ಪೀಣ್ಯ ದಾಸರಹಳ್ಳಿ: ‘ಕೆಲವೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಮೋಸ, ವಂಚನೆಯ ದೂರುಗಳು ಬಂದಿವೆ. ಬಡ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ದಬ್ಬಾಳಿಕೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಎಸ್. ಮುನಿರಾಜು ಎಚ್ಚರಿಸಿದರು.
ಸಾರ್ವಜನಿಕರ ದೂರಿನ ಮೇರೆಗೆ ಮಲ್ಲಸಂದ್ರದ ಕೆ.ಎನ್. ಸೋಮೇಶ್ವರ ಮಾಲೀಕತ್ವದ ನ್ಯಾಯಬೆಲೆ ಅಂಗಡಿಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
‘ಈ ಅಂಗಡಿಯಲ್ಲೇ ಖರೀದಿಸಬೇಕು. ಇಲ್ಲದೇ ಇದ್ದರೆ ರೇಷನ್ ಕಾರ್ಡ್ ವಜಾ ಮಾಡಲಾಗುವುದು ಎಂದು ದಬ್ಬಾಳಿಕೆ ಮಾಡುತ್ತಾರೆ. ಎಲ್ಲ ವಸ್ತು ಖರೀದಿಸದೇ ಇದ್ದರೆ ₹ 20 ವಸೂಲಿ ಮಾಡುತ್ತಾರೆ. ತಿಂಗಳಲ್ಲಿ ಎರಡು ದಿನ ಮಾತ್ರ ತೆರೆದು ಉಳಿದ ದಿನ ಆಹಾರ ಧಾನ್ಯ ಖಾಲಿ ಎಂದು ಅಂಗಡಿ ಬಂದ್ ಮಾಡುತ್ತಾರೆ. ಕಳೆದ ತಿಂಗಳು 30 ಕ್ವಿಂಟಲ್ ರಾಗಿಯನ್ನು ಬೇರೆಯವರಿಗೆ ಮಾರಿದ್ದಾರೆ ಎಂಬ ದೂರುಗಳು ಬಂದಿದ್ದವು’ ಎಂದು ಮಾಹಿತಿ ನೀಡಿದರು.
‘ಇಂತಹ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ತೂಕ, ಆಹಾರಧಾನ್ಯ ಪರಿಶೀಲಿಸಿ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.
ಆಹಾರ ನಿರೀಕ್ಷಕ ಮಹಾಂತೇಶ್ ಗೌಡ, ಆಹಾರ ಶಿರಸ್ತೆದಾರ ಎನ್. ರಾಮು, ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕ ಬಿ.ಎಚ್. ಆನಂದ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.