ಶನಿವಾರ, ಡಿಸೆಂಬರ್ 14, 2019
25 °C
ಆವಿಷ್ಕಾರ–ಸೃಜನಶೀಲತೆ ಸಮಾವೇಶ

ಆಂಧ್ರ ಪ್ರದೇಶದಲ್ಲಿ ಇಂಗ್ಲಿಷ್‌ನಲ್ಲೇ ಶಿಕ್ಷಣ: ಸಚಿವ ಆದಿಮುಲಪು ಸುರೇಶ್‌ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮುಂಬರುವ ಶೈಕ್ಷಣಿಕ ವರ್ಷದಿಂದ ಆಂಧ್ರಪ್ರದೇಶದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಇಂಗ್ಲಿಷ್‌ ಮಾಧ್ಯಮದಲ್ಲಿಯೇ ನೀಡಲಾಗುವುದು’ ಎಂದು ಆಂಧ್ರಪ್ರದೇಶ ಶಿಕ್ಷಣ ಸಚಿವ ಆದಿಮುಲಪು ಸುರೇಶ್‌ ತಿಳಿಸಿದರು. 

ನಗರದಲ್ಲಿ ಸೋಮವಾರ ವಿಶ್ವ ಶಿಕ್ಷಣ ವೇದಿಕೆ (ಡಬ್ಲ್ಯುಇಎಫ್‌) ಆಯೋಜಿಸಿದ್ದ ‘ಅಂತರಾಷ್ಟ್ರೀಯ ಆವಿಷ್ಕಾರ ಮತ್ತು ಸೃಜನಶೀಲ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ಈಗಿನ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಪ್ರಾಥಮಿಕ ಹಂತದಿಂದಲೇ ಮಕ್ಕಳನ್ನು ತಯಾರುಗೊಳಿಸುವ ಉದ್ದೇಶದಿಂದ ಇಂಗ್ಲಿಷ್‌ನಲ್ಲಿ ಶಿಕ್ಷಣ ನೀಡಲು ಮುಂದಾಗಿದ್ದೇವೆ’ ಎಂದರು.

‘ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕಳುಹಿಸುವ ಪೋಷಕರಿಗೆ ₹15 ಸಾವಿರ ಪ್ರೋತ್ಸಾಹಧನ ನೀಡುತ್ತಿದ್ದೇವೆ. ಇದರಿಂದ ಮಕ್ಕಳ ದಾಖಲಾತಿಯಲ್ಲಿ ಸಾಕಷ್ಟು ಏರಿಕೆ ಕಂಡುಬಂದಿದೆ. ಬಾಲ ಕಾರ್ಮಿಕ ಸಮಸ್ಯೆಯೂ ಇದರಿಂದ ನಿವಾರಣೆಯಾಗುತ್ತಿದೆ. ಈವರೆಗೆ  70 ಲಕ್ಷ ಮಕ್ಕಳು ಮತ್ತೆ ಶಾಲೆಗೆ ದಾಖಲಾಗಿದ್ದಾರೆ’ ಎಂದು ತಿಳಿಸಿದರು. 

ಕೌಶಲ ವಿವಿ: ‘ಶಿಕ್ಷಣದ ಜೊತೆಗೆ ಕೌಶಲವೂ ಈಗ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕೌಶಲ ಆಧಾರಿತ ವಿಶ್ವವಿದ್ಯಾಲಯ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಒಂದು ಕೌಶಲ ಕಾಲೇಜು ಸ್ಥಾಪಿಸಲಾಗುವುದು’ ಎಂದು ಸುರೇಶ್‌ ಅವರು ಹೇಳಿದರು. 

‘ಕೌಶಲ ಹೊಂದಿದ ವಿದ್ಯಾರ್ಥಿಗಳಿಗೆ ವೇತನ ಸಹಿತ ತರಬೇತಿ ನೀಡುವ ವ್ಯವಸ್ಥೆ ಕೂಡ ಮಾಡಲಾಗುವುದು’ ಎಂದು ಅವರು ಹೇಳಿದರು. 

ಡಬ್ಲ್ಯುಇಎಫ್‌ನ ಮುಖ್ಯಸ್ಥ ಭರತ್‌ ಲಾಲ್‌ ಮೀನಾ, ‘ ಹಲವು ರಾಷ್ಟ್ರ ಮತ್ತು ದೇಶದ ಹಲವು ರಾಜ್ಯಗಳ ತಜ್ಞರು, ಸಂಶೋಧಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಆಯಾ ದೇಶ ಅಥವಾ ರಾಜ್ಯದ ಶಿಕ್ಷಣ ವ್ಯವಸ್ಥೆ ಬಗ್ಗೆ ಮತ್ತು ಭವಿಷ್ಯದ ಯೋಜನೆಗಳ ಕುರಿತು ಈ ತಜ್ಞರು ಸಲಹೆ ನೀಡುತ್ತಾರೆ. ಈ ಸಲಹೆ, ಶಿಫಾರಸುಗಳನ್ನು ಕ್ರೋಡೀಕರಿಸಿ, ಸೂಕ್ತವಾದವುಗಳನ್ನು ಪಟ್ಟಿ ಮಾಡಿ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಕಳುಹಿಸಲಾಗುವುದು’ ಎಂದರು. 

ರೊಮಾನಿಯಾ ರಾಯಭಾರ ಕಚೇರಿಯ ಎಚ್.ಇ. ವಿಜಯ್ ಮೆಹ್ತಾ, ಬೋಸ್ನಿಯಾ ರಾಯಭಾರಿ ಎಚ್.ಇ. ಮುಹಮ್ಮದ್ ಸೆಂಜಿಕ್, ಎನ್‌ಎಂಸಿ ಗ್ರೂಪ್ ಅಧ್ಯಕ್ಷ ಡಾ.ಬಿ.ಆರ್. ಶೆಟ್ಟಿ, ಜಲ ತಜ್ಞ ಡಾ. ರಾಜೇಂದ್ರ ಸಿಂಗ್ ಹಾಜರಿದ್ದರು.

***

1970ರ ದಶಕದಲ್ಲಿ ದೇಶದಲ್ಲಿ ಮೀಸಲಾತಿ ಅಗತ್ಯವಿತ್ತು. ಈಗ ದೇಶದಲ್ಲಿ ಅಭಿವೃದ್ಧಿ ಜೊತೆಗೆ ಪೈಪೋಟಿ ಹೆಚ್ಚಾಗಿದ್ದು ಮೀಸಲಾತಿ ರದ್ಧತಿಗೆ ಸರ್ಕಾರ ಮುಂದಾಗಬೇಕು.

- ಇರ್ಫಾನ್‌ ರಜಾಕ್‌, ಪ್ರೆಸ್ಟೀಜ್‌ ವ್ಯವಸ್ಥಾಪಕ ನಿರ್ದೇಶಕ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು