ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿಗೆ ಹೊಸದಾಗಿ ನೇಮಕವಾದವರಿಗೆ ನೇಮಕಾತಿ ಆದೇಶ ಹಸ್ತಾಂತರಿಸಿದ ಸಚಿವ

ಮತ್ತಷ್ಟು ತಾಂತ್ರಿಕ‌ ಸಹಾಯಕ‌ ಸಿಬ್ಬಂದಿ ನೇಮಕಾತಿಗೆ ಕ್ರಮ
Published 17 ಜನವರಿ 2024, 17:47 IST
Last Updated 17 ಜನವರಿ 2024, 17:47 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿಗೆ ಮಾರ್ಚ್ ನಂತರ ಮತ್ತಷ್ಟು ತಾಂತ್ರಿಕ‌ ಸಹಾಯಕ‌ ಸಿಬ್ಬಂದಿಯನ್ನು ನೇಮಕಾತಿ ಮಾಡಲು ಆರ್ಥಿಕ ಇಲಾಖೆಯಿಂದ ಅನುಮತಿ ಪಡೆಯಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಕೆಎಸ್‌ಆರ್‌ಟಿಸಿಗೆ ನೇಮಕವಾದ 264 ತಾಂತ್ರಿಕ ಸಹಾಯಕ ಅಭ್ಯರ್ಥಿಗಳಿಗೆ ಬುಧವಾರ ನೇಮಕಾತಿ ಆದೇಶ ನೀಡಿ ಅವರು ಮಾತನಾಡಿದರು.

ನಿವೃತ್ತಿ ಮತ್ತು ಇತರ ಕಾರಣಗಳಿಂದ 2016 ರಿಂದ ಇಲ್ಲಿಯವರೆಗೆ 13,888 ಹುದ್ದೆ ತೆರವಾಗಿದ್ದು, ಭರ್ತಿ ಮಾಡಿರಲಿಲ್ಲ. ಇದರಿಂದ ಬಸ್ಸುಗಳ ಸಮರ್ಪಕ ಕಾರ್ಯಾಚರಣೆಗೆ ತೊಂದರೆಯುಂಟಾಗುತ್ತಿತ್ತು ಎಂದು ಹೇಳಿದರು.

ನಿಗಮದಲ್ಲಿ ಪ್ರಸ್ತುತ 4,588 ತಾಂತ್ರಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 353 ಮಹಿಳಾ ತಾಂತ್ರಿಕ ಸಿಬ್ಬಂದಿ ಇದ್ದಾರೆ. ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ 726 ತಾಂತ್ರಿಕ ಸಹಾಯಕ ಹುದ್ದೆಗಳ ಪೈಕಿ 300 ಹುದ್ದೆಗಳನ್ನು ಭರ್ತಿ ಮಾಡಲು 2023ರ ಅಕ್ಟೋಬರ್‌ನಲ್ಲಿ ಅನುಮತಿ ನೀಡಿತ್ತು. ಆಯ್ಕೆಯಾದ ಅಭ್ಯರ್ಥಿಗಳನ್ನು ಮೆರಿಟ್‌ ಮತ್ತು ರೋಸ್ಟರ್ ಆಧಾರದಲ್ಲಿ ಅವರೇ ಆಯ್ಕೆ ಮಾಡಿಕೊಂಡ ಘಟಕಗಳಿಗೆ ನಿಯೋಜನೆ ಮಾಡಲಾಗಿದೆ ಎಂದು ವಿವರಿಸಿದರು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಇದೇ ಮೊದಲ ಬಾರಿಗೆ ಗಣಕೀಕೃತ ಕೌನ್ಸೆಲಿಂಗ್ ಮೂಲಕ ನೇರವಾಗಿ ಘಟಕಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಒದಗಿಸಲಾಯಿತು. ಸ್ಥಳ ನಿಯೋಜನೆಯಲ್ಲಿ ಪಾರದರ್ಶಕತೆಯನ್ನು ಅನುಸರಿಸಲಾಗಿದೆ. ತಾಂತ್ರಿಕ ಸಹಾಯಕರ ನೇಮಕಾತಿ ಪ್ರಕ್ರಿಯೆಯನ್ನು 3 ತಿಂಗಳ ಒಳಗೆ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಧಿಸೂಚನೆ ಸಂದರ್ಭದಲ್ಲಿ ನಿಗದಿಪಡಿಸಲಾಗಿದ್ದ 2 ವರ್ಷಗಳ ತರಬೇತಿ ಅವಧಿಯನ್ನು 1 ವರ್ಷಕ್ಕೆ ಇಳಿಕೆ ಮಾಡಲಾಗಿದೆ. ತಿಂಗಳ ತರಬೇತಿ ಭತ್ಯೆಯನ್ನು ₹ 9,100ದಿಂದ ₹ 14,000ಕ್ಕೆ ಏರಿಸಲಾಗಿದೆ ಎಂದರು.

ನಿಗಮವು 2000 ಚಾಲಕ–ನಿರ್ವಾಹಕ ಹುದ್ದೆಯ ನೇಮಕಾತಿಗಾಗಿ ಸದ್ಯದಲ್ಲಿಯೇ ಚಾಲನಾ ಪರೀಕ್ಷೆ ನಡೆಸಲಿದೆ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್, ನಿರ್ದೇಶಕಿ (ಸಿಬ್ಬಂದಿ ಮಾತ್ತು ಜಾಗೃತೆ) ನಂದಿನಿ ದೇವಿ, ನಿಗಮದ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT