ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಮಲಗಿದ್ದ ವ್ಯಕ್ತಿ ಮೇಲೆ ಬಸ್‌ ಚಕ್ರ ಹರಿಸಿದ ಚಾಲಕನ ಬಂಧನ

ಆರೋಪಿಯ ಸುಳಿವು ನೀಡಿದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು
Published : 11 ಸೆಪ್ಟೆಂಬರ್ 2024, 15:36 IST
Last Updated : 11 ಸೆಪ್ಟೆಂಬರ್ 2024, 15:36 IST
ಫಾಲೋ ಮಾಡಿ
Comments

ಬೆಂಗಳೂರು: ರಾತ್ರಿ ವೇಳೆ ಮಲಗಿದ್ದ ವ್ಯಕ್ತಿ ಮೇಲೆ ಬಸ್ ಚಕ್ರ ಹರಿಸಿ ಸಾವಿಗೆ ಕಾರಣನಾಗಿದ್ದ ಚಾಲಕನನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಳವಳ್ಳಿ ನಿವಾಸಿ ವಿವೇಕ್ ಬಂಧಿತ ಚಾಲಕ. ಶ್ರೀನಿವಾಸಯ್ಯ ಮೃತ ವ್ಯಕ್ತಿ. ದೊಡ್ಡಬಳ್ಳಾಪುರದಲ್ಲಿರುವ ಶ್ರೀ ಟ್ರಾವೆಲ್ಸ್ ಕಂಪನಿಯ ಬಸ್ ಚಾಲಕನಾಗಿರುವ ವಿವೇಕ್, ಕಂಪನಿ ಉದ್ಯೋಗಿಗಳನ್ನು ಕರೆದುಕೊಂಡು ಹೋಗುವ ಮತ್ತು ಬರುವ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್‌ 5ರ ರಾತ್ರಿ ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣದ ಬಳಿ ಬಸ್ ನಿಲ್ಲಿಸಿ, ಅಲ್ಲಿಯೇ ರಾತ್ರಿ ಮಲಗಿದ್ದರು.

ಮಾರನೇ ದಿನ ಬೆಳಿಗ್ಗೆ 6 ಗಂಟೆ ಸುಮಾರಿಗೆ ಎದ್ದು, ನೇರವಾಗಿ ಬಸ್ ಚಾಲನೆ ಮಾಡಿದ್ದರು. ಬಸ್ ಪಕ್ಕದಲ್ಲಿ ಮಲಗಿದ್ದ ಶ್ರೀನಿವಾಸಯ್ಯ ಅವರು ನಿದ್ರೆ ಮಂಪರಿನಲ್ಲಿ ಚಕ್ರದ ಕೆಳಗೆ ಹೊರಳಿದ್ದನ್ನು ಗಮನಿಸದೆ, ವಿವೇಕ್ ಬಸ್ ಚಲಾಯಿಸಿದ್ದರು. ಅವರ ತಲೆ ಮೇಲೆ ಚಕ್ರ ಹರಿದು ಮೃತಪಟ್ಟಿದ್ದರು. ಈ ಘಟನೆ ಅಪಘಾತವೆಸಗಿದ ಚಾಲಕನ ಗಮನಕ್ಕೆ ಬಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ಸುತ್ತಮುತ್ತಲಿನ 25ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ವಿವೇಕ್ ಬಸ್ ಚಾಲನೆ ಮಾಡಿರುವುದು ಗೊತ್ತಾಯಿತು. ಬಸ್ ನೋಂದಣಿ ಸಂಖ್ಯೆ ಆಧರಿಸಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ರಾತ್ರಿ ವೇಳೆ ರಸ್ತೆಬದಿ ವಾಹನ ನಿಲ್ಲಿಸುವ ಚಾಲಕರಿಗೆ ಈ ಪ್ರಕರಣ ನೀತಿ ಪಾಠವಾಗಿದೆ. ಬಸ್‌, ಲಾರಿ, ಕಂಟೇನರ್‌ ಇತ್ಯಾದಿ ವಾಹನಗಳನ್ನು ರಸ್ತೆಬದಿಯಲ್ಲಿ ನಿಲ್ಲಿಸಿ ವಿಶ್ರಾಂತಿ ಪಡೆದು ಬೆಳಗಿನ ಜಾವ ವಾಹನದ ಕೆಳಗೆ ಏನಿದೆ ಎಂಬುದನ್ನು ಖಚಿತಪಡಿಸಿಕೊಂಡು ನಂತರ ವಾಹನ ಚಾಲನೆ ಮಾಡಬೇಕು’ ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT