಟ್ಟಿ ಬಂಧಿಸಲಾಗಿದೆ. ಅತೀ ವೇಗ ಹಾಗೂ ಅಜಾಗರೂಕತೆ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಜೆ.ಪಿ.ನಗರದ ಆರೋಪಿ ವರುಣ್, ಆಸ್ಪತ್ರೆಯೊಂದರ ಟೆಕ್ನಿಷಿಯನ್. ಆತ ಹಾಗೂ ಸ್ನೇಹಿತ, ಭಾನುವಾರ ಬೆಳಿಗ್ಗೆ 5 ಗಂಟೆಗೆ ಹೊಸಕೋಟೆಗೆ ಹೋಗಿ ಮಣಿ ಹೋಟೆಲ್‌ನಲ್ಲಿ ಬಿರಿಯಾನಿ ತಿಂದಿದ್ದರು. ಅಲ್ಲಿಂದ ನಂದಿಬೆಟ್ಟಕ್ಕೆ ಬೆಳಿಗ್ಗೆ 6 ಗಂಟೆಗೆ ಹೋಗಿದ್ದರು. ಆದರೆ, ಅಲ್ಲಿ ವಾಹನಗಳ ದಟ್ಟಣೆ ಹೆಚ್ಚಿತ್ತು. ಹೀಗಾಗಿ, ಬೆಟ್ಟದ ಮೇಲೆ ಹೋಗದೇ ವಾಪಸು ಬೆಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದರು. ಅದೇ ವೇಳೆಯೇ ಅಪಘಾತ ಆಗಿತ್ತು. ಈ ಬಗ್ಗೆ ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು