ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಗರಿ ಬಿಚ್ಚಿದ ಏರ್‌ ಶೋ ಸ್ಥಳಾಂತರ ವದಂತಿ

Last Updated 24 ಫೆಬ್ರುವರಿ 2019, 19:43 IST
ಅಕ್ಷರ ಗಾತ್ರ

ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 12ನೇ ಆವೃತ್ತಿ ಕೊನೆಗೊಳ್ಳುತ್ತಿದ್ದಂತೆಯೇ ಈ ದ್ವೈವಾರ್ಷಿಕ ಮೇಳ ಸ್ಥಳಾಂತರಗೊಳ್ಳುತ್ತದೆ ಎಂಬ ವದಂತಿ ಮತ್ತೆ ಗರಿಬಿಚ್ಚಿದೆ.

‘ಈ ಮೇಳದ 11 ಆವೃತ್ತಿಗಳಿಗೂ ಯಲಹಂಕವೇ ನಲೆ ಒದಗಿಸಿತ್ತು. 12ನೇ ಆವೃತ್ತಿ ಉತ್ತರ ಪ್ರದೇಶದ ಲಖನೌಗೆ ಸ್ಥಳಾಂತರಗೊಳ್ಳುತ್ತದೆ ಎಂಬ ವದಂತಿ ಕಳೆದ ವರ್ಷ ಆಗಸ್ಟ್‌ನಲ್ಲಿ ಹಬ್ಬಿತ್ತು. ಮತ್ತೊಂದೆಡೆ, ಮುಂದಿನ ಏರ್ ಶೋ ಗೋವಾದಲ್ಲಿ ನಡೆಯಲಿದೆ ಎಂಬ ಗಾಳಿ ಸುದ್ದಿಯೂ ಹರಡಿತ್ತು. ಸರ್ಕಾರದ ಉನ್ನತ ಮೂಲಗಳೂ ಆ ಬಗ್ಗೆ ಸುಳಿವು ನೀಡಿದ್ದವು.

ಸ್ಥಳಾಂತರಕ್ಕೆ ರಾಜ್ಯದ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿಯೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಸಮಾಧಾನ ತೋಡಿಕೊಮಡಿದ್ದರು. ಹೆಚ್ಚೇಕೆ, ವಾಯುಪಡೆ ಹಾಗೂ ವಿಮಾನಯಾನ ಕ್ಷೇತ್ರದ ತಜ್ಞರೂ ಬೆಂಗಳೂರಿನಿಂದ ಪ್ರದರ್ಶನ ಸ್ಥಳಾಂತರಿಸುವುದು ಸೂಕ್ತವಲ್ಲ ಎಂದಿದ್ದರು. ಬಳಿಕವಷ್ಟೇ ಈ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿತ್ತು.

ಮತ್ತೆ ಊಹಾಪೋಹ: ಈ ಬಾರಿಯೂ ವೈಮಾನಿಕ ಪ್ರದರ್ಶನದ ಕೊನೆಯ ಎರಡು ದಿನ ಈ ಮೇಳ ಬೇರೆ ರಾಜ್ಯಕ್ಕೆ ಸ್ಥಳಾಂತರವಾಗುವ ಗುಸು ಗುಸು ಚರ್ಚೆ ನಡೆದಿದೆ.ವೈಮಾನಿಕ ಪ್ರದರ್ಶನದ ವೇಳೆ ಸಂಭವಿಸಿದ ಸರಣಿ ಅವಘಡಗಳನ್ನೇ ಮುಂದಿಟ್ಟುಕೊಂಡು ಮುಂದಿನ ಆವೃತ್ತಿಯನ್ನು ಸ್ಥಳಾಂತರಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಇದನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅಲ್ಲಗಳೆದಿದ್ದಾರೆ.

ರಾಜಕೀಯ ಕೆಸರೆರಚಾಟ: ಬೆಂಕಿ ಅವಘಡಕ್ಕೆ ಸಂಬಂಧಿಸಿ ರಾಜಕೀಯ ಆರೋಪ, ಪ್ರತ್ಯಾರೋಪಗಳೂ ಶುರುವಾಗಿವೆ. ’ಬೆಂಕಿ ದುರಂತವನ್ನು ಅಸ್ತ್ರವನ್ನಾಗಿಸಿಕೊಂಡು ಏರೋ ಶೋ ಸ್ಥಳಾಂತರಕ್ಕೆ ಬಿಜೆಪಿ ಹವಣಿಸುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಆರೋಪಿಸಿದ್ದಾರೆ. ‘ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು’ ಎಂದೂ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ, ‘ಘಟನೆಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ. ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು’ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಕರಾಳ ನೆನಪುಗಳು

ಮಿರಾಜ್ ಅಪಘಾತ: ವೈಮಾನಿಕ ಪ್ರದರ್ಶಕ್ಕೆ ಸಿದ್ಧತೆ ನಡೆಸುತ್ತಿದ್ದ ‘ಮಿರಾಜ್-2000’ ಯುದ್ಧವಿಮಾನ ಪತನದಿಂದಾಗಿ ಪೈಲಟ್‌ಗಳಾದ ಸಿದ್ಧಾರ್ಥ್‌ ನೇಗಿ ಹಾಗೂ ಸಮೀರ್ ಅಬ್ರಾಲ್ ಮೃತಪಟ್ಟರು

ಸೂರ್ಯಕಿರಣ ಡಿಕ್ಕಿ: ತಾಲೀಮಿನ ಸಂದರ್ಭ ಸೂರ್ಯಕಿರಣ ವಿಮಾನಗಳು ಪರಸ್ಪರ ಡಿಕ್ಕಿಯಾಗಿ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಮೃತಪಟ್ಟರು. ಇನ್ನಿಬ್ಬರು ಪೈಲಟ್‍ಗಳು ಗಾಯಗೊಂಡರು.

300 ಕಾರು ದಹನ: ವೈಮಾನಿಕ ಪ್ರದರ್ಶದ ನಾಲ್ಕನೇ ದಿನವಾದ ಶನಿವಾರ ವಾಹನ ನಿಲುಗಡೆ ಪ್ರದಶೇದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ ಸುಮಾರು 300 ಕಾರುಗಳು ದಹನವಾದವು.

***

ವೈಮಾನಿಕ ಪ್ರದರ್ಶನ ಕಾಯಂ ಆಗಿ ಬೆಂಗಳೂರಿನಲ್ಲೇ ನಡೆಯಬೇಕು ಎಂಬುದು ನಮ್ಮ ಬಯಕೆ. ಮುಂದಿನ ಪ್ರದರ್ಶನವೂ ಬೆಂಗಳೂರಿನಲ್ಲೇ ನಡೆಯುವ ನಿರೀಕ್ಷೆ ಇದೆ.

– ಟಿ.ಎಂ. ವಿಜಯ ಭಾಸ್ಕರ್‌, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT