ಸೋಮವಾರ, ಆಗಸ್ಟ್ 19, 2019
24 °C

ಬ್ರಾಹ್ಮಣ್ಯವಾದಿಗಳೇ ಫ್ಯಾಸಿಸಂ ಜನಕರು: ಆನಂದ ತೇಲ್ತುಂಬ್ಡೆ

Published:
Updated:
Prajavani

ಬೆಂಗಳೂರು: ‌‌‌‌‌‌‘ಆರ್‌ಎಸ್‌ಎಸ್, ಹಿಂದೂ ಮಹಾಸಭಾ ಮತ್ತು ಬ್ರಾಹ್ಮಣ್ಯವಾದಿಗಳೇ ಫ್ಯಾಸಿಸಂ ಜನಕರು’ ಎಂದು ಚಿಂತಕ ಆನಂದ ತೇಲ್ತುಂಬ್ಡೆ ಪ್ರತಿಪಾದಿಸಿದರು.

ನಗರದಲ್ಲಿ ಆ್ಯಂಟಿ ಫ್ಯಾಸಿಸ್ಟ್‌ ಪೀಪಲ್ಸ್‌ ಫ್ರಂಟ್‌ ಆಯೋಜಿಸಿದ್ದ ‘ಕಾರ್ಪೊರೇಟ್ ‌ಮನುವಾದಿ ಫ್ಯಾಸಿಸಂ’ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಭಾರತದಲ್ಲಿ ಫ್ಯಾಸಿಸಂ ಹುಟ್ಟಲು ಬುನಾದಿ ಹಾಕಿಕೊಟ್ಟಿದ್ದೇ ಬ್ರಾಹ್ಮಣ್ಯಶಾಹಿ ಸಿದ್ಧಾಂತ. ಈ ಅಡಿಪಾಯದ ಮೇಲೆ ಬೆಳೆದುಬಂದಿರುವ ಕ್ರೂರವಾದ ಫ್ಯಾಸಿಸಂ ಅನ್ನು ನಾವಿಂದು ಎದುರಿಸುತ್ತಿದ್ದೇವೆ’ ಎಂದರು.

‘ಫ್ಯಾಸಿಸಂ ಬೆಳೆಯಲು ಎಲ್ಲಾ ಹಂತದಲ್ಲಿಯೂ ಧರ್ಮ ಸಹಕಾರಿಯಾಗಿದೆ. ಅದಕ್ಕೆ ಈಗ ಆಡಳಿತದಲ್ಲಿ ಇರುವವರೂ ನೆರವಾಗುತ್ತಿದ್ದಾರೆ. ಸರ್ವಾಧಿಕಾರ, ರಾಷ್ಟ್ರೀಯ ಉನ್ಮಾದ, ಸಾಮ್ರಾಜ್ಯವಾದ, ಸೈನ್ಯಾಧಿಕಾರದ ಗುಣಲಕ್ಷಣಗಳಿದ್ದರೆ ಅದನ್ನು ಫ್ಯಾಸಿಸಂ ಎನ್ನಬಹುದು. ಸದ್ಯ ನಮ್ಮ ದೇಶದಲ್ಲಿ ಅಂತಹುದೇ ಕುರುಹುಗಳಿವೆ’ ಎಂದು ಅವರು ಹೇಳಿದರು.

‘ಜಗತ್ತಿನಾದ್ಯಂತ ಈವರೆಗೆ ಕಾಣಿಸಿಕೊಂಡಿರುವ ಫ್ಯಾಸಿಸಂ, ಯುದ್ಧದ ಸಂದರ್ಭದಲ್ಲಿ ಹೆಚ್ಚು ಮುನ್ನೆಲೆಗೆ ಬಂದಿದೆ. ಆದರೆ, ಭಾರತದಲ್ಲಿ ಇದಕ್ಕೆ ತದ್ವಿರುದ್ಧ ಸ್ಥಿತಿಯಿದ್ದು, ಶಾಂತಿಯುತ ಸಂದರ್ಭದಲ್ಲಿ ಫ್ಯಾಸಿಸಂ ಅಧಿಕವಾಗುತ್ತಿದೆ. ಹಿಮ್ಮೆಟ್ಟಿಸಲಾಗದ ಸ್ಥಿತಿಗೆ ಅದು ತಲುಪಿಬಿಟ್ಟಿದೆ. ಈ ಹಿಂದಿನ ಐದು ವರ್ಷಗಳಲ್ಲಿ ಹಿಂದೂ ರಾಷ್ಟ್ರ ಕಟ್ಟುವ ತಯಾರಿ ನಡೆಸಿದ್ದು, ಮುಂದಿನ ಐದು ವರ್ಷಗಳಲ್ಲಿ ಅದನ್ನು ಮಾಡಿ ಯಶಸ್ವಿಯಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯ ನಂತರದ ರಾಜಕಾರಣದಲ್ಲಿ ಧರ್ಮ ಸೇರಿಕೊಳ್ಳದಿದ್ದರೆ ಹಿಂದುತ್ವದ ಭೂತ ಕಾಲಿಡುತ್ತಿರಲಿಲ್ಲ. ಜಾತ್ಯಾತೀತ ಎಂದು ಹೇಳಿಕೊಂಡ ಕಾಂಗ್ರೆಸ್ ಪಕ್ಷವೇ ಹಿಂದುತ್ವದ ಭೂತ ಹುಟ್ಟಿಕೊಳ್ಳಲು ಪ್ರಮುಖ ಕಾರಣ. ನಂತರ ಇದೇ ಪಕ್ಷದ ನವ ಉದಾರವಾದಿ ನೀತಿಗಳಿಂದ ದೇಶದೊಳಗೆ ಬಿಜೆಪಿ ಹಾಗೂ ಅದರ ಅಂಗ ಸಂಘಟನೆಗಳು ಬೆಳೆದವು’ ಎಂದು ತಿಳಿಸಿದರು.

Post Comments (+)