ಬುಧವಾರ, ಸೆಪ್ಟೆಂಬರ್ 18, 2019
°C

ಕೋರ್ಟ್ ತೀರ್ಪಿನ ನಂತರ ಬಿಜೆಪಿ ಸೇರ್ಪಡೆ?: ಅನರ್ಹ ಶಾಸಕ ಪ್ರತಾಪ್‌ಗೌಡ ಪಾಟೀಲ

Published:
Updated:

ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಬಿಜೆಪಿ ಸೇರುವ ಬಗ್ಗೆ ಅನರ್ಹ ಶಾಸಕರೆಲ್ಲ ಒಟ್ಟಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ್‌ಗೌಡ ಪಾಟೀಲ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭಾನುವಾರ ಭೇಟಿಯಾಗಿ ಚರ್ಚಿಸಿದ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಹಿಂದಿನ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ನಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಆದರೆ ಕೋರ್ಟ್‌ನಲ್ಲಿ ತೀರ್ಪು ನಮ್ಮ ಪರವಾಗಿ ಬರಲಿದೆ. ನಂತರ ಬಿಜೆಪಿ ಬಿಜೆಪಿ ಸೇರುವ ಬಗ್ಗೆ ನಿರ್ಧರಿಸಲಾಗುವುದು. ಈಗ ಪಕ್ಷ ಸೇರುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಬಿಜೆಪಿ ಸೇರಲು ಪ್ರತಾಪಗೌಡರಿಂದ ಕಾದು ನೋಡುವ ತಂತ್ರ

‘ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಕುಟುಂಬದವರನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನಾನೇ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಅನರ್ಹರಾದರೆ ಸ್ಪರ್ಧಿಸಬಾರದು ಎಂಬ ನಿಯಮವಿಲ್ಲ’ ಎಂದು ಹೇಳಿದರು.

‘ಮುಖ್ಯಮಂತ್ರಿ ಜತೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ. ರಾಜಕೀಯ ಚರ್ಚೆ ಮಾಡಿಲ್ಲ’ ಎಂದಿದ್ದಾರೆ. 

ಸಚಿವ ಸಂಪುಟ ರಚನೆಗೆ ಬಿಜೆಪಿ ಕೇಂದ್ರ ನಾಯಕರು ಒಪ್ಪಿಗೆ ನೀಡಿದ ನಂತರ ಬಿಜೆಪಿ ವಲದಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಅನರ್ಹ ಶಾಸಕರು ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಚಿವ ಸ್ಥಾನದ ಬಗ್ಗೆ ಚರ್ಚಿಸುತ್ತಿದ್ದಾರೆ.

‘ಈಗ ಶಾಸಕ ಸ್ಥಾನದಿಂದ ಅನರ್ಹಗೊಂಡಿರುವುದರಿಂದ ಮೊದಲ ಸುತ್ತಿನಲ್ಲಿ ಸಚಿವರನ್ನಾಗಿ ಮಾಡುವುದು ತಪ್ಪಾಗುತ್ತದೆ. ಮೊದಲ ಹಂತದಲ್ಲಿ ಕೆಲವು ಸಚಿವ ಸ್ಥಾನಗಳನ್ನು ಮಾತ್ರ ಭರ್ತಿ ಮಾಡುತ್ತಿದ್ದು, ಕೆಲವು ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಾಗುತ್ತದೆ. ಅನರ್ಹತೆ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದ್ದು, ತೀರ್ಪು ಬಂದ ನಂತರ ನಿಮಗೂ ಅವಕಾಶ ನೀಡಲಾಗುತ್ತದೆ’ ಎಂದು ತಮ್ಮ ಭೇಟಿ ಮಾಡುತ್ತಿರುವ ಅನರ್ಹ ಶಾಸಕರಿಗೆ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Post Comments (+)