ಬುಧವಾರ, ಜೂನ್ 29, 2022
27 °C
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಬೇಸರ

‘ಚುನಾವಣೆಗಳಲ್ಲಿ ಭಾವನಾತ್ಮಕ ವಿಷಯ ಚರ್ಚೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‌ಬೆಂಗಳೂರು: ‘ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಬಂದಾಗ ಜನಸಾಮಾನ್ಯರ ಬದುಕಿನ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬದಲಾಗಿ, ಧರ್ಮ, ಜಾತಿಗೆ ಸಂಬಂಧಿಸಿದ ಭಾವನಾತ್ಮಕ ವಿಷಯಗಳು ಮುನ್ನೆಲೆಗೆ ಬರುತ್ತಿವೆ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಬೇಸರ ವ್ಯಕ್ತಪಡಿಸಿರು. 

ಅಬಕಾರಿ ಇಲಾಖೆ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಸವೇಶ್ವರ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಭಾರತಕ್ಕೆ ಭಯೋತ್ಪಾದನೆ, ಮೂಲಭೂತವಾದ, ಕೋಮುವಾದ, ಅಪರಾಧೀಕರಣ, ಭ್ರಷ್ಟಾಚಾರ, ಅತಿಯಾದ ವ್ಯಾಪಾರೀಕರಣ, ಸಾಂಸ್ಕೃತಿಕ ದಿವಾಳಿತನ ಸವಾಲುಗಳಾಗಿವೆ. ಪ್ರಜಾಪ್ರಭುತ್ವದ ಉಳಿವಿಗೆ ಸಂವಿಧಾನ ಅವಶ್ಯಕ. ಇಲ್ಲವಾದರೆ ಅರಾಜಕತೆ, ಕೋಮುವಾದ ರಾರಾಜಿಸುತ್ತದೆ’ ಎಂದು ಹೇಳಿದರು. 

‘ದೇಶದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗಳು ಸಂವಿಧಾನದ ತಳಹದಿಯ ಮೇಲೆ ನಿಂತಿವೆ. ಸಂವಿಧಾನ ನಮ್ಮ ಧರ್ಮ ಗ್ರಂಥ. ಅದೇ ನಮ್ಮೆಲ್ಲರ ರಕ್ಷಾ ಕವಚ ಆಗಬೇಕು. ಸಂವಿಧಾನಕ್ಕೆ ಈಗಾಗಲೇ 105 ಬಾರಿ ತಿದ್ದುಪಡಿ ಮಾಡಲಾಗಿದೆ. ಇರುವ ಸಂವಿಧಾನ ಶ್ರೀಮಂತಗೊಳಿಸಿ, ಗಟ್ಟಿಗೊಳಿಸಲು ತಿದ್ದುಪಡಿ ಅಗತ್ಯ. ಪ್ರಜಾಪ್ರಭುತ್ವದ ಉಳಿವಿಗೆ ಸಂವಿಧಾನ ಅವಶ್ಯಕವಾಗಿದ್ದು, ಅದನ್ನು ಕಾಪಾಡಿಕೊಂಡು ಹೋಗಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ತಿಳಿಸಿದರು. 

ಜಾನಪದ ತಜ್ಞ ಕಾಳೇಗೌಡ ನಾಗವಾರ, ‘ಕೆಲ ರಾಜಕಾರಣಿಗಳು ಸಂವಿಧಾನದ ಮೂಲ ಆಶಯ ಅರಿತುಕೊಳ್ಳದೆಯೇ ಆಗಾಗ ಅಪಚಾರ ಮಾಡುತ್ತಾ ಇದ್ದಾರೆ. ‌ವ್ಯವಸ್ಥೆಯಲ್ಲಿನ ಲೋಪದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಬರೆಯಲಾರಂಭಿಸಿದ್ದಾರೆ. ಅವರನ್ನು ಒಗ್ಗೂಡಿಸುವ ಕೆಲಸವಾಗಬೇಕು’ ಎಂದು ಹೇಳಿದರು. 

ಬೆಳಗಾವಿಯ ಹೆಚ್ಚುವರಿ ಅಬಕಾರಿ ಆಯುಕ್ತ (ಅಪರಾಧ) ವೈ. ಮಂಜುನಾಥ್, ‘ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆ ಹೋಗಲಾಡಿಸಲು ಅಂಬೇಡ್ಕರ್ ಶ್ರಮಿಸಿದರು. ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಾತ್ರ ಮೀಸಲಾತಿ ನೀಡಿಲ್ಲ. ಆರ್ಥಿಕವಾಗಿ ಹಿಂದುಳಿದವರು, ಮಹಿಳೆಯರು ಸೇರಿದಂತೆ ಹಲವರಿಗೆ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ಅವರನ್ನು ಒಂದು ಜಾತಿಗೆ ಸಿಮೀತ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು