ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿಯಲ್ಲಿ ಕೊಳೆಯುತ್ತಿರುವ ಆಲೂಗಡ್ಡೆ

Last Updated 14 ಮೇ 2021, 20:05 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್ ಕಾರಣದಿಂದ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ(ಎಪಿಎಂಸಿ) ಆಲೂಗಡ್ಡೆ ಮಾರಾಟವಾಗದೆ ಕೊಳೆಯಲಾರಂಭಿಸಿದೆ.

ಲಾಕ್‌ಡೌನ್ ಆರಂಭವಾದ ಬಳಿಕ ಈರುಳ್ಳಿ ಮತ್ತು ಆಲೂಗಡ್ಡೆ ವಹಿವಾಟನ್ನು ದಾಸನಪುರ ಎಪಿಎಂಸಿಗೆ ಸ್ಥಳಾಂತರ ಮಾಡಲಾಗಿದೆ. ಬೆಳಿಗ್ಗೆ 6ರಿಂದ 10ರ ತನಕ ಮಾತ್ರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಆಲೂಗಡ್ಡೆ ಮಾರಾಟವಾಗದೆ ಕೊಳೆಯುತ್ತಿದೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ದಾಸ್ತಾನು ಮಳಿಗೆ ಹೊಂದಿರುವ ವರ್ತಕರು ದಾಸನಪುರಕ್ಕೆ ಕೊಂಡೊಯ್ದು ಮಾರಾಟ ಮಾಡಲು ಸಾಧ್ಯವಾಗದೆ ಹೆಣಗಾಡುತ್ತಿದ್ದಾರೆ. ಮಹೇಶ್ ಎಂಬ ವರ್ತಕರ 60 ಚೀಲದಷ್ಟು ಆಲೂಗಡ್ಡೆ ಕೊಳೆತು ಹೋಗಿದ್ದು, ಅಳಿದುಳಿದ ಆಲೂಗಡ್ಡೆ ಬೇರ್ಪಡಿಸುವ ಕಾರ್ಯದಲ್ಲಿ ಶುಕ್ರವಾರ ನಿರತರಾಗಿದ್ದರು.

‘ಮಾರುಕಟ್ಟೆ ಸ್ಥಳಾಂತರ, ಲಾಕ್‌ಡೌನ್ ಕಾರಣದಿಂದ ಹೋಟೆಲ್‌ಗಳು, ಚಿಪ್ಸ್ ಅಂಗಡಿಗಳು, ಶುಭ ಕಾರ್ಯಗಳು ಬಂದ್ ಆಗಿವೆ. ಇನ್ನೊಂದೆಡೆ, ಆಲೂಗಡ್ಡೆಯನ್ನು ಆಹಾರಕ್ಕೆ ಹೆಚ್ಚಾಗಿ ಬಳಕೆ ಮಾಡುವ ಉತ್ತರ ಭಾರತದ ಕಾರ್ಮಿಕರು ತಮ್ಮೂರಿಗೆ ತೆರಳಿದ್ದಾರೆ. ಈ ಎಲ್ಲ ಕಾರಣಗಳಿಂದ ಆಲೂಗಡ್ಡೆ ಮಾರಾಟವಾಗದೆ ಉಳಿಯುತ್ತಿದೆ’ ಎಂದು ಮಹೇಶ್ ಹೇಳಿದರು.

‘ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆಯುತ್ತಿದೆ. ಅಕ್ಕಿ–ಬೇಳೆ ಸೇರಿ ದಿನಸಿ ಅಂಗಡಿಗಳಿಗೆ ಯಶವಂತಪುರದಲ್ಲೇ ಅವಕಾಶ ಕಲ್ಪಿಸಲಾಗಿದೆ. ದಿನಸಿ ಖರೀದಿಗೆ ಬರುವವರು ಪಕ್ಕದಲ್ಲೇ ಆಲೂಗೆಡ್ಡೆ, ಈರುಳ್ಳಿ ಸಿಕ್ಕರೆ ಕೊಂಡೊಯ್ಯುತ್ತಾರೆ. ದಾಸನಪುರಕ್ಕೆ ಬಂದು ಹೋಗುವುದು ಖರೀದಿ ಮಾಡುವವರಿಗೂ ತೊಂದರೆಯಾಗಿದೆ. ಪರಿಣಾಮವಾಗಿ ಆಲೂಗಡ್ಡೆ ಮಾರಾಟವಾಗದೆ ಉಳಿಯುತ್ತಿದೆ’ ಎಂದು ಈರುಳ್ಳಿ, ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಉದಯಶಂಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT