ಶುಕ್ರವಾರ, ಜೂನ್ 5, 2020
27 °C
ಲಾಕ್‌ಡೌನ್‌: ಗಾಳಿ ಗುಣಮಟ್ಟದ ಸೂಚ್ಯಂಕ ಮಾಹಿತಿ

ಲಾಕ್‌ಡೌನ್‌ ಪರಿಣಾಮ: ಬೆಂಗಳೂರಿನಲ್ಲಿ ತಗ್ಗಿತು ವಾಯುಮಾಲಿನ್ಯ

ಹರವು ಸ್ಫೂರ್ತಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌–19 ನಿಯಂತ್ರಣಕ್ಕಾಗಿ ಸರ್ಕಾರ ಘೋಷಿಸಿರುವ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರ ವಿರಳವಾಗಿದೆ. ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳು ಬಂದ್‌ ಆಗಿವೆ. ಇದರಿಂದಾಗಿ 34ರಷ್ಟು (ಸೂಚ್ಯಂಕ) ವಾಯುಮಾಲಿನ್ಯವೂ ತಗ್ಗಿದೆ.

ಲಾಕ್‌ಡೌನ್‌ ನಂತರ ಮಾರ್ಚ್‌ 24 ರಿಂದ ಏಪ್ರಿಲ್ 17ರವೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅಂತರ್ಜಾಲ ಸತತ ವಾಯುಮಾಲಿನ್ಯ ನಿರ್ವಹಣಾ ಕೇಂದ್ರಗಳು ಆಯಾ ಪ್ರದೇಶದಲ್ಲಿನ ಗಾಳಿಯ ಗುಣಮಟ್ಟವನ್ನು ದಾಖಲು ಮಾಡಿವೆ. ಆ ಪ್ರಕಾರ ನಗರದಲ್ಲಿ ಒಟ್ಟಾರೆ 34ರಷ್ಟು(ಸೂಚ್ಯಂಕ) ವಾಯುಮಾಲಿನ್ಯ ತಗ್ಗಿದೆ.

‘ಬಸ್‌ ಸಂಚಾರ ಸೇರಿದಂತೆ ಸಮೂಹ ಸಾರಿಗೆ, ಖಾಸಗಿ ವಾಹನಗಳ ಓಡಾಟ ವಿರಳಗೊಂಡಿರುವುದೇ ನಗರದ ಗಾಳಿ ಗುಣಮಟ್ಟ ಉತ್ತಮವಾಗಲು ಮುಖ್ಯ ಕಾರಣ’ ಎಂದು ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಬಸವರಾಜ್‌ ಪಾಟೀಲ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ನಗರದ ವಾಯುಗುಣಮಟ್ಟ ಸೂಚ್ಯಂಕದ ಪ್ರಕಾರ ನಗರದಗಾಳಿಯಲ್ಲಿ ಕಾರ್ಬನ್ ಡೈ ಆಕ್ಸೈಡ್, ಸಲ್ಫರ್‌, ನೈಟ್ರೋಜನ್  ಪ್ರಮಾಣ ಕಡಿಮೆಯಾಗಿದೆ. ಕೊರೊನಾ ಸೋಂಕು ಹರಡುತ್ತಿರುವ ಈ ಹೊತ್ತಿನಲ್ಲಿ ಲಾಕ್‌ಡೌನ್‌ನಿಂದಾಗಿ ಸ್ವಲ್ಪವಾದರೂ ಶುದ್ಧವಾದ ಗಾಳಿ ಸೇವಿಸುವ ಭಾಗ್ಯ ನಮ್ಮದಾಗಿದೆ. ವಾಯು ಗುಣಮಟ್ಟದ ಸೂಚ್ಯಂಕ ಒಟ್ಟು ಎಂಟು ಅಂಶಗಳನ್ನು (PM10, PM2.5, NO2, SO2, CO, O3, NH3, ಮತ್ತು Pb) ಅಳೆದು ನಿರ್ಧರಿಸಲಾಗುತ್ತದೆ. ಇವನ್ನು 24 ಗಂಟೆಗಳ ಕಾಲ ಅಳತೆ ಮಾಡಿ, ಸರಾಸರಿ ಮೌಲ್ಯವನ್ನು ತೆಗೆದುಕೊಂಡು ಸೂಚ್ಯಂಕ ನಿರ್ಧರಿಸಲ್ಪಡುತ್ತದೆ.

ವಾಯು ಗುಣಮಟ್ಟದ ಸೂಚ್ಯಂಕ ಮಾಹಿತಿ ಪ್ರಕಾರ ನಗರದ ಅತಿ ಹೆಚ್ಚು ಟ್ರಾಫಿಕ್‌ ಪ್ರದೇಶವಾದ ಸಿಲ್ಕ್‌ಬೋರ್ಡ್‌ನಲ್ಲಿ ಈ ಹಿಂದೆ ವಾಯು ಗುಣಮಟ್ಟ 93 ರಷ್ಟಿತ್ತು. ಈಗ ವಾಯು ಗುಣಮಟ್ಟ 50ರಷ್ಟು ಆಗಿದೆ. ಒಟ್ಟಾರೆ ಈ ಪ್ರದೇಶದಲ್ಲಿ ಶೇಕಡ 46.23ರಷ್ಟು ಮಾಲಿನ್ಯ ಕಡಿಮೆಯಾಗಿದೆ.

‘ಲಾಕ್‌ಡೌನ್ ಅವಧಿ ಮುಗಿದ ಬಳಿಕ ಯಥಾಪ್ರಕಾರ ನಗರದಲ್ಲಿ ಮಾಲಿನ್ಯ ಹೆಚ್ಚಾಗುತ್ತದೆ. ಶುದ್ಧ ಇಂಧನ ಬಳಕೆ, ಗ್ರೀನ್ ಬೆಲ್ಟ್‌ ಪ್ರದೇಶ ಹೆಚ್ಚಳ, ಕಾರ್ಖಾನೆ ತ್ಯಾಜ್ಯ, ಕಟ್ಟಡ ನಿರ್ಮಾಣ ಹಾಗೂ ನೆಲಸಮದ ಹಂತದಲ್ಲಿ ಬರುವ ದೂಳು ಗಾಳಿಗೆ ಸೇರುತ್ತಿರುವುದು, ತ್ಯಾಜ್ಯಗಳಿಗೆ ಬೆಂಕಿ ಹಾಕಿದಾಗ ಉತ್ಪತ್ತಿಯಾಗುವ ಕಾರ್ಬನ್ ಹಾಗೂ ತ್ಯಾಜ್ಯಗಳ ವಿಲೇವಾರಿ ವೈಜ್ಞಾನಿಕವಾಗಿ ನಡೆದರೆ ಮತ್ತಷ್ಟು ಮಾಲಿನ್ಯವನ್ನು ತಡೆಯಬಹುದು. ಪರಿಸರ ಸಂರಕ್ಷಣೆಯ ಅಗತ್ಯ ಈ ಅವಧಿಯಲ್ಲಾದರೂ ಮನರಿಕೆಯಾಗಬೇಕು’ ಎನ್ನುತ್ತಾರೆ ಬಸವರಾಜ್‌ ಪಾಟೀಲ.

‘ಧೂಮಪಾನಿಗಳ ಶ್ವಾಸಕೋಶ ಹೇಗಿರುತ್ತದೋ ಹಾಗೆಯೇ ಸಂಚಾರ ದಟ್ಟಣೆಯಲ್ಲಿ ಓಡಾಡುವವರ ಶ್ವಾಸಕೋಶದ ಸ್ಥಿತಿಯೂ ಇರುತ್ತದೆ. ವಾಯುಮಾಲಿನ್ಯ ತಂಬಾಕಿನಷ್ಟೇ ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಇಂಥ ‘ಮಾಲಿನ್ಯಕಾರಕ’ ಚಟುವಟಿಕೆಗಳಿಂದ ಶ್ವಾಸಕೋಶ ದುರ್ಬಲವಾಗಲಿದ್ದು, ಕೊರೊನಾದಂಥ ಸೋಂಕುಗಳಿಗೆ, ಹೃದ್ರೋಗದಂತಹ ತೊಂದರೆಗಳಿಗೆ ಸಿಲುಕುತ್ತಾರೆ. ಈಗಿರುವ ಶುದ್ಧವಾದ ಗಾಳಿ ಗುಣಮಟ್ಟವನ್ನು ಕಾಯ್ದುಕೊಂಡರೆ ನಮ್ಮ ಆರೋಗ್ಯವೂ ಉತ್ತಮ ಸ್ಥಿತಿಯಲ್ಲಿ ಇರುತ್ತದೆ’ ಎನ್ನುತ್ತಾರೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್.

ಹಕ್ಕಿಗಳಿಗೆ ನೆಮ್ಮದಿ

‘ಜನರ ಸಂಚಾರ, ಶಬ್ದ ಹಾಗೂ ಪರಿಸರ ಮಾಲಿನ್ಯ ಕಡಿಮೆಯಾಗುತ್ತಿರುವುದರಿಂದ ಹಕ್ಕಿಗಳು ನೆಮ್ಮದಿಯಲ್ಲಿವೆ. ಇದು ಹಕ್ಕಿಗಳ ಸಂತಾನೋತ್ಪತ್ತಿ ಸಮಯ. ಈ ಸಮಯದಲ್ಲಿ ಗೂಡುಕಟ್ಟುತ್ತವೆ. ಪ್ರಕೃತಿ ಅದರ ಕೆಲಸ ಅದು ಮಾಡಿಕೊಳ್ಳುತ್ತದೆ. ನಾವು ಹೆಚ್ಚಿನದ್ದು ಏನು ಮಾಡುವ ಅಗತ್ಯವಿಲ್ಲ. ಬೇಸಿಗೆ ಸಮಯವಾದ್ದರಿಂದ ತಮ್ಮ ಮನೆಗಳ ಮೇಲೆ ಅಥವಾ ಮನೆ ಉದ್ಯಾನದಲ್ಲಿ ಪಕ್ಷಿಗಳಿಗಾಗಿ ಬಟ್ಟಲು ನೀರಿಟ್ಟರೆ ಸಾಕು’ ಎನ್ನುತ್ತಾರೆ ಪಕ್ಷಿವೀಕ್ಷಕ, ಡಾ. ಎಸ್. ಸುಬ್ರಹ್ಮಣ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು