ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿಸಿಕೊಳ್ಳಲು ಯತ್ನ: ಆರೋಪಿ ಕಾಲಿಗೆ ಗುಂಡು

Last Updated 23 ನವೆಂಬರ್ 2022, 20:48 IST
ಅಕ್ಷರ ಗಾತ್ರ

ನೆಲಮಂಗಲ: ಸುಲಿಗೆ ಮಾಡಿದ್ದ ಸ್ಥಳದ ಪರಿಶೀಲನೆ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದು, ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

‘ಸೆ.11ರಂದು ಪಟ್ಟಣದ ಬಿನ್ನಮಂಗಲ ಬಳಿ ಬೆಂಗಳೂರಿನ ದಾಸರಹಳ್ಳಿ ನಿವಾಸಿ ಪ್ರೇಮ ಅವರನ್ನು ದ್ವಿಚಕ್ರ ವಾಹನದಲ್ಲಿ ಅಡ್ಡಗಟ್ಟಿದ ಸುಲಿಗೆಕೋರರು, 120 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದರು. ಕಾರ್ಯಾಚರಣೆ ನಡೆಸಿ ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿ ರಾಕೇಶ್‌ನನ್ನು (30) ಬಂಧಿಸಿ ವಿಚಾರಣೆ ನಡೆಸಿದಾಗ, ತಾನು ಮತ್ತು ಸ್ನೇಹಿತ, ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮರಿಸಿಂಗನಹಳ್ಳಿ ನಿವಾಸಿ ಯೋಗಾನಂದ್‌ ಅಲಿಯಾಸ್‌ ನೈಟ್‌ಶಿಫ್ಟ್‌ ಯೋಗಿ(32) ಸೇರಿ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದರು. ಬಳಿಕ ಆತನನ್ನು ಬಂಧಿಸಲಾಗಿತ್ತು’ ಎಂದು ಮೂಲಗಳು ಹೇಳಿವೆ.

‘ಬುಧವಾರ ಬೆಳಿಗ್ಗೆ ಪಟ್ಟಣದ ಪೊಲೀಸರು ಸುಲಿಗೆ ನಡೆಸಿದ ಸ್ಥಳ ಮಹಜರು ಮಾಡುವ ವೇಳೆ ಯೋಗಾನಂದ್‌ ತಪ್ಪಿಸಿಕೊಳ್ಳಲೆಂದು ಕಾನ್‌ಸ್ಟೆಬಲ್ ಹನುಮಂತ ಹಿಪ್ಪರಗಿ ಅವರ ಮೇಲೆ ಸಿಮೆಂಟ್‌ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ. ನಂತರ ಪರಾರಿಯಾಗಲು ಯತ್ನಿಸಿದ್ದಾನೆ. ಇನ್‌ಸ್ಪೆಕ್ಟರ್‌ ಶಶಿಧರ್‌ ಶರಣಾಗುವಂತೆ ಸೂಚಿಸಿದರೂ ಅವರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರೂ ಮತ್ತೆ ಹಲ್ಲೆಗೆ ಮುಂದಾದಾಗ, ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದು ಸರ್ಕಾರಿ ಆಸ್ಪತ್ರೆ
ಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಹನುಮಂತ ಹಿಪ್ಪರಗಿ ಕೂಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಯೋಗಾನಂದ್‌ ಮೇಲೆ ಕೊಲೆ, ಸುಲಿಗೆ, ದರೋಡೆ, ಕೊಲೆ ಯತ್ನ ಸೇರಿ 15ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿವೆ.

ಟೆಕ್ಕಿ ಆತ್ಮಹತ್ಯೆ– ಪತಿ ಬಂಧನ: ಸಾಫ್ಟ್‌ವೇರ್‌ ಎಂಜಿನಿಯರ್‌ ಶ್ವೇತಾ (27) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯ ಕಿರುಕುಳವೇ ಕಾರಣವೆಂದು ಆಪಾದಿಸಿ ಕುಟುಂಬಸ್ಥರು ರಾಮಮೂರ್ತಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಅಭಿಷೇಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ರಾಮಮೂರ್ತಿ ನಗರದ ರಿಚರ್ಡ್ ಗಾರ್ಡನ್‌ಲ್ಲಿ ಶ್ವೇತಾ ನೆಲೆಸಿದ್ದರು.

‘ಶ್ವೇತಾ ಅವರನ್ನು ಐಟಿಸಿ ಕಂಪನಿ ಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್‌ಗೆ 11 ತಿಂಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಶ್ವೇತಾ ಅವರು
ಐ.ಬಿ.ಎಂ ಕಂಪನಿ ಉದ್ಯೋಗಿ ಆಗಿದ್ದರು. ಅಭಿಷೇಕ್‌ ಅವರಿಗೆ ಮದುವೆಗೂ ಮೊದಲು ಯುವತಿಯೊಬ್ಬರ ಪರಿಚಯ ವಿತ್ತು. ವಿವಾಹದ ನಂತರವೂ ಈ ಸಂಬಂಧ ಮುಂದುವರಿದಿತ್ತು. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಕುಟುಂಬಸ್ಥರು ರಾಜಿ ಸಂಧಾನ ನಡೆಸಿದ್ದರು. ಈಚೆಗೆ ಗಲಾಟೆ ನಡೆದು ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಹಿಳೆಯರಿಗೆ ಆಮಿಷ– ಮೂವರ ಬಂಧನ: ನರ್ಸಿಂಗ್‌ ಸೆಂಟರ್‌ ಹೆಸರಿನಲ್ಲಿ ಮಹಿಳೆಯರನ್ನು ಸೆಳೆದು ಲಾಡ್ಜ್‌ಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ.

‘ಗಂಧರ್ವ ಡಿಲಕ್ಸ್ ಲಾಡ್ಜ್‌ನಲ್ಲಿ ಹೊರರಾಜ್ಯದ ಮಹಿಳೆಯರನ್ನು ಕರೆತಂದು ಹೆಚ್ಚಿನ ಹಣ, ಕೆಲಸ ನೀಡುವ ಆಮಿಷವೊಡ್ಡಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಲಾಡ್ಜ್‌ನ ಮಾಲೀಕ, ವ್ಯವಸ್ಥಾಪಕ ಹಾಗೂ ಮಧ್ಯವರ್ತಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT