ವಿದೇಶದಲ್ಲಿ ಬೇಡಿಕೆಯಿರುವ ಮಾವು ವೃದ್ಧಿಗೆ ಕ್ರಮ

ಬೆಂಗಳೂರು: ‘ವಿದೇಶದಲ್ಲಿ ಬೇಡಿಕೆ ಇರುವ ಹಿಮಾಯತ್ ಸೇರಿದಂತೆ ಅಪರೂಪದ ಮಾವಿನ ತಳಿಗಳ ವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಂಡು, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಇದರಿಂದ ಮಾವು ಬೆಳೆಗಾರರ ಆದಾಯ ದ್ವಿಗುಣವಾಗಲಿದೆ’ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜು ತಿಳಿಸಿದರು.
ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ನಿಗಮದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿ ಮಾತನಾಡಿದರು.
‘ಮಾವು ಬೆಳೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮುಂದಿನ ಬಜೆಟ್ನಲ್ಲಿ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅದಕ್ಕೂ ಮೊದಲು ತಜ್ಞರೊಂದಿಗೆ ಚರ್ಚಿಸಿ, ಕ್ರಿಯಾಯೋಜನೆ ರೂಪಿಸಬೇಕಿದೆ. ಎಲ್ಲ ವಯೋಮಾನದವರೂ ಇಷ್ಟಪಡುವ ಮಾವಿಗೆ ಸ್ಥಳೀಯ ಹಾಗೂ ವಿದೇಶಿ ಮಾರುಕಟ್ಟೆಯಿದೆ. ಯುರೋಪ್ ಖಂಡದ ರಾಷ್ಟ್ರಗಳು, ಚೀನಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ 20ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಇಲ್ಲಿನ ಮಾವಿಗೆ ಬೇಡಿಕೆಯಿದೆ. ಸಾಂಪ್ರದಾಯಿಕ ತಳಿಗಳ ಜತೆಗೆ ಹೊಸ ತಳಿಯ ಮಾವನ್ನೂ ರೈತರಿಗೆ ಪರಿಚಯಿಸಬೇಕಿದೆ’ ಎಂದರು.
‘ಅಕಾಲಿಕ ಮಳೆ, ರೋಗ, ಮಾರುಕಟ್ಟೆ ಸಮಸ್ಯೆ ಸೇರಿದಂತೆ ವಿವಿಧ ಕಾರಣದಿಂದ ಕೆಲವು ಸಂದರ್ಭದಲ್ಲಿ ರೈತರಿಗೆ ನಿರೀಕ್ಷಿತ ಮಟ್ಟದ ಆದಾಯ ದೊರೆಯುತ್ತಿಲ್ಲ. ಹೀಗಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಲು ಅಧ್ಯಯನ ನಡೆಸಬೇಕಿದೆ. ಮಾವು ಬೆಳೆಯುವ ಪ್ರದೇಶವನ್ನೂ ವಿಸ್ತರಿಸಿ, ರೈತರಿಗೆ ತಾಂತ್ರಿಕ ಸಲಹೆಗಳನ್ನು ಒದಗಿಸುವ
ಕೆಲಸವಾಗಬೇಕಿದೆ’ ಎಂದರು.
ರೋಗ ನಿವಾರಣೆಗೆ ಅಧ್ಯಯನ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ‘ರಾಜ್ಯದ 16 ಜಿಲ್ಲೆಗಳಲ್ಲಿ 1.67 ಲಕ್ಷ ಹೆಕ್ಟೇರ್ಗಳಲ್ಲಿ ಮಾವನ್ನು ಬೆಳೆಯಲಾಗುತ್ತಿದೆ. ವಿದೇಶಗಳಲ್ಲಿ ಮಾವಿಗೆ ಬೇಡಿಕೆ ಹೆಚ್ಚುತ್ತಿದ್ದು, ಇದನ್ನು ಇನ್ನಷ್ಟು ರೈತರು ಬೆಳೆಯಬೇಕಿದೆ. ಮಾವಿಗೆ ಬರುವ ರೋಗಗಳನ್ನು ನಿವಾರಣೆ ಮಾಡುವ ಸಂಬಂಧ ಸಂಶೋಧನಾ ಸಂಸ್ಥೆಗಳ ಜತೆಗೆ ನಿಗಮ ಒಪ್ಪಂದ ಮಾಡಿಕೊಂಡು, ಅಧ್ಯಯನ ನಡೆಸಬೇಕು’ ಎಂದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.