ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿ ಡ್ರಾಪ್ ವೇಳೆ‌ ಯುವಕನ ಮೇಲೆ ಹಲ್ಲೆ; ವಿಡಿಯೊ ಆಧರಿಸಿ ಆರೋಪಿಗಳ ಬಂಧನ

Last Updated 19 ಸೆಪ್ಟೆಂಬರ್ 2021, 7:21 IST
ಅಕ್ಷರ ಗಾತ್ರ

ಬೆಂಗಳೂರು: ಸಹೋದ್ಯೋಗಿ ‌ಯುವತಿಯನ್ನು ಮನೆಗೆ ಡ್ರಾಪ್ ಮಾಡುವ‌ ವೇಳೆ ಬೈಕ್ ಅಡ್ಡಗಟ್ಟಿ ನಡುರಸ್ತೆಯಲ್ಲಿ ಯುವಕನ ಮೇಲೆ ಹಲ್ಲೆ‌ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಹೊಸೂರು ರಸ್ತೆಯ ಡೇರಿ ವೃತ್ತದ ಬಳಿ ಶನಿವಾರ ರಾತ್ರಿ ನಡೆದ ಘಟನೆಯ ವಿಡಿಯೊ‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದರನ್ವಯ‌ ದೂರು‌ ದಾಖಲಿಸಿದ್ದ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.

'ಒಂದೇ ಕಂಪನಿಯಲ್ಲಿ‌ ಕೆಲಸ‌ ಮಾಡುತ್ತಿದ್ದ ಯುವಕ ಹಾಗೂ ಯುವತಿ, ರಾತ್ರಿ‌ ಕೆಲಸ‌ ಮುಗಿಸಿ ಮನೆಗೆ ಹೊರಟಿದ್ದರು. ಅವರನ್ನು‌ ಹಿಂಬಾಲಿಸಿದ್ದ ಗುಂಪು, ಬೈಕ್‌ ಅಡ್ಡಗಟ್ಟಿ ಗಲಾಟೆ ಮಾಡಿತ್ತು' ಎಂದು ಪೊಲೀಸ್ ಮೂಲಗಳು ಹೇಳಿವೆ.

'ನಮ್ಮ ಧರ್ಮದ ಯುವತಿಯನ್ನು ಬೈಕ್‌ನಲ್ಲಿ ಏಕೆ‌ ಕರೆದೊಯ್ಯುತ್ತಿದ್ದಿಯಾ ಎಂದು ಗುಂಪು‌ ಪ್ರಶ್ನಿಸಿತ್ತು. ನಾವಿಬ್ಬರು ಸಹೋದ್ಯೋಗಿಗಳು, ಹಲವು ಬಾರಿ ಬೈಕ್‌ನಲ್ಲಿ‌ ಹೋಗುತ್ತೇವೆ ಎಂದು ಯುವತಿ ಹಾಗೂ ಯುವಕ‌ ಹೇಳಿದ್ದರು. ಯುವತಿ ಜೊತೆಯೂ ವಾದ ಮಾಡಿದ್ದ ಆರೋಪಿಗಳು, ಕುಟುಂಬದವರ‌ ಮೊಬೈಲ್ ನಂಬರ್ ಪಡೆದು ಅವರ ಜೊತೆಯೂ‌ ಕೆಟ್ಟದಾಗಿ ‌ಮಾತನಾಡಿದ್ದರು. ಯುವಕನ ಮೇಲೆಯೂ‌ ಹಲ್ಲೆ‌ ಮಾಡಿದ್ದರು.'

'ಯುವತಿಯನ್ನು ಬೈಕ್‌ನಿಂದ‌ ಇಳಿಸಿ ಆಟೋದಲ್ಲಿ‌ ಮನೆಗೆ ಕಳುಹಿಸಿದ್ದ ಆರೋಪಿಗಳು, ಯುವತಿ ಜೊತೆ ಇನ್ನೊಮ್ಮೆ ಬೈಕ್‌ನಲ್ಲಿ ಹೋಗದಂತೆ ಎಚ್ಚರಿಕೆ ನೀಡಿದ್ದರು' ಎಂದೂ ಮೂಲಗಳು ತಿಳಿಸಿವೆ.

ಘಟನೆ ವಿಡಿಯೊ‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸಹೋದ್ಯೋಗಿಗಳ ಜೊತೆ ಬೈಕ್ ಮೇಲೆ ಹೋಗುವುದು ತಪ್ಪಾ? ಎಂದು ಹಲವರು ಪ್ರತಿಕ್ರಿಯಿಸಿದ್ದರು. ಆರೋಪಿಗಳನ್ನು ಪತ್ತೆ ಮಾಡಿ‌ ಬಂಧಿಸುವಂತೆ ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT