ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃಪತುಂಗ ರಸ್ತೆಯಲ್ಲಿ ಸರಣಿ ಅಪಘಾತ- ಅಡ್ಡಾದಿಡ್ಡಿ ಕಾರು ಚಾಲನೆ: ಇಬ್ಬರ ಸಾವು

ಶಾಸಕ ಹಾಲಪ್ಪ ಸ್ಟಿಕ್ಕರ್‌ ಅಂಟಿಸಿದ್ದ ಇನ್ನೋವಾ ಜಪ್ತಿ
Last Updated 7 ಫೆಬ್ರುವರಿ 2023, 4:12 IST
ಅಕ್ಷರ ಗಾತ್ರ

ಬೆಂಗಳೂರು: ನೃಪತುಂಗ ರಸ್ತೆಯಲ್ಲಿ ಚಾಲಕನೊಬ್ಬ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದರಿಂದ ಸರಣಿ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರರಿಬ್ಬರು ಮೃತಪಟ್ಟಿದ್ದಾರೆ.

‘ಎಚ್‌ಬಿಆರ್ ಲೇಔಟ್ ನಿವಾಸಿ ಮಜೀದ್‌ಖಾನ್ (36) ಹಾಗೂ ಕೆ.ಜಿ. ಹಳ್ಳಿ ನಿವಾಸಿ ಅಯ್ಯಪ್ಪ (60) ಮೃತರು. ಅಪಘಾತದಿಂದಾಗಿ ಮೊಹಮ್ಮದ್ ರಿಯಾಜ್, ಮೊಹಮ್ಮದ್ ಸಲೀಂ, ರಿಯಾಜ್ ಪಾಷಾ ಹಾಗೂ ಶೇರ್ ಗಿಲಾನಿ ಎಂಬುವರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಸಂಚಾರ ಪೊಲೀಸರು ಹೇಳಿದರು.

‘ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ರಾಮು ಸುರೇಶ್ ಎಂಬುವವರಿಗೆ ಸೇರಿದ್ದ ಇನ್ನೋವಾ ಕ್ರಿಸ್ಟಾ ಕಾರನ್ನು (ಕೆಎ 50 ಎಂಎ 6600) ಯಲಹಂಕ ನ್ಯೂಟೌನ್‌ ನಿವಾಸಿ ಜಿ. ಮೋಹನ್ (48) ಎಂಬಾತ ಚಲಾಯಿಸುತ್ತಿದ್ದ. ಈತನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ. ಚಾಲಕ ಮೋಹನ್‌ನನ್ನು ಬಂಧಿಸಿ, ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಸಾಗರ ಶಾಸಕ ಎಚ್‌. ಹಾಲಪ್ಪ ಅವರ ಹೆಸರಿನ ಸ್ಟಿಕ್ಕರ್ ಕಾರಿನ ಮೇಲಿತ್ತು. ರಾಮು ಸುರೇಶ್ ಅವರ ಕಾರಿಗೆ ಸ್ಟಿಕ್ಕರ್ ಕೊಟ್ಟವರು ಯಾರು? ಕಾರನ್ನು ಯಾರೆಲ್ಲ ಬಳಸುತ್ತಿದ್ದರು? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಹೇಳಿದರು.

ದಟ್ಟಣೆ ರಸ್ತೆಯಲ್ಲಿ ಅತಿ ವೇಗದ ಚಾಲನೆ: ‘ಕೆ.ಆರ್. ವೃತ್ತದಿಂದ ಕಾರ್ಪೋರೇಷನ್‌ ವೃತ್ತದವರೆಗಿನ ನೃಪತುಂಗ ರಸ್ತೆಯಲ್ಲಿ ನಿತ್ಯವೂ ವಾಹನಗಳ ದಟ್ಟಣೆ ಇರುತ್ತದೆ. ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ರಸ್ತೆಯಲ್ಲಿ ಹೊರಟಿದ್ದ ಚಾಲಕ ಮೋಹನ್, ಅತಿ ವೇಗವಾಗಿ ಇನ್ನೋವಾ ಕಾರು ಚಲಾಯಿಸಿದ್ದ’ ಎಂದು ಪೊಲೀಸರು ಹೇಳಿದರು.

‘ರಸ್ತೆಯಲ್ಲಿ ತೆರಳುತ್ತಿದ್ದ ಎರಡು ಕಾರು (ಟೊಯೊಟಾ ಇಡಿಯೊಸ್ ಹಾಗೂ ಮಾರುತಿ ಆಲ್ಟೊ) ಹಾಗೂ ಮೂರು ದ್ವಿಚಕ್ರ ವಾಹನಗಳಿಗೆ (ಬಜಾಜ್ ಪಲ್ಸರ್ ಹಾಗೂ ಎರಡು ಹೊಂಡಾ ಆಕ್ಟಿವಾ) ಇನ್ನೋವಾ ಕಾರು ಡಿಕ್ಕಿ ಹೊಡೆದಿತ್ತು. ಕಾರಿನಲ್ಲಿದ್ದವರಿಗೂ ಸಣ್ಣಪುಟ್ಟ ಗಾಯವಾಗಿದೆ. ದ್ವಿಚಕ್ರ ವಾಹನದಿಂದ ರಸ್ತೆಗೆ ಬಿದ್ದಿದ್ದ ಮಜೀದ್‌ಖಾನ್ ಮೇಲೆಯೇ ಕಾರಿನ ಚಕ್ರ ಹರಿದಿತ್ತು. ತೀವ್ರ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.’

‘ಇನ್ನೊಂದು ದ್ವಿಚಕ್ರ ವಾಹನದಲ್ಲಿದ್ದ ಅಯ್ಯಪ್ಪ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಯಲ್ಲೇ ಅವರು ಅಸುನೀಗಿದ್ದಾರೆ. ಉಳಿದಂತೆ ನಾಲ್ವರು ತೀವ್ರ ಗಾಯಗೊಂಡಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಮೃತ ಮಜೀದ್ ಖಾನ್, ಆಟೊಮೊಬೈಲ್ ಬಿಡಿಭಾಗಗಳ ಮಾರಾಟಗಾರ. ಅಯ್ಯಪ್ಪ, ಪಾರ್ಕಿಂಗ್ ಜಾಗವೊಂದರ ವ್ಯವಸ್ಥಾಪಕ’ ಎಂದು ಅವರು ಹೇಳಿದರು.

ಅಪಘಾತದಿಂದಾಗಿ ನೃಪತುಂಗ ರಸ್ತೆ, ಕಾರ್ಪೊರೇಷನ್ ವೃತ್ತ, ಶೇಷಾದ್ರಿ ರಸ್ತೆಯಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಗಿತ್ತು. ಮಾರ್ಗ ಬದಲಾವಣೆ ಮಾಡಿ, ಕಬ್ಬನ್ ಪಾರ್ಕ್ ಒಳಗಿನ ರಸ್ತೆ ಮೂಲಕ ವಾಹನಗಳನ್ನು ಮುಂದಕ್ಕೆ ಕಳುಹಿಸಲಾಯಿತು. ಅಪಘಾತ ಸ್ಥಳದಲ್ಲಿದ್ದ ಕಾರುಗಳು ಹಾಗೂ ದ್ವಿಚಕ್ರ ವಾಹನಗಳನ್ನು ಪೊಲೀಸರು ತೆರವುಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT