ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ ಮೆಟ್ರೊ: ಹಳಿ ಜೋಡಣೆಗೆ ಟೆಂಡರ್

₹500 ಕೋಟಿ ಮೊತ್ತದ ಕಾಮಗಾರಿ: ಸಿವಿಲ್ ಕಾಮಗಾರಿ ಚುರುಕು
Last Updated 29 ಸೆಪ್ಟೆಂಬರ್ 2022, 20:47 IST
ಅಕ್ಷರ ಗಾತ್ರ

ಬೆಂಗಳೂರು: ವಿಮಾನ ನಿಲ್ದಾಣ ಮೆಟ್ರೊ ರೈಲು ಮಾರ್ಗದ ಸಿವಿಲ್ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಈಗ ಹಳಿ ಜೋಡಣೆ ಕಾಮಗಾರಿಗೆ ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್‌) ಟೆಂಡರ್ ಆಹ್ವಾನಿಸಿದೆ.

ಸಿಲ್ಕ್‌ಬೋರ್ಡ್‌ನಿಂದ ಹೊರ ವರ್ತುಲ ರಸ್ತೆ, ಕೆ.ಆರ್‌.ಪುರ, ಹೆಬ್ಬಾಳ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ತನಕದ ಮಾರ್ಗವನ್ನು ಎರಡು ಭಾಗವಾಗಿ ವಿಂಗಡಿಸಿ ಟೆಂಡರ್ ಸಿದ್ಧಪಡಿಸಲಾಗಿದೆ.

ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‌.ಪುರದ ತನಕ(ಎರಡನೇ ಹಂತ–2ಎ) 18.23 ಕಿಲೋ ಮೀಟರ್‌ ಮಾರ್ಗ ಮತ್ತು ಕೆ.ಆರ್.ಪುರದಿಂದ ಕೆಂಪಾಪುರ ತನಕ(ಎರಡನೇ ಹಂತ–2ಬಿ) 10.20 ಕಿಲೋ ಮಿಟರ್‌ ಮಾರ್ಗಕ್ಕೆ ಹಳಿ ವಿನ್ಯಾಸ ಮತ್ತು ಜೋಡಣೆಗೆ ₹267.48 ಕೋಟಿ ಅಂದಾಜಿಸಲಾಗಿದೆ.

ಕೆಂಪಾಪುರ ಮೆಟ್ರೊ ನಿಲ್ದಾಣದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ(ಎರಡನೇ ಹಂತ–2ಬಿ) ಮಾರ್ಗದಲ್ಲಿ ಹಳಿ ವಿನ್ಯಾಸ ಮತ್ತು ಜೋಡಣೆಗೆ ₹232.68 ಕೋಟಿ ಅಂದಾಜಿಸಲಾಗಿದೆ. ಅಕ್ಟೋಬರ್ 14ರ ತನಕ ಟೆಂಡರ್ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅ.15ರಂದು ಟೆಂಡರ್ ತೆರೆದು ಗುತ್ತಿಗೆ ನಿಗದಿಪಡಿಸಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಕೆ.ಆರ್‌.ಪುರ–ಹೆಬ್ಬಾಳ–ವಿಮಾನ ನಿಲ್ದಾಣ ತನಕದ 36.44 ಕಿಲೋಮೀಟರ್ ಉದ್ದ ಇರುವ ಮಾರ್ಗದ (2ಬಿ) ಸಿವಿಲ್ ಕಾಮಗಾರಿಯನ್ನು ಮೂರು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಮೂರು ಪ್ಯಾಕೇಜ್‌ಗಳ ಗುತ್ತಿಗೆಯನ್ನು ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿ (ಎನ್‌ಸಿಸಿ) ಪಡೆದುಕೊಂಡಿದೆ.

ಸಿಲ್ಕ್‌ ಬೋರ್ಡ್‌ನಿಂದ ಕಾಡುಬೀಸನಹಳ್ಳಿಯವರೆಗಿನ (10 ಕಿ.ಮೀ) ಮೊದಲ ಪ್ಯಾಕೇಜ್‌ನ ನಿರ್ಮಾಣ ಗುತ್ತಿಗೆಯನ್ನು ಆಫ್ಕಾನ್ಸ್‌ ಸಂಸ್ಥೆ ಪಡೆದಿದ್ದರೆ, ಕಾಡುಬೀಸನಹಳ್ಳಿಯಿಂದ ಬೈಯಪ್ಪನಹಳ್ಳಿಯವರೆಗಿನ (9.75 ಕಿ.ಮೀ) ಎರಡನೇ ಪ್ಯಾಕೇಜ್‌ನ ಗುತ್ತಿಗೆಯನ್ನು ಶಂಕರನಾರಾಯಣ ಕನ್‌ಸ್ಟ್ರಕ್ಷನ್‌ ಪಡೆದಿದೆ.

ಸಿಲ್ಕ್ ಬೋರ್ಡ್‌ನಿಂದ ವಿಮಾನ ನಿಲ್ದಾಣದ ತನಕದ ಮಾರ್ಗಕ್ಕೆ ₹14,788 ಕೋಟಿ ಮೊತ್ತಕ್ಕೆ ಕೇಂದ್ರ ಸಚಿವ ಸಂಪುಟ 2021ರ ಏಪ್ರಿಲ್‌ನಲ್ಲಿ ಅನುಮೋದನೆ ನೀಡಿತ್ತು. ಒಟ್ಟಾರೆ ಐದು ಪ್ಯಾಕೇಜ್‌ನಲ್ಲಿ ಕಾಮಗಾರಿ ಭರದಿಂದ ಸಾಗಿದೆ. 2025ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಬಿಎಂಆರ್‌ಸಿಎಲ್ ಸಮಯ ನಿಗದಿ ಮಾಡಿದೆ. ಕಾಮಗಾರಿ ನಡೆಯುತ್ತಿರುವ ವೇಗ ಗಮನಿಸಿದರೆ ನಿಗದಿತ ಅವಧಿಯೊಳಗೇ ಮೆಟ್ರೊ ರೈಲುಗಳು ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT