ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದಿ’ ಕಟೌಟ್ ಕಿತ್ತವರ ಬಂಧನ

‘ಗಣೇಶ್‌ ಬಾಗ್‌’ ಕಟ್ಟಡದಲ್ಲಿ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರ ಕೃತ್ಯ
Last Updated 18 ಆಗಸ್ಟ್ 2019, 19:20 IST
ಅಕ್ಷರ ಗಾತ್ರ

ಬೆಂಗಳೂರು: ಜೈನ ಸಮುದಾಯದವರ ‘ಗಣೇಶ್‌ ಬಾಗ್’ ಕಟ್ಟಡದ ಪ್ರವೇಶ ದ್ವಾರದಲ್ಲಿ ಹಾಕಿದ್ದ ‘ಹಿಂದಿ’ ಕಟೌಟ್‌ ಅನ್ನು ಕಿತ್ತುಹಾಕಲಾಗಿದ್ದು, ಆ ಸಂಬಂಧ ‘ಕರ್ನಾಟಕ ರಕ್ಷಣಾ ಸೇನೆ’ ಸಂಘಟನೆಯ ಆರು ಕಾರ್ಯಕರ್ತರನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

‘ಹೆಬ್ಬಾಳ ನಿವಾಸಿಗಳಾದ ಆಂಜನಪ್ಪ, ರಮೇಶ್‌ಗೌಡ, ಮಾದೇಶಗೌಡ, ಹರೀಶ್‌ಗೌಡ, ಮಂಜುನಾಥ್ ಹಾಗೂ ಚಂದ್ರಶೇಖರ್ ಬಂಧಿತರು.‘ಗಣೇಶ್‌ ಬಾಗ್’ ಟ್ರಸ್ಟಿ ತ್ರಿಲೋಕ್‌ಚಂದ್ರ ನೀಡಿರುವ ದೂರು ಆಧರಿಸಿ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್ಫೆಂಟ್ರಿ ರಸ್ತೆಯಲ್ಲಿರುವ ‘ಗಣೇಶ್ ಬಾಗ್‌’ ಕಟ್ಟಡದಲ್ಲಿ ಪ್ರವೀಣ್ ರಿಷಿಜಿ ಮಹಾರಾಜ್ ಸಾಹೇಬ್‌ ಉಳಿದಿದ್ದರು. ನಿತ್ಯವೂ ಪೂಜೆ ಹಾಗೂ ಪ್ರವಚನ ನಡೆಯುತ್ತಿತ್ತು. ಇದೇ 16ರಂದು ಕಟ್ಟಡದ ಬಳಿ ಹೋಗಿದ್ದ ಆರೋಪಿಗಳು, ‘ಹಿಂದಿ’ ಭಾಷೆಯಲ್ಲಿ ಕಟೌಟ್‌ ಹಾಕಿದ್ದನ್ನು ಪ್ರಶ್ನಿಸಿದ್ದರು. ತಾವೇ ಕಾಂಪೌಂಡ್ ಏರಿ, ಕಟೌಟ್‌ ಕಿತ್ತು ಎಸೆದಿದ್ದರು’ ಎಂದು ವಿವರಿಸಿದರು.

‘ಕಾರ್ಯಕರ್ತರು ಈ ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಅದನ್ನು ಪಡೆದು ಪರಿಶೀಲಿಸುತ್ತಿದ್ದೇವೆ’ ಎಂದು ಹೇಳಿದರು.

ದಾಳಿ: ‘ಜೈನ ಮುನಿಗಳು ನಗರಕ್ಕೆ ಬಂದಾಗಲೆಲ್ಲ ಗಣೇಶ್ ಬಾಗ್‌ನಲ್ಲಿ ಉಳಿದುಕೊಳ್ಳುತ್ತಾರೆ. ಮುನಿಗಳು ಹೊರ ರಾಜ್ಯದವರಾಗುವುದರಿಂದ, ಅವರ ಸ್ವಾಗತಕ್ಕೆ ಹಿಂದಿ ಭಾಷೆಯಲ್ಲಿ ಕಟೌಟ್ ಹಾಗೂ ಬ್ಯಾನರ್ ಹಾಕಲಾಗುತ್ತದೆ. ಜೊತೆಗೆ ಕನ್ನಡದ ಬ್ಯಾನರ್‌ಗಳೂ ಇರುತ್ತವೆ. ಈ ಬಗ್ಗೆ ಸಮುದಾಯದವರು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು. ‘ಕಟೌಟ್‌ ವಿಷಯವಾಗಿ ಇದೇ ಮೊದಲ ಬಾರಿ ಕೆಲವರು, ದಾಳಿ ಮಾಡಿದ್ದಾರೆ. ಕಟೌಟ್‌ ತೆಗೆಯುತ್ತೇವೆ ಎಂದು ಹೇಳಿದರೂ ತಾವೇ ಕಿತ್ತು ಹಾಕಿದ್ದಾರೆ. ಇದರಿಂದ ಭಕ್ತರಿಗೆ ನೋವಾಗಿದೆ ಎಂದು ಸಮುದಾಯವರು ಹೇಳಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಕನ್ನಡಕ್ಕಾಗಿ ಕೃತ್ಯ: ‘ಜೈನ ಸಮುದಾ ಯದವರು ಪ್ರತಿ ಬಾರಿ ಹಿಂದಿ ಭಾಷೆಯಲ್ಲೇ ಕಟೌಟ್ ಮತ್ತು ಬ್ಯಾನರ್ ಹಾಕುತ್ತಿದ್ದಾರೆ. ಇದನ್ನು ಖಂಡಿಸಿ, ಕನ್ನಡ ಭಾಷೆಯಲ್ಲಿ ಕಟೌಟ್‌ ಹಾಕುವಂತೆ ಒತ್ತಾಯಿಸಲು ಕಟ್ಟಡಕ್ಕೆ ಹೋಗಿದ್ದೆವು’ ಎಂಬುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ.

ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ

‘ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ಇದೆ. ಹಿಂದಿ ಭಾಷೆಯಲ್ಲಿದ್ದ ಕಟೌಟ್‌ ತೆರವು ಮಾಡಿದ್ದಕ್ಕಾಗಿ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಲಾಗಿದೆ’ ಎಂದು ಆರೋಪಿಸಿ ‘ಕರ್ನಾಟಕ ರಕ್ಷಣಾ ಸೇನೆ’ ಕಾರ್ಯಕರ್ತರು, ಪೊಲೀಸರು ಹಾಗೂ ಗಣೇಶ್ ಬಾಗ್ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.

ಆನಂದರಾವ್ ವೃತ್ತದಲ್ಲಿ ಭಾನುವಾರ ಸೇರಿದ್ದ ಕಾರ್ಯಕರ್ತರು, ‘ಗಣೇಶ್ ಬಾಗ್‌ಗೆ ಕನ್ನಡ ಭಾಷೆ ಕಟೌಟ್‌ ಅಳವಡಿಸಬೇಕು. ಕಾರ್ಯಕರ್ತರ ಮೇಲೆ ದಾಖಲಾದ ಪ್ರಕರಣವನ್ನು ಕೈಬಿಡಬೇಕು. ಇಲ್ಲದಿದ್ದರೆ, ಗಂಭೀರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ರೌಡಿಗಳ ದಾಳಿ ಮಾಡಿದ್ದುತುಂಬಾ ನೋವಾಗಿದೆ: ತೇಜಸ್ವಿ ಸೂರ್ಯ

‘ಹಿಂದಿ ಬ್ಯಾನರ್ ವಿಷಯವಾಗಿ ಕೆಲ ರೌಡಿಗಳು, ಜೈನ ಸಹೋದರರ ಮೇಲೆ ದಾಳಿ ಮಾಡಿದ್ದಕ್ಕೆ ತುಂಬಾ ನೋವಾಗಿದೆ’ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ. ‘ಬೆಂಗಳೂರಿನಲ್ಲಿ ಉರ್ದು ಬಳಕೆ ಮಾಡಿದರೆ ಯಾರೂ ಕೇಳುವುದಿಲ್ಲ’ ಎಂದು ಹೇಳಿದ್ದಾರೆ.

‘ಪಂಪ–ಪೊನ್ನ–ರನ್ನ ಕನ್ನಡ ಸಾಹಿತ್ಯದ ರತ್ನತ್ರಯರು. ಇವರೆಲ್ಲ ಜೈನರು. ಕರ್ನಾಟಕದಲ್ಲಿರುವ ಜೈನ ಸಮುದಾಯದ ಇಂದಿನ ಯುವಜನತೆ, ಇತಿಹಾಸ ತಿಳಿದುಕೊಂಡು ನಿತ್ಯದ ಸಂವಹನದಲ್ಲಿ ಕನ್ನಡ ಬಳಸಬೇಕು’ ಎಂದೂ ಕೋರಿದ್ದಾರೆ. ತೇಜಸ್ವಿ ಟ್ವೀಟ್‌ಗೆ ಪರ–ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

‘ನಿಮ್ಮನ್ನು ಗೆಲ್ಲಿಸಿದ್ದು ಕನ್ನಡಿಗರು. ಕನ್ನಡ ಹೋರಾಟಗಾರರನ್ನೇ ರೌಡಿಗಳು ಎನ್ನುತ್ತಿದ್ದೀರಾ. ಯಾವ ಸಂದೇಶ ಕೊಡುತ್ತಿದ್ದೀರಾ’ ಎಂದು ಸಾರ್ವಜನಿಕರೊಬ್ಬರು ಪ್ರಶ್ನಿಸಿದ್ದಾರೆ. ‘ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT