ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸಿಲಿಂಡರ್‌ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ, 20 ಸಿಲಿಂಡರ್ ಜಪ್ತಿ

Published 25 ಆಗಸ್ಟ್ 2023, 15:43 IST
Last Updated 25 ಆಗಸ್ಟ್ 2023, 15:43 IST
ಅಕ್ಷರ ಗಾತ್ರ

ಬೆಂಗಳೂರು: ಮನೆಗಳ ಹೊರಭಾಗದಲ್ಲಿ ಇರಿಸುತ್ತಿದ್ದ ಗೃಹೋಪಯೋಗಿ ಅಡುಗೆ ಅನಿಲ್ ಸಿಲಿಂಡರ್‌ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಲೋಕೇಶ್ ಹಾಗೂ ಹೇಮಂತ್ ಬಂಧಿತರು. ಇವರಿಂದ ₹ 60 ಸಾವಿರ ಮೌಲ್ಯದ 20 ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಗೋವಿಂದರಾಜನಗರ, ರಾಜಾಜಿನಗರ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆ ಠಾಣೆಗಳ ವ್ಯಾಪ್ತಿಯಲ್ಲಿ ಸಿಲಿಂಡರ್‌ಗಳು ಕಳ್ಳತನ ಆಗಿದ್ದವು. ಈ ಬಗ್ಗೆ ನಿವಾಸಿಗಳು ಠಾಣೆಗಳಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಾಗ, ಆರೋಪಿಗಳು ಸಿಕ್ಕಿಬಿದ್ದರು’ ಎಂದು ತಿಳಿಸಿದರು.

‘ಕಳ್ಳತನ ಆರೋಪದಡಿ ಲೋಕೇಶ್ ಈ ಹಿಂದೆ ಜೈಲು ಸೇರಿದ್ದ. ಜಾಮೀನು ಮೇಲೆ ಹೊರಬಂದಿದ್ದ. ಹಣ ಸಂಪಾದಿಸಲು ಸ್ನೇಹಿತ ಹೇಮಂತ್‌ ಜೊತೆ ಸೇರಿ ಸಿಲಿಂಡರ್ ಕಳ್ಳತನಕ್ಕೆ ಇಳಿದಿದ್ದ’ ಎಂದು ಹೇಳಿದರು.

ಬೈಕ್‌ನಲ್ಲಿ ಸುತ್ತಾಡಿ ಮನೆ ಗುರುತು: ‘ಹಲವು ಮನೆಗಳ ಹೊರಭಾಗದಲ್ಲಿ ಸಿಲಿಂಡರ್‌ಗಳನ್ನು ಇರಿಸಲಾಗುತ್ತದೆ. ಅಲ್ಲಿಂದಲೇ, ಪೈಪ್‌ ಮೂಲಕ ಅಡುಗೆ ಮನೆಗೆ ಅನಿಲ ಪೂರೈಕೆಯಾಗುತ್ತದೆ. ಬೈಕ್‌ಗಳಲ್ಲಿ ಸುತ್ತಾಡುತ್ತಿದ್ದ ಆರೋಪಿಗಳು, ಸಿಲಿಂಡರ್ ಇರುತ್ತಿದ್ದ ಮನೆಗಳನ್ನು ಗುರುತಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮನೆಗಳ ಬಳಿ ಯಾರೂ ಇಲ್ಲದ ವೇಳೆ ಸಿಲಿಂಡರ್‌ಗಳನ್ನು ಕದ್ದೊಯ್ಯುತ್ತಿದ್ದರು. ಅದೇ ಸಿಲಿಂಡರ್‌ಗಳನ್ನು ಹೋಟೆಲ್ ಹಾಗೂ ಇತರರಿಗ ಮಾರಿ ಹಣ ಪಡೆಯುತ್ತಿದ್ದರು’ ಎಂದು ಹೇಳಿದರು.

‘ಸಿಲಿಂಡರ್ ಕಳ್ಳತನ ಬಗ್ಗೆ ದೂರುಗಳು ಬರುತ್ತಿದ್ದಂತೆ, ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದ ದೃಶ್ಯ ಸೆರೆಯಾಗಿತ್ತು. ಅದೇ ಸುಳಿವು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

ಲೋಕೇಶ್
ಲೋಕೇಶ್
ಹೇಮಂತ್
ಹೇಮಂತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT