ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆವಲ್‌ ಕ್ರಾಸಿಂಗ್‌: ವಾಹನಗಳ ‘ವಾಕಿಂಗ್‌’

ಮಾರತ್‌ ಹಳ್ಳಿ ಜಂಕ್ಷನ್‌ ಬಳಿಯ ಚಿನ್ನಪ್ಪನಹಳ್ಳಿ ಕ್ರಾಸಿಂಗ್ ಸಮಸ್ಯೆ
Published 8 ಅಕ್ಟೋಬರ್ 2023, 0:02 IST
Last Updated 8 ಅಕ್ಟೋಬರ್ 2023, 0:02 IST
ಅಕ್ಷರ ಗಾತ್ರ

ಬೆಂಗಳೂರು: ಹೊರವರ್ತುಲ ರಸ್ತೆಯಲ್ಲಿನ ವಾಹನದಟ್ಟಣೆಗೆ ಸುತ್ತಮುತ್ತಲಿರುವ ರೈಲ್ವೆ ಲೆವೆಲ್‌ ಕ್ರಾಸಿಂಗ್‌ಗಳ ಪಾಲೂ ಇದೆ. ರೈಲು ಸಂಚರಿಸುವ ಸಮಯದಲ್ಲಿ ಗೇಟ್‌ ಹಾಕುವುದರಿಂದ ಒಳರಸ್ತೆಯಿಂದ ಹೆದ್ದಾರಿವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾರತ್‌ ಹಳ್ಳಿ ಜಂಕ್ಷನ್‌ನಿಂದ 150 ಮೀಟರ್‌ ದೂರದಲ್ಲಿ ಚಿನ್ನಪ್ಪನಹಳ್ಳಿ ಲೆವಲ್‌ ಕ್ರಾಸಿಂಗ್‌ ಇದೆ. ಮಾರತ್‌ ಹಳ್ಳಿಯಿಂದ ವೈಟ್‌ಫೀಲ್ಡ್‌ ಕಡೆಗೆ ಇದು ಹತ್ತಿರದ ಮಾರ್ಗವಾಗಿರುವುದರಿಂದ ಬಹುತೇಕ ವಾಹನಗಳು ಇಲ್ಲೇ ಸಂಚರಿಸುತ್ತವೆ. ಬೆಳಿಗ್ಗೆ 20 ನಿಮಿಷಕ್ಕೊಂದು ರೈಲು ಸಂಚರಿಸುವುದರಿಂದ ಪ್ರತಿ 20 ನಿಮಿಷಕ್ಕೊಮ್ಮೆ 5–6 ನಿಮಿಷ ರಸ್ತೆ ಸಂಚಾರ ಈ ಭಾಗದಲ್ಲಿ ಬಂದ್‌ ಆಗುತ್ತದೆ. 

ಲೆವೆಲ್‌ ಕ್ರಾಸಿಂಗ್‌ ಗೇಟ್‌ನಿಂದ ಮಾರತ್‌ ಹಳ್ಳಿ– ಬೆಳ್ಳಂದೂರು ಮುಖ್ಯರಸ್ತೆವರೆಗೆ ವಾಹನಗಳ ಸಾಲು ನಿಲ್ಲುತ್ತಿರುವುದರಿಂದ ಮುಖ್ಯರಸ್ತೆಯಲ್ಲಿ ಸಾಗುವ ವಾಹನಗಳ ಸರಾಗ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಲೆವೆಲ್‌ ಕ್ರಾಸಿಂಗ್‌ನಲ್ಲಿ ಗೇಟ್‌ ತೆರೆದಾಗ ಸಾಲುಗಟ್ಟಿದ ವಾಹನಗಳು ಮುಂದಕ್ಕೆ ಚಲಿಸುತ್ತವೆಯಾದರೂ ಆ ಕಡೆಯಿಂದ ಮುಖ್ಯರಸ್ತೆಗೆ ಬರುವ ವಾಹನಗಳ ಸಂಖ್ಯೆ ಒಮ್ಮೆಲೇ ಅಧಿಕಗೊಂಡು ಇನ್ನೊಂದು ರೀತಿಯಲ್ಲಿ ಅಡ್ಡಿಯಾಗುತ್ತಿವೆ. ಇಲ್ಲಿ ರೈಲ್ವೆ ಕೆಳಸೇತುವೆ ನಿರ್ಮಿಸಿದರೆ ಸಮಸ್ಯೆ ಪರಿಹಾರವಾಗಲಿದೆ.

ಪಣತ್ತೂರಿನಲ್ಲಿ ವಿಭಿನ್ನ ಸಮಸ್ಯೆ: ಮಾರತ್‌ ಹಳ್ಳಿ ದಾಟಿ ಕಾಡುಬೀಸನಹಳ್ಳಿ ಸೇತುವೆ ಕಡೆ ಸಾಗಿದರೆ ಅಲ್ಲಿ ರೈಲ್ವೆ ಕೆಳಸೇತುವೆ ಇದೆಯಾದರೂ ಕಿರಿದಾಗಿರುವುದರಿಂದ ವಾಹನದಟ್ಟಣೆ ಉಂಟಾಗುತ್ತಿದೆ.

ಪಣತ್ತೂರು ಕೆಳ ಸೇತುವೆಯಲ್ಲಿ ಒಂದು ವಾಹನ ಮಾತ್ರ ಸಾಗುವಷ್ಟು ಜಾಗ ಇದೆ. ಸೇತುವೆಯ ಎರಡೂ ಕಡೆಗಳಲ್ಲಿ ನಾಲ್ಕು ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ನಿಂತುಕೊಂಡು ಸಂಚಾರ ನಿಯಂತ್ರಣ ಮಾಡುತ್ತಾರೆ. ಒಂದು ಕಡೆಯ ವಾಹನಗಳನ್ನು ಒಮ್ಮೆಗೆ ಬಿಡುವ ಹೊತ್ತಿಗೆ ಇನ್ನೊಂದು ಕಡೆ ಸಾಲು ಉಂಟಾಗುತ್ತದೆ. ಇದರಿಂದ ಪಣತ್ತೂರು ಕಡೆಯಿಂದ ಬರುವ ವಾಹನಗಳು ಮುಖ್ಯರಸ್ತೆಗೆ ನುಗ್ಗುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುತ್ತಿದೆ.

ನಾಲ್ಕು ದಶಕಗಳ ಹಿಂದೆ ಪಣತ್ತೂರು ಎಂಬುದು ಹೊಲಗದ್ದೆಗಳಿದ್ದ ಹಳ್ಳಿಯಾಗಿತ್ತು. ಆಗ ಎತ್ತಿನ ಗಾಡಿಗಳ ಸಂಚಾರಕ್ಕಾಗಿ ರೈಲ್ವೆಯವರು ರೈಲ್ವೆ ಕೆಳಸೇತುವೆ ನಿರ್ಮಿಸಿ ಕೊಟ್ಟಿದ್ದರು. ಬೆಂಗಳೂರು ನಗರ ಒಂದೇ ಸಮನೆ ಬೆಳೆದಿದ್ದರಿಂದ ಪಣತ್ತೂರು ಹಳ್ಳಿ ನೂರಾರು ಬಡಾವಣೆಗಳು, ಸಾವಿರಾರು ಅಪಾರ್ಟ್‌ಮೆಂಟ್‌ಗಳ ನಗರವಾಗಿ ಪರಿವರ್ತನೆಯಾಗಿದೆ. ಅದೇ ವೇಗದಲ್ಲಿ ರಸ್ತೆ ಅಗಲವಾಗದೇ ಇರುವುದು ಮತ್ತು ರೈಲ್ವೆ ಕೆಳಸೇತುವೆ ನಿರ್ಮಾಣಗೊಳ್ಳದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಚಿನ್ನಪ್ಪನಹಳ್ಳಿ, ಪಣತ್ತೂರು ಸಹಿತ ಬೆಂಗಳೂರು ನಗರದಲ್ಲಿರುವ ಎಲ್ಲ ಲೆವಲ್‌ ಕ್ರಾಸಿಂಗ್ ಸಮಸ್ಯೆಗಳನ್ನು ಸರಿಪಡಿಸಿದರೆ ವಾಹನದಟ್ಟಣೆಯ ಪ್ರಮಾಣ ಕಡಿಮೆಯಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

ಬೆಂಗಳೂರಿನ ಪಣತ್ತೂರಿನ ರೈಲ್ವೆ ಕೆಳಸೇತುವೆ ಮತ್ತು ರಸ್ತೆ ಕಿರಿದಾಗಿ ಉಂಟಾಗಿರುವ ವಾಹನಗಳ ದಟ್ಟಣೆ . ಪ್ರಜಾವಾಣಿ ಚಿತ್ರ/ ಪ್ರಶಾಂತ್‌ ಎಚ್.ಜಿ
ಬೆಂಗಳೂರಿನ ಪಣತ್ತೂರಿನ ರೈಲ್ವೆ ಕೆಳಸೇತುವೆ ಮತ್ತು ರಸ್ತೆ ಕಿರಿದಾಗಿ ಉಂಟಾಗಿರುವ ವಾಹನಗಳ ದಟ್ಟಣೆ . ಪ್ರಜಾವಾಣಿ ಚಿತ್ರ/ ಪ್ರಶಾಂತ್‌ ಎಚ್.ಜಿ

ಜನ ಏನಂತಾರೆ...?

ಚಿನ್ನಪ್ಪನಹಳ್ಳಿ ಲೆವೆಲ್‌ ಕ್ರಾಸಿಂಗ್‌ನಲ್ಲಿ ರೈಲ್ವೆ ಮೇಲ್ಸೇತುವೆ ಮಾಡಲು ಅವಕಾಶ ಇದೆ. ಆದರೆ ಜನನಾಯಕರು ಅಧಿಕಾರಿಗಳು ಈ ಬಗ್ಗೆ ಸ್ಪಂದಿಸುತ್ತಿಲ್ಲ. ಮೇಲ್ಸೇತುವೆ ನಿರ್ಮಿಸಿದರೆ 20 ನಿಮಿಷ ಇಲ್ಲವೇ ಅರ್ಧಗಂಟೆಗೊಮ್ಮೆ ವಾಹನ ದಟ್ಟಣೆ ಉಂಟಾಗುವುದನ್ನು ತಪ್ಪಿಸಬಹುದು. ಜೊತೆಗೆ ಗೇಟ್‌ ಹಾಕಲು ಮತ್ತು ತೆರೆಯಲು 8 ಗಂಟೆಗೆ ಒಬ್ಬರಂತೆ ದಿನಕ್ಕೆ ಮೂರು ಮಂದಿ ರೈಲ್ವೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಕೂಡ ತಪ್ಪಲಿದೆ.

ಗುರುರಾಜ್‌ ಚಿನ್ನಪ್ಪನಹಳ್ಳಿ ನಿವಾಸಿ

***

ಪಣತ್ತೂರಿನಲ್ಲಿ ರೈಲ್ವೆ ಕೆಳಸೇತುವೆ ನಿರ್ಮಾಣ ಮತ್ತು 20 ಅಡಿ ರಸ್ತೆಯನ್ನು 40 ಅಡಿ ರಸ್ತೆ ಮಾಡಲು ಯೋಜನೆ ರೂಪಿಸಲಾಗಿದೆ. ಒಂದು ಕೆಳಸೇತುವೆ ನಿರ್ಮಾಣಗೊಂಡಿದ್ದು ಅದಕ್ಕೆ ಸಂಪರ್ಕ ಕಲ್ಪಿಸಲು ನೇರ ರಸ್ತೆ ನಿರ್ಮಿಸಬೇಕಿದೆ. ಇದಕ್ಕಾಗಿ ಕೆಲವು ಮನೆಗಳು ಮತ್ತು ಅಂಗಡಿಗಳನ್ನು ತೆರವುಗೊಳಿಸಬೇಕು. ಅದಕ್ಕೆ ಪರಿಹಾರವೂ ಸಿಗುತ್ತದೆ. ಆದರೆ ಬಿಜೆಪಿ ಆಡಳಿತ ಇರುವಾಗ ಕಾಂಗ್ರೆಸ್‌ನವರು ಕಾಂಗ್ರೆಸ್ ಆಡಳಿತಕ್ಕೆ ಬಂದಾಗ ಬಿಜೆಪಿಯವರು ಅಡ್ಡಿಪಡಿಸುತ್ತಿರುವುದರಿಂದ ರಸ್ತೆ ನಿರ್ಮಾಣ ನನೆಗುದಿಗೆ ಬಿದ್ದಿದೆ.

ಗುಣಪತಿ ಪಣತ್ತೂರು ನಿವಾಸಿ

***

ಎತ್ತಿನಗಾಡಿಗಾಗಿ ಹಿಂದೆ ಮಾಡಿದ್ದ ಕೆಳಸೇತುವೆಯಲ್ಲಿ ಲಾರಿಗಳು ಹೋಗುವುದಿಲ್ಲ. ಸಣ್ಣ ವಾಹನಗಳಷ್ಟೇ ಸಂಚರಿಸುವಷ್ಟು ಜಾಗ ಇದೆ. ಅದಕ್ಕಾಗಿ ಅಗಲವಾದ ಕೆಳಸೇತುವೆ ಮತ್ತು ರಸ್ತೆ ನಿರ್ಮಿಸಬೇಕು ಎಂದು 20 ವರ್ಷಗಳಿಂದ ಬೇಡಿಕೆ ಇದೆ. ಯೋಜನೆ ಮಂಜೂರಾದರೂ ರಾಜಕೀಯದಿಂದಾಗಿ ಕೆಲಸಗಳು ವೇಗವಾಗಿ ನಡೆಯುತ್ತಿಲ್ಲ.

ಪಿ. ಚಿನ್ನಪ್ಪ ನಿವೃತ್ತ ಪೊಲೀಸ್‌ ಪಣತ್ತೂರು

ಹೊರವರ್ತುಲ ರಸ್ತೆಯಲ್ಲಿ ದಟ್ಟಣೆ ಉಂಟಾಗುವ ಸ್ಥಳಗಳು

l ಎಚ್‌ಎಸ್‌ಆರ್‌ ಬಿಎಂಟಿಸಿ ಡಿಪೊ ಜಂಕ್ಷನ್‌

l ಅಗರ 27ನೇ ಮುಖ್ಯ ಜಂಕ್ಷನ್‌

l ಸನ್‌ಸಿಟಿ ಇಬ್ಬಲೂರು ಜಂಕ್ಷನ್‌

l ಅಕಮೈ ಅಪಾರ್ಟ್‌ಮೆಂಟ್‌ ಜಂಕ್ಷನ್‌

l ಸ್ಪ್ರಿಂಗ್‌ಫೀಲ್ಡ್‌ ಬೆಳ್ಳಂದೂರು ಗೇಟ್‌ ಜಂಕ್ಷನ್‌

l ದೊಡ್ಡಕನ್ನಲ್ಲಿ ಜಂಕ್ಷನ್‌

l ಎಇಟಿ ಜಂಕ್ಷನ್‌

l ದೇವರಬೀಸನಹಳ್ಳಿ ಅಂಬೇಡ್ಕರ್‌ ಪ್ರತಿಮೆ ಸರ್ಕಲ್‌

l ಎಂಬೆಸಿ ಹಿಂಬದಿ ಗೇಟ್‌ ಜಂಕ್ಷನ್‌

l ಪಣತ್ತೂರು ಜಂಕ್ಷನ್‌

l ಪಣತ್ತೂರು ಕೆಳಸೇತುವೆ

l ಕರಿಯಮ್ಮನ ಅಗ್ರಹಾರ ಜಂಕ್ಷನ್‌

l ಸಕ್ರಾ ಆಸ್ಪತ್ರೆ ರಸ್ತೆ

l ಕಲ್ಯಾಣಿ ಟೆಕ್‌ಪಾರ್ಕ್‌ ಹಿಂಬದಿ ಜಂಕ್ಷನ್‌

l ಬೆಳ್ಳಂದೂರು ಕೆರೆ ಜಂಕ್ಷನ್‌

l ಯಮಲೂರು ಜಂಕ್ಷನ್‌

l ಕಾಳಮಂದಿರ ಜಂಕ್ಷನ್‌

l ರೈನ್‌ಬೊ ಆಸ್ಪತ್ರೆ ಜಂಕ್ಷನ್‌

l ದೊಡ್ಡನೆಕ್ಕುಂದಿ ಯೂಟರ್ನ್‌ ಜಂಕ್ಷನ್‌

l ಮಹದೇವಪುರ ಬಸ್‌ ತಂಗುದಾಣ ಜಂಕ್ಷನ್‌

l ಕೈಕೊಂಡ್ರಹಳ್ಳಿ ಜಂಕ್ಷನ್‌

l ಭೋಗನಹಳ್ಳಿ ಜಂಕ್ಷನ್‌

l ಕ್ರೋಮಾ ಕಾಡುಬೀಸನಹಳ್ಳಿ ಜಂಕ್ಷನ್‌

l ಹರಳೂರು–ಕೂಡ್ಲು ರಸ್ತೆ ಜಂಕ್ಷನ್‌

l ಕೆಂಪಾಪುರ ಜಂಕ್ಷನ್‌ (ಇಜಿಎಲ್‌ ಹಿಂಬದಿ ಗೇಟ್‌)

l ಮಾರತ್‌ ಹಳ್ಳಿ ಪೊಲೀಸ್ ಸ್ಟೇಷನ್‌

l ಮುನೇನಕೊಳಾಲು ಸರ್ಕಲ್‌

l ಗೋಶಾಲಾ ಜಂಕ್ಷನ್‌

l ಎಚ್‌ಎಸ್‌ಆರ್‌ ಬಿಡಿಎ ಕಾಂಪ್ಲೆಕ್ಸ್‌ ಜಂಕ್ಷನ್‌

l ಕಾರ್ಮೆಲರಾಂ ಜಂಕ್ಷನ್‌

l ಕಾರ್ಮೆಲರಾಂ ರೈಲು ನಿಲ್ದಾಣ ಜಂಕ್ಷನ್‌

l ಜಕ್ಕಸಂದ್ರ ಜಂಕ್ಷನ್‌

l ವಿಪ್ರೊ ಜಂಕ್ಷನ್‌ (ಸರ್ಜಾಪುರ ರಸ್ತೆ)

l ಎಸ್‌ಟಿಪಿ ಬಲಗೆರೆ ಜಂಕ್ಷನ್‌

l ಜೀವಿಕಾ ಆಸ್ಪತ್ರೆ– ರೈಲ್ವೆ ಬ್ರಿಜ್‌ ಜಂಕ್ಷನ್‌

l ಲೋರಿ ಜಂಕ್ಷನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT