ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹2.98 ಲಕ್ಷ ಬಾಡಿಗೆ ಬಾಕಿ: ನಿರ್ದೇಶಕ ರಾಜೇಂದ್ರಸಿಂಗ್ ಬಾಬು ವಿರುದ್ಧ ದೂರು

ನಟ ಆದಿತ್ಯ ವಿರುದ್ಧ ಕೋರ್ಟ್‌ನಲ್ಲಿ ಮೊಕದ್ದಮೆ
Last Updated 10 ಮೇ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮನೆ ಬಾಡಿಗೆ ಕೇಳಿದ್ದಕ್ಕಾಗಿ ನಟ ಆದಿತ್ಯ ಅವರ ತಂದೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಮನೆಯ ಮಾಲೀಕ ಜಿ.ಆರ್.ಪ್ರಸನ್ನ ಎಂಬುವರು ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.

‘ನಟ ಆದಿತ್ಯ ಹಾಗೂ ಪ್ರಸನ್ನ ನಡುವೆ ಬಾಡಿಗೆ ವಿಚಾರವಾಗಿ ವ್ಯಾಜ್ಯವಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅದರ ಮಧ್ಯೆಯೇ ಈ ಗಲಾಟೆ ನಡೆದಿದೆ. ಪ್ರಸನ್ನ ಅವರ ದೂರು ಆಧರಿಸಿ ಎನ್‌ಸಿಆರ್‌ (ಗಂಭೀರವಲ್ಲದ ಅಪರಾಧ) ಮಾಡಿಕೊಳ್ಳಲಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸದಾಶಿವನಗರ ಪೊಲೀಸರು ಹೇಳಿದರು.

ಪ್ರಕರಣದ ವಿವರ: ‘ಆರ್‌ಎಂವಿ 2ನೇ ಹಂತದಲ್ಲಿರುವ ಪ್ರಸನ್ನ ಅವರ ಮನೆಯ ಮೊದಲ ಮಹಡಿಯನ್ನು2014ರ ಅಕ್ಟೋಬರ್‌ನಿಂದ ಆರ್‌.ದುಶ್ಯಂತಸಿಂಗ್ ಉರುಫ್ ಆದಿತ್ಯ ಅವರಿಗೆ ಬಾಡಿಗೆಗೆ ಕೊಡಲಾಗಿತ್ತು. ಪ್ರತಿ ತಿಂಗಳು ₹40 ಸಾವಿರ ಬಾಡಿಗೆ ಹಾಗೂ ಪ್ರತಿವರ್ಷ ಶೇ5ರಷ್ಟು ಬಾಡಿಗೆ ಹೆಚ್ಚಳ ಮಾಡುವ ಷರತ್ತು ವಿಧಿಸಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಸದ್ಯ ತಿಂಗಳಿಗೆ ₹48,300 ಬಾಡಿಗೆ ಇತ್ತು’ ಎಂದು ಪೊಲೀಸರು ಮಾಹಿತಿ ನೀಡಿದರು.

‘2018ರ ಆಗಸ್ಟ್‌ನಲ್ಲಿ ಮನೆ ಖಾಲಿ ಮಾಡುವಂತೆ ಆದಿತ್ಯ ಅವರಿಗೆ ವಕೀಲರ ಮೂಲಕ ಮಾಲೀಕರು ನೋಟಿಸ್ ನೀಡಿದ್ದರು. ಒಂದು ತಿಂಗಳ ಕಾಲಾವಕಾಶ ಕೋರಿದ್ದ ನಟ, ಅದಾದ ನಂತರವೂ ಮನೆ ಖಾಲಿ ಮಾಡಿರಲಿಲ್ಲ. ಇದುವರೆಗೂ ಅವರು ₹ 2.98 ಲಕ್ಷ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಅದರಿಂದ ನೊಂದ ಪ್ರಸನ್ನ, ನಗರದ ಪ್ರಧಾನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಆದಿತ್ಯ ವಿರುದ್ಧ 2018ರಲ್ಲೇ ಮೊಕದ್ದಮೆ ಹೂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಮನೆಯ ನೆಲ ಮಹಡಿಯಲ್ಲಿ ಪ್ರಸನ್ನ ಅವರು ವಾಸವಿದ್ದಾರೆ. ‘ಮನೆಯಲ್ಲಿ ನೀರು ಬರುತ್ತಿಲ್ಲ’ ಎಂದು ಹೇಳಿಕೊಂಡು ಮೇ 1ರಂದು ಮಾಲೀಕರ ಮನೆಗೆ ರಾಜೇಂದ್ರ ಸಿಂಗ್‌ ಹೋಗಿದ್ದರು. ಅದೇ ವೇಳೆ ಈ ಗಲಾಟೆ ನಡೆದಿತ್ತು. ಮೇ 3ರಂದು ಠಾಣೆಗೆ ಬಂದು ಮಾಲೀಕರು ದೂರು ನೀಡಿದ್ದಾರೆ’ ಎಂದು ತಿಳಿಸಿದರು.

‘ಪ್ರಸನ್ನ ಅವರ ವಿರುದ್ಧವೂ ರಾಜೇಂದ್ರ ಸಿಂಗ್ ಬಾಬು ಈ ಹಿಂದೆ ದೂರು ನೀಡಿದ್ದಾರೆ. ಅದರ ತನಿಖೆಯೂ ಪ್ರಗತಿಯಲ್ಲಿದೆ’ ಎಂದರು.

‘ಸುಳ್ಳು ಆರೋಪ’

‘ನಮ್ಮ ಮೇಲೆ ಸುಖಾಸುಮ್ಮನೆ ಆರೋಪ ಹೊರಿಸಿ ಮನೆ ಮಾಲೀಕರು ದೂರು ನೀಡಿದ್ದಾರೆ’ ಎಂದು ರಾಜೇಂದ್ರ ಸಿಂಗ್ ಬಾಬು ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬಾಡಿಗೆ ವಿಚಾರವಾಗಿ ಪ್ರಸನ್ನ ಅವರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT