ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಮಂಗಲ: ಜಮೀನು ಹದ್ದುಬಸ್ತಿಗೆ ರೈತರ ಪರದಾಟ

ಭೂಮಾಪಕರಿಂದ ರೈತರಿಗೆ ನಿಂದನೆ ಆರೋಪ, ಕ್ರಮಕ್ಕೆ ಒತ್ತಾಯ
Published 24 ಜುಲೈ 2023, 22:11 IST
Last Updated 24 ಜುಲೈ 2023, 22:11 IST
ಅಕ್ಷರ ಗಾತ್ರ

ಬೆಂಗಳೂರು: ‘ನೆಲಮಂಗಲ ತಾಲ್ಲೂಕಿನಲ್ಲಿ ಕೃಷಿ ಜಮೀನಿನ ಹದ್ದುಬಸ್ತಿಗೆ ಅರ್ಜಿ ಸಲ್ಲಿಸಿದರೆ ಭೂಮಾಪನ ಇಲಾಖೆ ಅಧಿಕಾರಿಗಳು ಸಕಾರಣ ನೀಡದೇ ಅರ್ಜಿಗಳನ್ನು ಮುಕ್ತಾಯಗೊಳಿಸುತ್ತಿದ್ದಾರೆ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ನೂರಾರು ಮಂದಿಗೆ ಸಮಸ್ಯೆ ಎದುರಾಗಿದೆ ಎಂದು ಕೃಷಿಕರು ಹೇಳಿದ್ದಾರೆ.

‘ತಾಲ್ಲೂಕಿನ ಸೋಂಪುರ ಹೋಬಳಿ ವೀರಸಾಗರ ಗ್ರಾಮದಲ್ಲಿ ಸರ್ವೆ ನಂಬರ್‌: 50/2ರಲ್ಲಿ 19 ಗುಂಟೆ ಜಮೀನಿನ ಹದ್ದುಬಸ್ತು ಮಾಡಲು ಮೂರು ಬಾರಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಭೂಮಾಪಕರು ಅಳತೆ ಕಾರ್ಯ ನಡೆಸದೇ ಹಾಗೂ ಯಾವುದೇ ಕಾರಣ ನೀಡದೇ ಅರ್ಜಿಯನ್ನು ವಿಲೇವಾರಿ ಮಾಡಿದ್ದಾರೆ. ಕಳೆದ ಏಳು ವರ್ಷಗಳಿಂದ ನಮ್ಮ ಸಮಸ್ಯೆಗೆ ಪರಿಹಾರ ಲಭಿಸಿಲ್ಲ’ ಎಂದು ಅರ್ಜಿದಾರ ವಿ.ಕೆ.ಮದನ್‌ ಆರೋಪಿಸಿದ್ದಾರೆ.

‘ನೆಲಮಂಗಲದ ಭೂದಾಖಲೆಗಳ ಸಹಾಯಕ ನಿರ್ದೇಶಕಿ ಎಚ್.ನಯನಾ ಅವರು ಜುಲೈ 18ರಂದು ಮೂರು ದಿನಗಳ ಒಳಗಾಗಿ 36(1) ಅಡಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭೂದಾಖಲೆಗಳ ಉಪ ನಿರ್ದೇಶಕರ ಕಚೇರಿಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಪ್ರಸ್ತಾವ ಸಲ್ಲಿಸಿಲ್ಲ. 2017, 2022 ಹಾಗೂ 2023 ಹೀಗೆ ಮೂರು ಬಾರಿ ಸಲ್ಲಿಸಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದ್ದಾರೆ.

‘ಈ ಸಂಬಂಧ ಎಡಿಎಲ್‌ಆರ್‌ ಅವರ ಆಪ್ತ ಸಹಾಯಕ ಮತ್ತು ಅರ್ಜಿ ಮೇಲ್ವಿಚಾರಕ ಗಿರೀಶ್‌ ಅವರಿಗೆ ಕರೆ ಮಾಡಿ  ಮಾಹಿತಿ ಕೇಳಿದರೆ ನಮಗೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೇ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಮೇಲಿನ ಅಧಿಕಾರಿಗಳು ಗಮನ ಹರಿಸಿ ಸಮಸ್ಯೆಗೆ ಪರಿಹಾರ ಸೂಚಿಸಬೇಕು’ ಎಂದು ಮದನ್‌ ಪ್ರಕಟಣೆಯಲ್ಲಿ ಕೋರಿದ್ದಾರೆ. ಪ್ರತಿಕ್ರಿಯೆ ಪಡೆಯಲು ಸಹಾಯಕ ನಿರ್ದೇಶಕಿ ಎಚ್.ನಯನಾ ಅವರನ್ನು ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT